ಕರ್ನಾಟಕ

karnataka

ETV Bharat / state

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿ ಮಾಡಿದ ಅಪರಾಧಿಗೆ 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ - MINOR RAPE CASE

ಅಪ್ರಾಪ್ತೆ ಮೇಲೆ ಅತ್ಯಾಚಾರ ಮಾಡಿ, ಗರ್ಭಿಣಿಯಾಗಲು ಕಾರಣನಾದ ಅಪರಾಧಿಗೆ ಕೋರ್ಟ್​​ 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.

DAVANAGERE  court
ದಾವಣಗೆರೆ ನ್ಯಾಯಾಲಯ (ETV Bharat)

By ETV Bharat Karnataka Team

Published : Jan 24, 2025, 7:42 PM IST

ದಾವಣಗೆರೆ:ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದ ಅಪರಾಧಿಗೆ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯವು 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ.

35 ವರ್ಷದ ವ್ಯಕ್ತಿಯೇ ಶಿಕ್ಷೆಗೆ ಗುರಿಯಾದ ಅಪರಾಧಿ. ಘಟ‌ನೆ ಸಂಬಂಧ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2021ರ ಫೆ.20ರಂದು ಸಂತ್ರಸ್ತೆಯು ಠಾಣೆಗೆ ಬಂದು ಆರೋಪಿ ಬಲವಂತವಾಗಿ ನಾಲ್ಕೈದು ಸಲ ಬಲಾತ್ಕಾರ ಮಾಡಿದ್ದಾನೆ ಎಂದು ದೂರು ನೀಡಿದ್ದರು. ವೈದ್ಯರ ಬಳಿ ಚೆಕಪ್​ ಮಾಡಿಸಿದಾಗ ಗರ್ಭಿಣಿ ಆಗಿರುವುದಾಗಿ ತಿಳಿದು ಬಂದಿದೆ. ತನ್ನೊಂದಿಗೆ ಬಲವಂತವಾಗಿ ದೈಹಿಕ ಸಂಪರ್ಕ ನಡೆಸಿದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಆಗ್ರಹಿಸಿದ್ದರು.

ಈ ಬಗ್ಗೆ ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಕಲಂ 376 ಐಪಿಸಿ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಬಲವಂತವಾಗಿ 03-04 ಬಾರಿ ದೈಹಿಕ ಸಂಪರ್ಕ ನಡೆಸಿರುವುದು ತನಿಖೆ ಹಾಗೂ ದಾಖಲೆಗಳಿಂದ ದೃಢಪಟ್ಟಿದೆ ಎಂದು ಕಲಂ 376(2)(ಟಿ) ಐಪಿಸಿ ಮತ್ತು 5 (ಐ), 6 ಪೋಕ್ಸೋ ಕಾಯ್ದೆಯಡಿ ಆರೋಪಿತನ ವಿರುದ್ಧ ನ್ಯಾಯಾಲಯಕ್ಕೆ ಅಂದಿನ ಪೊಲೀಸ್​ ಇನ್ಸ್​ಪೆಕ್ಟರ್​​ ದೇವರಾಜ್ ಟಿ.ವಿ. ಅವರು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಸಂಬಂಧ ದಾವಣಗೆರೆಯ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಎಫ್‌ಟಿಎಸ್‌ಸಿ-1 ನ್ಯಾಯಾಲಯ ವಿಚಾರಣೆ ನಡೆಸಿತ್ತು. ನ್ಯಾಯಾಧೀಶರಾದ ಶ್ರೀರಾಮ ನಾರಾಯಣ ಹೆಗಡೆ ಅವರು ಅತ್ಯಾಚಾರ ಅಪರಾಧ ಸಾಬೀತಾಗಿದ್ದರಿಂದ ಆರೋಪಿಗೆ 21 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 30 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದ್ದಾರೆ. ಅಪರಾಧಿಯು ಈಗಾಗಲೇ ನ್ಯಾಯಾಂಗ ಬಂಧನದಲ್ಲಿ ಇದ್ದುದ್ದರಿಂದ ಅದನ್ನು ಪರಿಗಣಿಸಿ, ಶಿಕ್ಷಾ ಅವಧಿಯನ್ನು ನಿರ್ಧರಿಸಲಾಗುತ್ತದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಅಪರಾಧಿಯಿಂದ ವಸೂಲಿ ಮಾಡಿದ ದಂಡದ ಒಟ್ಟೂ ಮೊತ್ತ 30 ಸಾವಿರ ರೂ.ಗಳನ್ನು ಪ್ರಕರಣದ ಸಂತ್ರಸ್ತೆಗೆ ನೀಡುವಂತೆ ಹಾಗೂ ಆಕೆಗೆ ಸರ್ಕಾರದಿಂದ 5 ಲಕ್ಷ ರೂ. ಪರಿಹಾರ ನೀಡುವಂತೆ ಕೋರ್ಟ್​​ ತೀರ್ಪು ನೀಡಿದೆ. ಪ್ರಕರಣದಲ್ಲಿ ಬಾಲಕಿ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ವಾದ ಮಂಡಿಸಿದ್ದರು.

ಇದನ್ನೂ ಓದಿ:ಬೆಂಗಳೂರು: ಅತ್ಯಾಚಾರ ಮಾಡಿ ಮಹಿಳೆಯ ಹತ್ಯೆ, ನಿರ್ಜನ ಪ್ರದೇಶದಲ್ಲಿ ಶವ ಪತ್ತೆ

ABOUT THE AUTHOR

...view details