ಕರ್ನಾಟಕ

karnataka

ETV Bharat / state

ಮೇ 14ರವರೆಗೂ ಹೆಚ್.ಡಿ.ರೇವಣ್ಣಗೆ ನ್ಯಾಯಾಂಗ ಬಂಧನ - H D REVANNA

ಎಸ್ಐಟಿ ಬಂಧನದಲ್ಲಿರುವ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಕೋರ್ಟ್​​ 7 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

hd revanna
ಹೆಚ್.ಡಿ.ರೇವಣ್ಣ (ETV Bharat)

By ETV Bharat Karnataka Team

Published : May 8, 2024, 3:50 PM IST

ಬೆಂಗಳೂರು:ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಎಸ್ಐಟಿಯಿಂದ ಬಂಧನಕ್ಕೊಳಗಾಗಿರುವ ಶಾಸಕ ಹಾಗೂ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಮೇ 14 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 17 ನೇ ಎಸಿಎಂಎಂ ಆದೇಶಿಸಿದೆ.

ಮೇ 4 ರಂದು ಬಂಧಿತರಾಗಿದ್ದ ಹೆಚ್.ಡಿ. ರೇವಣ್ಣ ಅವರನ್ನ ನಾಲ್ಕು ದಿನಗಳ ಕಾಲ ಎಸ್ಐಟಿ ವಶಕ್ಕೆ ನೀಡಲಾಗಿತ್ತು. ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಬುಧವಾರ ಅವರನ್ನು 17ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರಾದ ರವೀಂದ್ರಕುಮಾರ್ ಬಿ. ಕಟ್ಟಿಮನಿ ಅವರ ಮುಂದೆ ಹಾಜರುಪಡಿಸಲಾಗಿತ್ತು.

''ಎಸ್ಐಟಿ ವಶದಲ್ಲಿದ್ದಾಗ ಹೆಚ್.ಡಿ‌. ರೇವಣ್ಣ ತನಿಖಾಧಿಕಾರಿಗಳಿಗೆ ಸಹಕರಿಸದೇ ನಕಾರಾತ್ಮಕವಾಗಿ ಉತ್ತರ ನೀಡಿದ್ದಾರೆ. ಜಾಮೀನು ನೀಡಿದರೆ ಸಾಕ್ಷ್ಯಗಳನ್ನ ನಾಶಪಡಿಸಬಹುದು. ಆದ್ದರಿಂದ ನ್ಯಾಯಾಂಗ ಬಂಧನಕ್ಕೆ ನೀಡಬೇಕು'' ಎಂದು ಎಸ್ಐಟಿ ಪರ ವಕೀಲರು ವಾದ ಮಂಡಿಸಿದರು.

ಇದಕ್ಕೆ ಪ್ರತಿಯಾಗಿ ಸರ್ವೋಚ್ಚ ನ್ಯಾಯಾಲಯದ ತೀರ್ಪು ಉಲ್ಲೇಖಿಸಿ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ ಪರ ವಕೀಲರು, ''ತಪ್ಪೊಪ್ಪಿಗೆ ನೀಡಿಲ್ಲವೆಂದ ಮಾತ್ರಕ್ಕೆ ತನಿಖೆಗೆ ಅಸಹಕಾರ ನೀಡಿದ್ದಾರೆ ಎನ್ನಲು ಸಾಧ್ಯವಿಲ್ಲ, ಆದ್ದರಿಂದ ನ್ಯಾಯಾಂಗ ಬಂಧನಕ್ಕೆ ನೀಡಬಾರದು'' ಎಂದು ಮನವಿ ಸಲ್ಲಿಸಿದ್ದರು.

ಇದೇ ವೇಳೆ, ಪೊಲೀಸ್ ಕಸ್ಟಡಿಯಲ್ಲಿ ಏನಾದರೂ ತೊಂದರೆಯಾಯಿತೇ? ಎಂಬ ನ್ಯಾಯಾಧೀಶರ ಪ್ರಶ್ನೆಗೆ ''ನಾನು ಯಾವುದೇ ತಪ್ಪು ಮಾಡಿಲ್ಲ, ಮೂರು ದಿನಗಳಿಂದ ವಿಚಾರಣೆ ಮಾಡುತ್ತಿದ್ದಾರೆ. ಅನಾರೋಗ್ಯದ ಸಮಸ್ಯೆ ಇದ್ದರೂ ಸಹ ನನ್ನನ್ನು ಆಸ್ಪತ್ರೆಗೆ ದಾಖಲಿಸಲಿಲ್ಲ' ಎಂದು ಹೆಚ್.ಡಿ. ರೇವಣ್ಣ ಅಳಲು ತೋಡಿಕೊಂಡರು.

ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ:ಇದಕ್ಕೂ ಮುನ್ನ ಹೆಚ್‌.ಡಿ. ರೇವಣ್ಣ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಮೇ 9 ಕ್ಕೆ ಮುಂದೂಡಿಕೆ ಮಾಡಿದೆ. ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು ಆದೇಶಿಸಿದ್ದಾರೆ.

ಇದನ್ನೂ ಓದಿ:ರೇವಣ್ಣರನ್ನು ಆಸ್ಪತ್ರೆಗೆ ಕರೆದೊಯ್ದಿದ್ದ ಎಸ್ಐಟಿ, ಇಂದು ಪೊಲೀಸ್​ ಕಸ್ಟಡಿ ಅಂತ್ಯ - Woman Kidnap Case

ABOUT THE AUTHOR

...view details