ಬೆಂಗಳೂರು: ಸರ್ಕಾರವು ಟೆಂಡರ್ ಆಹ್ವಾನಕ್ಕೆ ತನ್ನದೇ ಆದ ಷರತ್ತುಗಳನ್ನು ವಿಧಿಸಬಹುದಾಗಿದ್ದು, ನ್ಯಾಯಾಂಗ ಪರಿಶೀಲನೆಯ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಹೈಕೋರ್ಟ್ ತಿಳಿಸಿದೆ. ಸಾರ್ವಜನಿಕ ಸ್ಥಳ ಮತ್ತು ಶೌಚಾಲಯ ಬಳಕೆಗೆ ಪ್ರತಿದಿನ ಮತ್ತು ವಾರದ ಶುಲ್ಕ ಸಂಗ್ರಹಿಸುವ ಟೆಂಡರ್ ಅನ್ನು ತಮಗೆ ಕೊಡುವಂತೆ ಕೋರಿ ಸಲ್ಲಿಸಿರುವ ಮನವಿ ಪರಿಗಣಿಸಲು ಬೆಳಗಾವಿಯ ಹಾರೂಗೇರಿ ಪುರಸಭೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಅಪ್ಪಾಸಾಬ್ ಎಂಬವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿದ್ದ ಧಾರವಾಡದ ನ್ಯಾಯಪೀಠ ಈ ಆದೇಶ ನೀಡಿದೆ.
ಪುರಸಭೆ ಕೈಗೊಂಡಿರುವ ಪ್ರಕ್ರಿಯೆಯ ನಿರ್ಧಾರ ಸಮರ್ಥನೀಯ, ತರ್ಕಬದ್ಧವಾಗಿದೆಯೇ ಅಥವಾ ಸ್ವೇಚ್ಛೆ ಮತ್ತು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆಯೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಬಹುದಾಗಿದೆ. ಸಂವಿಧಾನದ 226ನೇ ವಿಧಿಯಡಿ ವಿವೇಚನಾಧಿಕಾರ ಬಳಕೆ ಮಾಡುವಾಗ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಬೇಕೆ ವಿನಾ ಕಾನೂನಿನ ಅಂಶವಲ್ಲ. ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮಧ್ಯಪ್ರವೇಶದ ಅಗತ್ಯತೆಯನ್ನು ನ್ಯಾಯಾಲಯ ನಿರ್ಧರಿಸಬೇಕಾಗುತ್ತದೆ. ಬಿಡ್ಡರ್‌ಗಳು ಸಲ್ಲಿಸುವ ಮೊತ್ತವು ಪುರಸಭೆ ನಿರೀಕ್ಷೆಗೆ ತಕ್ಕಂತೆ ಇರದಿದ್ದರೆ ಮರು ಟೆಂಡರ್ ನಡೆಸುವ ಅಧಿಕಾರ ಪುರಸಭೆಗೆ ಇರಲಿದೆ. ಅಲ್ಲದೇ, ಪುರಸಭೆ ನಿಗದಿಪಡಿಸಿರುವ ಮೊತ್ತಕ್ಕಿಂತಲೂ ಕಡಿಮೆ ಟೆಂಡರ್ ಮೊತ್ತ ಸಲ್ಲಿಸಿರುವುದಾಗಿ ಅರ್ಜಿದಾರರು ಹೇಳಿದ್ದಾರೆ. ಹೀಗಾಗಿ, ಅವರು ಹಕ್ಕು ಪ್ರತಿಪಾದನೆ ಮಾಡಲಾಗದು. ಟೆಂಡರ್ ಒಪ್ಪುವ ವಿಚಾರ ಪುರಸಭೆಯ ವಿವೇಚನೆಗೆ ಬಿಟ್ಟಿದ್ದಾಗಿದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಹಾರೂಗೇರಿ ಪುರಸಭೆಯು ಟೆಂಡರ್ ಮೊತ್ತವು ಕನಿಷ್ಠ 12,40,300 ರೂಪಾಯಿ ಇರಬೇಕು ಎಂದು ಹೇಳಿದೆ. ಆದರೆ, ಅರ್ಜಿದಾರ 9,65,000 ರೂಪಾಯಿ ಮೊತ್ತದ ಮೂಲಕ ಅತಿ ಹೆಚ್ಚು ಬಿಡ್ ಕೂಗಿರುವುದು ತಾನೇ ಎಂದು ಹೇಳಿದ್ದಾರೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 2,75,300 ರೂಪಾಯಿ ನಷ್ಟವಾಗುತ್ತದೆ. ಇಂಥ ಸಂದರ್ಭದಲ್ಲಿ ಹೊಸದಾಗಿ ಟೆಂಡರ್ ಕರೆಯಲು ನಿರ್ಧರಿಸುವುದರಿಂದ ಅರ್ಜಿದಾರರ ಹಕ್ಕು ಕಡಿತವಾಗುವುದಿಲ್ಲ. ಹೊಸ ಟೆಂಡರ್ ಪ್ರಕ್ರಿಯೆಯಲ್ಲಿ ಅರ್ಜಿದಾರರು ಭಾಗವಹಿಸಬಹುದಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗದು. ಅಲ್ಲದೇ, ತಾನು ಕೂಗಿರುವ ಬಿಡ್ ಮೊತ್ತವನ್ನು ಒಪ್ಪಿಕೊಳ್ಳುವಂತೆ ಪುರಸಭೆಗೆ ನಿರ್ದೇಶಿಸಲಾಗದು ಎಂದು ತಿಳಿಸಿರುವ ನ್ಯಾಯಪೀಠ, ಅರ್ಜಿಯನ್ನು ತಿರಸ್ಕರಿಸಿದೆ.