ಉಡುಪಿ: ಅಂಬಲಪಾಡಿ ಗಾಂಧಿನಗರದ ಮನೆಯಲ್ಲಿ ಸೋಮವಾರ ಸಂಭವಿಸಿದ ಭೀಕರ ಅಗ್ನಿ ಅವಘಡ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಅಶ್ವಿನಿ ಶೆಟ್ಟಿ(43) ಇಂದು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ನಿನ್ನೆ ಬೆಳಗಿನ ಜಾವ ಮನೆಯಲ್ಲಿ ಮಲಗಿದ್ದ ವೇಳೆ ಶಾರ್ಟ್ ಸರ್ಕ್ಯೂಟ್‌ನಿಂದ ಉಂಟಾದ ಅಗ್ನಿ ಅವಘಡದಿಂದ ಮನೆಯೊಳಗೆ ಬೆಂಕಿ ಜೊತೆ ದಟ್ಟ ಹೊಗೆ ಆವರಿಸಿತ್ತು. ಪರಿಣಾಮ ತೀವ್ರವಾಗಿ ಅಸ್ವಸ್ಥಗೊಂಡ ಉದ್ಯಮಿ ರಮಾನಂದ ಶೆಟ್ಟಿ ಹಾಗೂ ಅಶ್ವಿನಿ ಶೆಟ್ಟಿ ದಂಪತಿಯನ್ನು ಮಣಿಪಾಲ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಇದರಲ್ಲಿ ಗಂಭೀರ ಸ್ಥಿತಿಯಲ್ಲಿದ್ದ ರಮಾನಂದ ಶೆಟ್ಟಿ ಸೋಮವಾರ ಬೆಳಗ್ಗೆಯೇ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದರು.
ಇತ್ತ ಗಂಭೀರ ಸ್ಥಿತಿಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದ ಅವರ ಪತ್ನಿ ಅಶ್ವಿನಿ ಶೆಟ್ಟಿ ಇಂದು ಮಧ್ಯಾಹ್ನ ವೇಳೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಅಗ್ನಿ ಅವಘಡದಿಂದ ದಂಪತಿ ದುರಂತ ಅಂತ್ಯ ಕಂಡಿದ್ದಾರೆ. ಇವರಿಬ್ಬರ ಅಂತ್ಯಕ್ರಿಯೆ ಆದಿ ಉಡುಪಿಯ ಪಂದು ಬೆಟ್ಟುವಿನಲ್ಲಿರುವ ರಮಾನಂದ ಶೆಟ್ಟಿ ಮೂಲ ಮನೆಯಲ್ಲಿ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.