ತುಮಕೂರು:ತಿಪಟೂರು ನಗರದ ಹಳೆಪಾಳ್ಯ ವ್ಯಾಪ್ತಿಯ ಲಂಬಾಣಿ ತಾಂಡಾದಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಧು ನಾಯಕ್ (38), ಪತ್ನಿ ಚರಿತಾ ಬಾಯಿ (36) ಸಾವನ್ನಪ್ಪಿದವರು. ಇವರಿಗೆ ಇಬ್ಬರು ಮಕ್ಕಳಿದ್ದಾರೆ. ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸಾರ್ವಜನಿಕ ಆಸ್ಪತ್ರೆಗೆ ಕಳುಹಿಸಿದ್ದಾರೆ.
ತುಮಕೂರು ಜಿಲ್ಲಾ ಅಪರ ವರಿಷ್ಠಾಧಿಕಾರಿ ಕೆ.ಮರಿಯಪ್ಪ, ಡಿವೈಎಸ್‌ಪಿ ವಿನಾಯಕ್ ಶೆಟ್ಟಿಗೇರಿ, ನಗರ ಠಾಣೆ ಇನ್ಸ್‌ಪೆಕ್ಟರ್ ರವಿ ಘಟನಾ ಸ್ಥಳ ಹಾಗು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಗು ರಕ್ಷಣೆ: ತುಮಕೂರು ಜಿಲ್ಲಾ ಪೊಲೀಸರು ಇತ್ತೀಚೆಗೆ ಮಾರಾಟವಾಗಿದ್ದ 9 ಮಕ್ಕಳನ್ನು ಪತ್ತೆ ಹಚ್ಚಿ ರಕ್ಷಿಸಿದ್ದರು. ಇದೀಗ ಮತ್ತೊಂದು ಮಗುವಿನ ಮಾರಾಟ ಪ್ರಕರಣ ಬೆಳಕಿಗೆ ಬಂದಿದ್ದು, ಮಗುವನ್ನು ರಕ್ಷಿಸಲಾಗಿದೆ. ನಗರದ 11 ವರ್ಷದ ಹೆಣ್ಣು ಮಗುವನ್ನು ಆಕೆಯ ಚಿಕ್ಕಮ್ಮನ ಮನೆಯವರು 35 ಸಾವಿರ ರೂಪಾಯಿಗೆ ಆಂಧ್ರ ಪ್ರದೇಶದ ಬಾತುಕೋಳಿ ವ್ಯಾಪಾರಿಗೆ ಮಾರಾಟ ಮಾಡಿದ್ದರು.
ಮಗು ಆಂಧ್ರಪ್ರದೇಶದ ಹಿಂದುಪುರಕ್ಕೆ ಚಿಕ್ಕಮ್ಮನ ಮನೆಗೆ ಹೋಗಿತ್ತು. ಆಗ ಚಿಕ್ಕಮ್ಮಳ ಅತ್ತೆ ಮಗುವನ್ನು ಮಾರಾಟ ಮಾಡಿದ್ದಾಳೆ. ಈ ಬಗ್ಗೆ ಪೋಷಕರು ಜುಲೈ 3ರಂದು ಜಿಲ್ಲಾ ಕಾರ್ಮಿಕಾಧಿಕಾರಿ ಕೆ.ತೇಜಾವತಿ ಅವರಿಗೆ ದೂರು ನೀಡಿದ್ದರು. ಕೂಡಲೇ ಅವರು ಎಸ್‌ಪಿ ಕೆ.ವಿ.ಅಶೋಕ್ ಅವರ ಗಮನಕ್ಕೆ ತಂದಿದ್ದು, ಮಗುವನ್ನು ರಕ್ಷಿಸುವಂತೆ ಎಸ್‌ಪಿ ನಗರ ಠಾಣೆಗೆ ಆದೇಶಿಸಿದ್ದಾರೆ. ಪಿಎಸ್‌ಐ ಮಂಜುಳಾ ಮತ್ತು ಸಿಬ್ಬಂದಿ ಭವಾನಿ, ಸಂತೋಷ್, ಮಲ್ಲೇಶ್ ಬಾಲಕಿಯನ್ನು ಪತ್ತೆ ಮಾಡಿ ರಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ:ತಹಶೀಲ್ದಾರ್ ಕಿರುಕುಳ ಆರೋಪ: ಮಹಿಳಾ ಗ್ರಾಮ ಲೆಕ್ಕಾಧಿಕಾರಿ ಆತ್ಮಹತ್ಯೆ ಯತ್ನ - Village Accountant Suicide Attempt