ಬೆಂಗಳೂರು:ಇಬ್ಬರು ಮಕ್ಕಳನ್ನು ಕೊಂದು ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯ ಆರ್‌ಎಂವಿ 2ನೇ ಹಂತದಲ್ಲಿರುವ ಮನೆಯೊಂದರಲ್ಲಿ ನಡೆದಿದೆ.
ಮೃತರನ್ನು ಅನೂಪ್ (38), ಅವರ ಪತ್ನಿ ರಾಖಿ (35), ಮತ್ತು ಐದು ಹಾಗೂ 2 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಸದಾಶಿವನಗರ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪ್ರಾಥಮಿಕ ತನಿಖೆಯಲ್ಲಿ ಮಕ್ಕಳಿಬ್ಬರಿಗೂ ವಿಷಪ್ರಾಶನ ಮಾಡಿದ ಬಳಿಕ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ ಎಂದು ತಿಳಿಸಿದ್ದಾರೆ.
ಡಿಸಿಪಿ ಶೇಖರ್ ಹೆಚ್.ಟಿ (ETV Bharat) ಉತ್ತರ ಪ್ರದೇಶದ ಅಲಹಾಬಾದ್ ಮೂಲದ ಅನೂಪ್, ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಂಗಳೂರಿನಲ್ಲಿ ವಾಸವಿದ್ದರು. ಖಾಸಗಿ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಕನ್ಸಲ್ಟೆಂಟ್ ಆಗಿ ಅನೂಪ್ ಕೆಲಸ ಮಾಡುತ್ತಿದ್ದರು. ಆರ್ಥಿಕ ನಷ್ಟದಿಂದ ಬೇಸತ್ತು ದಂಪತಿ ಆತ್ಮಹತ್ಯೆಗೆ ನಿರ್ಧರಿಸಿರಬಹುದು ಎಂದು ಶಂಕಿಸಲಾಗಿದೆ. ಸದ್ಯ ಘಟನಾ ಸ್ಥಳದಲ್ಲಿ ಸದಾಶಿವನಗರ ಠಾಣೆ ಪೊಲೀಸರು ಪರಿಶೀಲನೆ ನಡೆಸುತ್ತಿದ್ದು, ಮತ್ತಷ್ಟು ಮಾಹಿತಿ ನಿರೀಕ್ಷಿಸಲಾಗಿದೆ. ಮೃತರ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಸಂಜೆ ವೇಳೆಗೆ ಅವರು ಬೆಂಗಳೂರಿಗೆ ಬರುವ ನಿರೀಕ್ಷೆಯಿದೆ ಎಂದು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಹೆಚ್. ಟಿ. ಮಾಹಿತಿ ನೀಡಿದ್ದಾರೆ.
ದಂಪತಿ ಆತ್ಮಹತ್ಯೆ (ETV Bharat) ಬಾಡಿಗೆ ಮನೆಯ ಮಾಲಕಿ ಹೇಳಿದ್ದು ಹೀಗೆ; ಕಳೆದ ಎರಡು ವರ್ಷದ ಹಿಂದೆ ದಂಪತಿ ಮನೆ ಬಾಡಿಗೆಗೆ ಪಡೆದುಕೊಂಡಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಅನ್ಯೋನ್ಯವಾಗಿದ್ದರು. ಮಗಳಿಗೆ ಸ್ವಲ್ಪ ಮಾನಸಿಕ ಅಸಹಜತೆಯಿದೆ ಎಂಬ ನೋವು ದಂಪತಿಗಿತ್ತು. ಇಬ್ಬರೂ ಸಾಫ್ಟ್‌ವೇರ್ ಉದ್ಯೋಗಿಗಳು, ಮನೆಯಿಂದಲೇ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ಮೂವರು ಕೆಲಸದವರನ್ನ ನೇಮಿಸಿಕೊಂಡಿದ್ದರು. ಎರಡು ತಿಂಗಳ ಹಿಂದೆ ದಂಪತಿ ಕೆಲಸಕ್ಕೆ ರಾಜೀನಾಮೆ ನೀಡಿದ್ದರು. ಮಗಳಿಗೆ ಸೂಕ್ತ ಶಾಲೆ ಸೌಲಭ್ಯ ಸಿಕ್ಕ ನಂತರ ಪುಣೆಯಲ್ಲಿ ನೆಲೆಸುತ್ತೇವೆ ಎಂದು ಹೇಳಿಕೊಂಡಿದ್ದರು. 4 ವರ್ಷದ ಹಿಂದೆ ರಾಯ್ ಪುರ್‌ನಲ್ಲಿ ಖರೀದಿಸಿದ್ದ ಜಮೀನಿನ ವಿಚಾರದಲ್ಲಿ ಸಮಸ್ಯೆಯಿತ್ತು ಎಂದು ಹೇಳುತ್ತಿದ್ದರು. ಆದರೆ ಅದೇ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡರಾ ಅನ್ನೋದು ಗೊತ್ತಾಗುತ್ತಿಲ್ಲ. ನಂಬಲು ಕಷ್ಟವಾಗುತ್ತಿದೆ ಎಂದು ಮೃತರು ವಾಸವಿದ್ದ ಮನೆಯ ಮಾಲಕಿ ಚಂದ್ರಿಕಾ ತಿಳಿಸಿದ್ದಾರೆ.
ಇದನ್ನೂ ಓದಿ:ಕಾಶ್ಮೀರದಲ್ಲಿ ಕೊರೆಯುವ ಚಳಿ: ಉಸಿರುಗಟ್ಟಿ ದಂಪತಿ, ಮೂವರು ಮಕ್ಕಳು ದುರ್ಮರಣ