ದಾವಣಗೆರೆ :ಅರಣ್ಯ ಪ್ರದೇಶದಲ್ಲಿ ವನ್ಯ ಜೀವಿಗಳು ಎಷ್ಟರ ಮಟ್ಟಿಗೆ ಸುರಕ್ಷಿತ ಎಂಬ ಅನುಮಾನ ಪ್ರಾಣಿಪ್ರಿಯರನ್ನು ಕಾಡತೊಡಗಿದೆ. ಇದಕ್ಕೆ ಕಾರಣ ಪ್ರಾಣಿಗಳನ್ನು ಬೇಟೆ ಆಡಲು ಬೇಟೆಗಾರರು ನಾಡ ಬಾಂಬ್ಗಳನ್ನು ಬಳಕೆ ಮಾಡುತ್ತಿದ್ದಾರೆ. ಮೊನ್ನೆಯಷ್ಟೇ ಜಗಳೂರಿನ ರಂಗಯ್ಯನ ದುರ್ಗ ಕೊಂಡುಕುರಿ ವನ್ಯ ಧಾಮದಲ್ಲಿ ನಾಡ ಬಾಂಬ್ಗಳು ಪತ್ತೆಯಾಗಿದ್ದವು. ಈ ಘಟನೆ ಮಾಸುವ ಮುನ್ನವೇ ಇದೀಗ ದಾವಣಗೆರ ಜಿಲ್ಲೆಯ ನ್ಯಾಮತಿ ತಾಲೂಕಿನ ಫಲವನಹಳ್ಳಿ ಅರಣ್ಯ ಪ್ರದೇಶದಲ್ಲಿ ಬರೋಬ್ಬರಿ 32 ನಾಡ ಬಾಂಬ್ಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಕಳೆದ ದಿನ ರಾತ್ರಿ ನ್ಯಾಮತಿ ಉಪವಲಯ ಅರಣ್ಯಾಧಿಕಾರಿ ಬರ್ಕತ್ ಆಲಿ ಹಾಗೂ ಸಿಬ್ಬಂದಿ ಅರಣ್ಯ ವಲಯದಲ್ಲಿ ಬೀಟ್ ಹಾಕುವ ವೇಳೆ ಈ ಘಟನೆ ಬೆಳಕಿಗೆ ಬಂದಿದೆ. ಪ್ರಾಣಿಗಳನ್ನು ಕೊಲ್ಲುವ ಉದ್ದೇಶದಿಂದ ಈ 32 ನಾಡ ಬಾಂಬ್ಗಳನ್ನು ತರಲಾಗಿತ್ತು. ಇನ್ನೇನು ಬಾಂಬ್ಗಳನ್ನು ಇಡುವ ಸಂದರ್ಭದಲ್ಲಿ ಬರ್ಕತ್ ಆಲಿ ಅವರ ನೇತೃತ್ವದ ತಂಡ ಅನಾಹುತ ತಪ್ಪಿಸಿದೆ. ಇಬ್ಬರು ಖದೀಮರು ತಾವು ತಂದಿದ್ದ ನಾಡ ಬಾಂಬ್ಗಳನ್ನು ದ್ವಿಚಕ್ರ ವಾಹನಗಳಲ್ಲಿ ಬಿಟ್ಟು ಕಾಲ್ಕಿತ್ತಿದ್ದರು. ಅರಣ್ಯ ಇಲಾಖೆಯ ಸಿಬ್ಬಂದಿ ಸಿನಿಮಾ ಶೈಲಿಯಲ್ಲಿ ರೀತಿ ಚೇಸ್ ಮಾಡಿ ಇಬ್ಬರನ್ನು ಹಿಡಿದಿದ್ದಾರೆ. ಬಂಧಿತರನ್ನು ತಿಮ್ಮಪ್ಪ(48), ಗುಡ್ಡಪ್ಪ (40) ಎಂದು ಗುರುತಿಸಲಾಗಿದೆ. ಮತ್ತಿಬ್ಬರು ತಲೆಮರೆಸಿಕೊಂಡಿದ್ದಾರೆ.
ತಪ್ಪಿದ ಬಹುದೊಡ್ಡ ದುರಂತ, ನಾಂಡ ಬಾಂಬ್ ವಶಕ್ಕೆ : ಇಡೀ ಅರಣ್ಯ ಪ್ರದೇಶದಲ್ಲಿ ಈ ಬಾಂಬ್ಗಳನ್ನು ಇತರೆ ಸತ್ತ ಪ್ರಾಣಿಗಳ (ಕುರಿ) ಕರುಳಿನಲ್ಲಿ ಸುತ್ತಿ ಇಡಲಾಗುತ್ತದೆ. ಆ ನಾಡ ಬಾಂಬ್ನ್ನು ವನ್ಯ ಜೀವಿಗಳು ಸೇವಿಸಿದರೆ ಸ್ಫೋಟಗೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ. ಸ್ಫೋಟವಾದರೆ ಯಾವುದೇ ವನ್ಯಜೀವಿ ಸ್ಥಳದಲ್ಲೇ ಅಸುನೀಗುತ್ತದೆ. ಆಗ ಸುಲಭವಾಗಿ ಅದರ ಮಾಂಸ ದೊರೆಯಬಹುದೆಂದು ಪ್ರಾಣಿಗಳ ಹತ್ಯೆಗೆ ಸಂಚು ರೂಪಿಸಲಾಗುತ್ತಿತ್ತು ಎಂದು ಅಧಿಕಾರಿ ಬರ್ಕತ್ ಆಲಿ ಮಾಹಿತಿ ನೀಡಿದ್ದಾರೆ. ಬೇಟೆಗಾರರ ಸಂಚು ಯಶಸ್ವಿಯಾಗಿದ್ದರೆ ಇಡೀ ಅರಣ್ಯ ವಲಯದಲ್ಲಿ ಸಾಕಷ್ಟು ವನ್ಯ ಜೀವಿಗಳ ಹತ್ಯೆಯಾಗುತ್ತಿತ್ತು ಎಂದು ಅವರು ಮಾಹಿತಿ ನೀಡಿದ್ದಾರೆ. ಇಂತಹ ಬಹುದೊಡ್ಡ ಕೃತ್ಯವನ್ನು ಅರಣ್ಯ ಇಲಾಖೆ ತಪ್ಪಿಸಿದೆ ಎಂದರು.