ತುಮಕೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿದ್ದು, ಅವುಗಳ ನಿಯಂತ್ರಣಕ್ಕೆ ಪೂರಕವಾಗಿ ಸುಮಾರು 3000ಕ್ಕೂ ಹೆಚ್ಚು ಬೀದಿ ನಾಯಿಗಳಿಗೆ ಸಂತಾನ ಹರಣ ಶಸ್ತ್ರಚಿಕಿತ್ಸೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ನಗರದ ಹೊರವಲಯದ ಅಜ್ಜೇಗೌಡನ ಹಳ್ಳಿಯಲ್ಲಿ ವಿಶೇಷ ಚಿಕಿತ್ಸಾ ಘಟಕವನ್ನು ತೆರೆಯಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ತುಮಕೂರು ಮಹಾನಗರ ಪಾಲಿಕೆ ಆಯುಕ್ತೆ ಅಶ್ವಿಜ ತಿಳಿಸಿದ್ದಾರೆ.
ಸಂತಾನ ಹರಣ ಶಸ್ತ್ರ ಚಿಕಿತ್ಸೆ ಕೈಗೊಳ್ಳುವ ಮುನ್ನ ತೆಗೆದುಕೊಳ್ಳಬೇಕಾದಂತಹ ವೈದ್ಯಕೀಯ ಚಿಕಿತ್ಸಾ ಕ್ರಮಗಳಿಗೆ ಸಿದ್ಧತೆ ಅಗತ್ಯವಿದೆ. ಅದಕ್ಕಾಗಿ ವಿಶೇಷ ಸಿಬ್ಬಂದಿಯನ್ನು ಕೂಡ ನಿಯೋಜನೆ ಮಾಡಲಾಗುತ್ತಿದೆ. ಹತ್ತು ದಿನಗಳ ಒಳಗಾಗಿ ಈ ಕ್ರಮವನ್ನು ಜಾರಿಗೆ ತರಲಾಗುವುದು. ಅಲ್ಲದೇ ಇತ್ತೀಚೆಗೆ ನಾಯಿ ಕಡಿತಕ್ಕೆ ಒಳಗಾಗಿರುವಂತಹ ಮಗುವಿನ ಆರೋಗ್ಯದ ಕುರಿತಂತೆ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು. ಮಗುವಿಗೆ ಕಚ್ಚಿರುವ ನಾಯಿಗೆ ಯಾವುದೇ ರೀತಿಯ ರೇಬಿಸ್ ಕಾಯಿಲೆ ಇಲ್ಲ ಎಂಬುದನ್ನು ಕೂಡ ದೃಢಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.