ಬೆಂಗಳೂರು:ನಗರದಲ್ಲಿಕಾವೇರಿ 5ನೇ ಹಂತದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಜಲಮಂಡಳಿಗೆ ಅಗತ್ಯ ಸಹಕಾರ ನೀಡುವುದಾಗಿ ಟ್ರಾಫಿಕ್ ಪೊಲೀಸರು ಭರವಸೆ ನೀಡಿದ್ದಾರೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಜಲಮಂಡಳಿ ಅಧ್ಯಕ್ಷ ಡಾ.ವಿ.ರಾಮ್ ಪ್ರಸಾತ್ ಮನೋಹರ್ ತಿಳಿಸಿದರು.
ಶುಕ್ರವಾರ ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ಅವರಂದಿಗೆ ಸಭೆ ನಡೆಯಿತು. ನಗರದ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಕಾಮಗಾರಿಗಳು ಹಾಗೂ ಆ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಸಂಚಾರ ವಿಭಾಗದಿಂದ ಅಗತ್ಯವಿರುವ ಸಹಕಾರದ ಬಗ್ಗೆ ಚರ್ಚಿಸಲಾಯಿತು.
ಈ ಸಂದರ್ಭದಲ್ಲಿ ವಜ್ರಹಳ್ಳಿ 100 ಅಡಿ ರಸ್ತೆಯಿಂದ ಕನಕಪುರ ಮುಖ್ಯರಸ್ತೆಯ 112 ಮೀಟರ್‌ಗಳ ಪೈಪ್ ಲೈನ್ ಅಳವಡಿಸುವ ಕಾರ್ಯ, ಬನ್ನೇರುಘಟ್ಟ ಮುಖ್ಯ ರಸ್ತೆಯಿಂದ ಅಂಜನಾಪುರದ 80 ಫೀಟ್ ರಸ್ತೆಯಲ್ಲಿನ ಕಾಮಗಾರಿ, ಬನ್ನೇರುಘಟ್ಟ ಮುಖ್ಯರಸ್ತೆಯಿಂದ ಕೋಳಿಫಾರಂ ಗಾರೆ ರಸ್ತೆ ಜಂಕ್ಷನ್‌ನಲ್ಲಿ ನಡೆಸಬೇಕಾಗಿರುವ 78 ಮೀಟರ್‌ಗಳ ಪೈಪ್ ಲೈನ್ ಅಳವಡಿಕೆಯ ಕಾರ್ಯ, ಬಸಾಪುರ ಮುಖ್ಯ ರಸ್ತೆಯಲ್ಲಿ ಅಳವಡಿಸಬೇಕಾಗಿರುವ 394 ಮೀಟರ್ ಪೈಪ್‌ಲೈನ್ ಕಾಮಗಾರಿ, ಹೊಸ ರೋಡ್ ಜಂಕ್ಷನ್ ನಲ್ಲಿ 1.60 ಎಂ ಡಯಾ ಎಮ್ ಪೈಪ್‌ಲೈನ್ ಅಳವಡಿಕೆಯ ಕಾರ್ಯ, ಕುಡ್ಲು ರಸ್ತೆಯಲ್ಲಿ 200 ಮೀಟರ್ ಪೈಪ್ ಲೈನ್ ಅಳವಡಿಸುವ ಕಾರ್ಯ, ಮುನ್ನೇಕೊಳ್ಳಾಲ್ - ಹೆಚ್ ಎಎಲ್ ರಸ್ತೆಯ ಜಂಕ್ಷನ್ ನಲ್ಲಿ 450 ಮೀಟರ್ ಪೈಪ್‌ಲೈನ್ ಅಳವಡಿಕೆಯ ಕಾರ್ಯದ ಬಗ್ಗೆ ಮಾತುಕತೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಪ್ರಸಾತ್ ಮನೋಹರ್, ಬಹುತೇಕ ಕಾರ್ಯಗಳಿಗೆ ಈಗಾಗಲೇ ಬೆಂಗಳೂರು ಸಂಚಾರ ವಿಭಾಗ ಕಾಮಗಾರಿ ಪೂರ್ಣಗಳಿಸಲು ಅಗತ್ಯ ಸಹಕಾರ ನೀಡುತ್ತಿದೆ. ಇನ್ನು ಕೆಲವು ರಸ್ತೆಗಳಲ್ಲಿ ಸಂಚಾರವನ್ನು ನಿಲ್ಲಿಸುವ ಹಾಗೂ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಈ ನಿಟ್ಟಿನಲ್ಲಿ ಇಂದು ವಿಸ್ತ್ರುತವಾಗಿ ಚರ್ಚಿಸಲಾಯಿತು. ಬೆಂಗಳೂರು ಸಂಚಾರ ವಿಭಾಗ ಇದಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಭರವಸೆಯನ್ನು ನೀಡಿದ್ದು, ಏಪ್ರಿಲ್ ತಿಂಗಳಾಂತ್ಯಕ್ಕೆ ಪೈಪ್‌ಲೈನ್ ಅಳವಡಿಕೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ :4,000 ನಲ್ಲಿಗಳಿಗೆ ಏರಿಯೇಟರ್ ಅಳವಡಿಕೆ: ಜಲಮಂಡಳಿ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ - aerators installed