ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (ETV Bharat) ಮಂಗಳೂರು:ರಾಜ್ಯದಲ್ಲಿನ ಅಂಗನವಾಡಿಗಳನ್ನು 'ಗವರ್ನಮೆಂಟ್ ಮಾಂಟೆಸ್ಸರಿ' ಎಂದು ಬದಲಾವಣೆ ಮಾಡಲಾಗುತ್ತಿದೆ. ಪ್ರಥಮ ಹಂತದಲ್ಲಿ 20 ಸಾವಿರ ಅಂಗನವಾಡಿಗಳನ್ನು 'ಗವರ್ನಮೆಂಟ್ ಮಾಂಟೆಸ್ಸರಿ' ಎಂದು ಮಾಡುತ್ತೇವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಾಗಲೇ ಈ ಪ್ರಕ್ರಿಯೆ ಶುರು ಮಾಡಿದ್ದೇವೆ. ರಾಜ್ಯದಲ್ಲಿ ಸುಮಾರು 70 ಸಾವಿರ ಅಂಗನವಾಡಿಗಳಿವೆ. ಪ್ರಥಮ ಹಂತದಲ್ಲಿ 20 ಸಾವಿರ ಅಂಗನವಾಡಿಗಳನ್ನು 'ಗವರ್ನಮೆಂಟ್ ಮಾಂಟೆಸ್ಸರಿ' ಎಂದು ಮಾಡುತ್ತೇವೆ. ಮಾಂಟೆಸ್ಸರಿ ಮಾಡಿದ ಮೇಲೆ ಕಲಿಸುವ ಶಿಕ್ಷಕರ ವಿದ್ಯಾರ್ಹತೆ ಚೆನ್ನಾಗಿರಬೇಕು. ಇಲಾಖೆಯಲ್ಲಿ 15 ಸಾವಿರ ಅಂಗನವಾಡಿ ಕಾರ್ಯಕರ್ತರು ಪದವಿ ಮಾಡಿದವರಿದ್ದಾರೆ. 2 ಸಾವಿರ ಸ್ನಾತಕೋತ್ತರ ಪದವಿ ಮಾಡಿದವರಿದ್ದಾರೆ. ಇಂತಹವರನ್ನು ಗುರುತಿಸಿ ಅವರಿಗೆ ತರಬೇತಿ ನೀಡಿ 'ಗವರ್ನಮೆಂಟ್ ಮಾಂಟೆಸ್ಸರಿ' ಅಂತಾ ಮಾಡ್ತೇವೆ ಎಂದರು.
ಕೇಂದ್ರ, ರಾಜ್ಯ ಸರ್ಕಾರ ಜಂಟಿಯಾಗಿ ಸ್ಮಾರ್ಟ್ ಕ್ಲಾಸ್ ಅಂತಾ ಮಾಡ್ತೀವಿ. ಕೇಂದ್ರ ಸರ್ಕಾರದ ಮಹಿಳಾ ಮಕ್ಕಳ ಕಲ್ಯಾಣ ಸಚಿವರು ಸಾಥ್ ನೀಡಿದ್ದಾರೆ. ಇಲಾಖೆಯ ಅಧಿಕಾರಿಗಳು ಸಹ ಒಪ್ಪಿಗೆ ಕೊಟ್ಟಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡು ಕಲಿಯುವ ಅವಕಾಶವಿದೆ ಎಂದು ತಿಳಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಬಗ್ಗೆ ಇಡಿ ತನಿಖೆ ನಡೆಸುತ್ತಿದೆ. ಕರ್ನಾಟಕ ಸರ್ಕಾರದಿಂದ ನಾವು ಎಸ್ಐಟಿ ರಚನೆ ಮಾಡಿ ತನಿಖೆ ಮಾಡ್ತಿದ್ದೇವೆ. ಈ ಸಂದರ್ಭ ನಾನು ಏನೋ ಹೇಳಿ ರಾದ್ಧಾಂತ ಆಗುವುದು ಬೇಡ. ತನಿಖೆ ಪೂರ್ಣವಾದ ಬಳಿಕ ಆ ಬಗ್ಗೆ ಮಾತನಾಡುವೆ. ವಿರೋಧ ಪಕ್ಷದಲ್ಲಿರುವವರು ಮಾಡಬಾರದಂತಹ ಹಗರಣ ಮಾಡಿದ್ದಾರೆ. ಹೀಗಾಗಿ 60 ಸಂಖ್ಯೆಗೆ ಬಂದು ನಿಂತುಕೊಂಡಿದ್ದಾರೆ. ರಾಜ್ಯದ ಜನರ ಮುಂದೆ ಏನೋ ಹೋರಾಟ ಮಾಡಬೇಕೆಂದು ಮಾಡ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದೇವೆಂದು ತೋರಿಸೋದಕ್ಕೆ ಮಾಡ್ತಿದ್ದಾರೆ. ನಮ್ಮ ಜೊತೆಯು ಕಾನೂನಿನ ಪಂಡಿತರಿದ್ದಾರೆ. ಅವರ ಬಳಿ ಕೇಳಿದಾಗ ಈ ಮುಡಾ ಹಗರಣದಲ್ಲಿ ಯಾವುದೇ ಹುರುಳಿಲ್ಲವೆಂದು ಗೊತ್ತಾಗಿದೆ. ರಾಜಕೀಯ ದುರುದ್ದೇಶದಿಂದ ಮುಖ್ಯಮಂತ್ರಿಗಳ ವಿರುದ್ಧ ಆರೋಪ ಮಾಡ್ತಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ:ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕು, ಬಿಜೆಪಿಗರ ವಿರುದ್ಧವೂ ಕ್ರಮ ಕೈಗೊಳ್ಳಿ: ಕೇಂದ್ರ ಸಚಿವ ಜೋಶಿ - Muda Scam