ಬೆಳಗಾವಿ: ಸಂಭಾಜಿ ಮಹಾರಾಜರ ಪ್ರತಿಮೆ ಅನಾವರಣ ವಿಚಾರ ಈಗ ಬೆಳಗಾವಿಯಲ್ಲಿ ವಿವಾದದ ಸ್ವರೂಪ ಪಡೆದಿದೆ. ಶಾಸಕ ಅಭಯ್ ಪಾಟೀಲ್ ಮತ್ತು ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಅಧ್ಯಕ್ಷ ರಮಾಕಾಂತ ಕೊಂಡೂಸ್ಕರ್ ಬೆಂಬಲಿಗರ ಮಧ್ಯೆ ಜಟಾಪಟಿ ಏರ್ಪಟ್ಟಿದೆ.
ನಗರದ ಅನಗೋಳದ ಧರ್ಮವೀರ ಸಂಭಾಜಿ ವೃತ್ತದಲ್ಲಿ 21 ಅಡಿ ಎತ್ತರದ ಪ್ರತಿಮೆಯನ್ನು ಜನವರಿ 5ರಂದು ಲೋಕಾರ್ಪಣೆ ಮಾಡುವ ಕುರಿತು ಮೇಯರ್ ಸವಿತಾ ಕಾಂಬಳೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.
ಆದರೆ, ಅದಕ್ಕೂ ಮೊದಲೇ ಗುರುವಾರ ಬೆಳಗ್ಗೆಯೇ ಪ್ರತಿಮೆ ಅನಾವರಣ ಸ್ಥಳಕ್ಕೆ ಮೇಯರ್ ಸವಿತಾ ಕಾಂಬಳೆ, ಉಪಮೇಯರ್ ಆನಂದ ಚವ್ಹಾಣ್ ಸೇರಿ ಮುಂತಾದವರು ಆಗಮಿಸಿದ್ದರು. ಅಲ್ಲದೇ, ಪ್ರತಿಮೆಯ ಸ್ಥಳದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಶ್ರೀರಾಮ ಸೇನೆ ಹಿಂದೂಸ್ತಾನ್ ಸಂಘಟನೆ ಕಾರ್ಯಕರ್ತರು ಮತ್ತು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಇಂಥ ಸಂದರ್ಭದಲ್ಲಿ ಪ್ರತಿಮೆ ಉದ್ಘಾಟಿಸುವುದು ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.