ಉಡುಪಿ: ಜಿಲ್ಲೆಯಾದ್ಯಂತ ಸತತ ಮಳೆಯಾಗುತ್ತಿದೆ. ಮಳೆಯೊಂದಿಗೆ ಗಾಳಿ ಇಲ್ಲದ ಕಾರಣ ನೆರೆ ಭೀತಿ ಇಲ್ಲವಾಗಿದೆ. ಹೀಗಾಗಿ ನದಿಗಳಲ್ಲಿ ನೀರಿನ ಮಟ್ಟ ಇಳಿಮುಖವಾಗಿದೆ. ಆದರೆ ಮಳೆ ಬಿಟ್ಟು ಬಿಟ್ಟು ನಿರಂತರವಾಗಿ ಸುರಿಯುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 93.4 ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 117.7, ಹೆಬ್ರಿಯಲ್ಲಿ 107.7, ಬೈಂದೂರಿನಲ್ಲಿ 97.7, ಬ್ರಹ್ಮಾವರದಲ್ಲಿ 97.0, ಕಾರ್ಕಳದಲ್ಲಿ 87.7, ಕುಂದಾಪುರದಲ್ಲಿ 82.6 ಹಾಗೂ ಕಾಪುವಿನಲ್ಲಿ 77.4 ಮಿ.ಮೀ. ಮಳೆ ಸುರಿದಿದೆ.
ದಿನದಲ್ಲಿ ನಾಲ್ಕು ಮನೆ ಹಾನಿಯ ಪ್ರಕರಣ ವರದಿಯಾಗಿದ್ದು, ಒಟ್ಟು 1.10 ಲಕ್ಷ ರೂ.ಗಳ ನಷ್ಟದ ಅಂದಾಜು ಮಾಡಲಾಗಿದೆ. ಕುಂದಾಪುರದ ಹಳನಾಡಿನ ವನಜ ದೇವಾಡಿಗರ ಮನೆ ಮೇಲೆ ಮರ ಬಿದ್ದು ಹಾನಿಯಾದರೆ, ಬೆಳ್ಳಾಲದಲ್ಲಿ ಸರೋಜ ಶೆಡ್ತಿ ಅವರ ಮನೆ ಮಳೆಯಿಂದ ಭಾಗಶಃ ಹಾನಿಯಾಗಿದೆ. ಕಾರ್ಕಳದ ಬೋಳ ಗ್ರಾಮದಲ್ಲಿ ನಾರಾಯಣ ಹರಿಜನ ಹಾಗೂ ಕಣಜಾರಿನ ಕಲ್ಯಾಣಿ ಅವರ ಮನೆಗೆ ತಲಾ 30,000 ರೂ.ನಷ್ಟದ ಅಂದಾಜು ಮಾಡಲಾಗಿದೆ.
ಪ್ರವಾಸಿಗರಿಗೆ ಬುದ್ಧಿಮಾತು ಹೇಳಿದ ಎಸ್ಐ:ನಿರಂತರ ಸುರಿಯುತ್ತಿರುವ ಮಳೆಯಿಂದ ಪ್ರಕ್ಷುಬ್ಧಗೊಂಡ ಮರವಂತೆ ಬೀಚ್ನಲ್ಲಿ ಮೋಜು ಮಾಡುತ್ತಿದ್ದ ಪ್ರವಾಸಿಗರಿಗೆ ಗಂಗೊಳ್ಳಿ ಠಾಣೆ ಸಬ್ ಇನ್ಸ್ಪೆಕ್ಟರ್ ಹರೀಶ್ ಆರ್. ಬುದ್ಧಿ ಮಾತಿನೊಂದಿಗೆ ಎಚ್ಚರಿಕೆ ನೀಡಿ ಕಳುಹಿಸಿರುವ ಘಟನೆ ನಡೆದಿದೆ. ಮಳೆಗಾಲದಲ್ಲಿ ಮರವಂತೆ ಸಮುದ್ರದ ನೀರಿಗೆ ಇಳಿಯದಂತೆ ಪೊಲೀಸರು ಹಲವು ಮುಂಜಾಗೃತಾ ಕ್ರಮ ಕೈಗೊಂಡಿದ್ದು, ಸೂಚನಾ ಫಲಕ ಅಳವಡಿಸಿದ್ದಾರೆ. ಸಿಬ್ಬಂದಿಯನ್ನು ಕೂಡ ನಿಯೋಜಿಸಲಾಗಿದೆ. ಆದರೆ ಪೊಲೀಸ್ ಸಿಬ್ಬಂದಿ, ಕರಾವಳಿ ಕಾವಲು ಪಡೆ, ಗಸ್ತಿನವರು, ಹೋಂ ಗಾರ್ಡ್ ಸಿಬ್ಬಂದಿ ಸಹಿತ ಸಾರ್ವಜನಿಕರು ಎಷ್ಟೇ ಮಾಹಿತಿ, ಎಚ್ಚರಿಕೆ ನೀಡಿದರೂ ಕೂಡ ಪ್ರವಾಸಿಗರು ಮಾತ್ರ ಸೆಲ್ಫಿ ಕ್ರೇಜ್ ಬಿಡುತ್ತಿಲ್ಲ.
ಪ್ರವಾಸಿಗರು ಮಿತಿ ಮೀರಿ ವರ್ತಿಸಿದಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ದಡದಲ್ಲಿಯೇ ನಿಂತು ಫೋಟೋ ಕ್ಲಿಕ್ಕಿಸಿಕೊಂಡು ದೂರದಿಂದಲೇ ಬೀಚ್ ನೋಡಿಕೊಂಡು ಹೋಗಿ ಎಂದು ಮನದಟ್ಟು ಮಾಡುತ್ತಿದ್ದಾರೆ.