ಉಡುಪಿ:ಜಿಲ್ಲೆಯಲ್ಲಿ ವರುಣನ ಅಬ್ಬರ ಮುಂದುವರೆದಿದೆ. ಭಾರಿ ಮಳೆಗೆ ಜಿಲ್ಲೆಯ ವಿವಿಧೆಡೆ ಅಪಾರ ಹಾನಿ ಕೂಡ ಸಂಭವಿಸಿದೆ. ಕಾರ್ಕಳ ತಾಲೂಕಿನ ರೆಂಜಾಳದಲ್ಲಿ ದಾಖಲೆಯ 319.5 ಮಿ.ಮೀಟರ್, ಕಾರ್ಕಳದ ಸಾಣೂರು ಗ್ರಾಮದಲ್ಲಿ 290 ಮಿ.ಮೀ, ಕುಂದಾಪುರ ತಾಲೂಕಿನ ಮಡಾಮಕ್ಕಿಯಲ್ಲಿ 279 ಮಿ.ಮೀ, ಹೆಬ್ರಿ ತಾಲೂಕಿನಲ್ಲಿ 127 ಮಿ.ಮೀ, ಕಾರ್ಕಳ ತಾಲೂಕಿನಲ್ಲಿ 120 ಮಿ.ಮೀ, ಉಡುಪಿ ಜಿಲ್ಲೆಯ ಸರಾಸರಿ 97 ಮಿ.ಮೀ, ಕುಂದಾಪುರ ತಾಲೂಕಿನಲ್ಲಿ 90 ಮಿ.ಮೀ. ಮಳೆಯಾಗಿದೆ.
ಭಾರಿ ಮಳೆಯಿಂದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿದ ಪರಿಣಾಮ ನೆರೆ ಪರಿಸ್ಥಿತಿ ಎದುರಾಗಿದೆ. ಬೈಂದೂರು, ಕುಂದಾಪುರ, ಬ್ರಹ್ಮಾವರ ತಾಲೂಕಿನಾದ್ಯಂತ ಗಾಳಿ ಸಹಿತ ಮಳೆ ಮುಂದುವರಿದಿದೆ. ಒಟ್ಟು 12 ಮನೆಗಳಿಗೆ ಹಾನಿಯಾಗಿದ್ದು, ಅಂದಾಜು 11 ಲಕ್ಷ ರೂ.ಗಳ ನಷ್ಟವಾಗಿದೆ. ಜಿಲ್ಲೆಯ ಕಾರ್ಕಳದಲ್ಲಿ 3 ಮನೆಗಳು, ಕಾಪುವಿನಲ್ಲಿ ಒಂದು, ಬ್ರಹ್ಮಾವರದಲ್ಲಿ 2, ಕುಂದಾಪುರದಲ್ಲಿ 6 ಸೇರಿದಂತೆ ಒಟ್ಟು 12 ಮನೆಗಳು ಹಾನಿಯಾಗಿರುವ ಕುರಿತು ವರದಿಯಾಗಿದೆ.
ಮನೆಗಳು ಜಲಾವೃತ, ವಿದ್ಯುತ್ ಸಂಪರ್ಕ ಖಡಿತ:ಕುಂದಾಪುರ, ಬೈಂದೂರು ಹಾಲಾಡಿ, ಶಿರಿಯಾರ, ಸಾಬ್ರೈಕಟ್ಟೆ, ತೆಕ್ಕಟ್ಟೆ, ಕೋಟ, ಗಿಳಿಯಾರು, ಸಾಲಿಗ್ರಾಮ ಸೇರಿದಂತೆ ವಿವಿಧ ಭಾಗದಲ್ಲಿನ ಮನೆಗಳು ಜಲಾವೃತವಾಗಿದೆ. ಅಬ್ಬರದ ಮಳೆಗೆ ಕೃಷಿ ಜಮೀನುಗಳು ಸಂಪೂರ್ಣ ಜಲಾವೃತಗೊಂಡಿದ್ದು, ರೈತ ಬೆಳೆದ ಸಂಪೂರ್ಣ ಬೆಳೆ ಹಾನಿಯಾಗಿದೆ. ಬಿಟ್ಟೂ ಬಿಡದೇ ಸುರಿಯುತ್ತಿರುವ ಮಳೆಗೆ ವಿದ್ಯುತ್ ಸಂಪರ್ಕ ಖಡಿತಗೊಂಡಿದೆ.