ಕರ್ನಾಟಕ

karnataka

By ETV Bharat Karnataka Team

Published : Jun 30, 2024, 1:04 PM IST

ETV Bharat / state

ಸಿರಿಧಾನ್ಯ ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕೊರತೆ, ಪ್ರೋತ್ಸಾಹಧನ ಯೋಜನೆ ಮುಂದುವರೆಸಲು ಚಿಂತನೆ - Chaluvarayaswamy

ಪ್ರತಿ ಜಿಲ್ಲೆಯಲ್ಲೂ 2 ದಿನಗಳ ಸಿರಿಧಾನ್ಯ ಮೇಳ ಏರ್ಪಡಿಸುವ ಜೊತೆಗೆ ವಿದೇಶದಲ್ಲಿ ನಡೆಯುವ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ರಾಜ್ಯದಿಂದ ಮಳಿಗೆ ಹಾಕಲು ಸಹ ನೆರವು ಒದಗಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.

Minister N Chaluvarayaswamy  Bengaluru  N Chaluvarayaswamy
ಕೃಷಿ ಸಚಿವ ಎನ್. ಚಲುವರಾಯಸ್ವಾಮಿ (ETV Bharat)

ಬೆಂಗಳೂರು:''ಸಿರಿಧಾನ್ಯಗಳ ಕೃಷಿಯು ಕೇವಲ ಸಾಂಪ್ರದಾಯಿಕ ಕೃಷಿಯಲ್ಲ. ಇದೊಂದು ವಿಶೇಷ ಮತ್ತು ವಿಶಿಷ್ಟ ಕೃಷಿಯಾಗಿದೆ. ಈಗೆಲ್ಲಾ ಒಂದು ಪ್ರದೇಶದಲ್ಲಿ ಒಂದೇ ಬೆಳೆಯನ್ನು ಬೆಳೆಯುತ್ತಾರೆ. ಹಿಂದೆಲ್ಲಾ ಒಂದೇ ಕಾಲದಲ್ಲಿ ಒಂದೇ ಪ್ರದೇಶದಲ್ಲಿ ಇಂತಹ ಕನಿಷ್ಠ ಹತ್ತು ಬೆಳೆಗಳನ್ನು ಬೆಳೆಯುತ್ತಿದ್ದರು. ಆಗ ಅಕ್ಕಿ, ಗೋಧಿಗಿಂತಲೂ ನವಣೆ, ಸಜ್ಜೆಯ ಸೇವನೆಯೇ ಹೆಚ್ಚಾಗಿತ್ತು. ಮಳೆ ಕಡಿಮೆಯಾದರೂ, ಬಿಸಿಲು ಹೆಚ್ಚಾದರೂ ಯಾವ ಸಮಯದಲ್ಲಾದರೂ ಸಿರಿಧಾನ್ಯಗಳನ್ನು ಬೆಳೆಯಬಹುದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸಿರಿಧಾನ್ಯಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಬೇಕು ಎಂದಿಲ್ಲ'' ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

''ಇಂತಹ ವಿಶಿಷ್ಟ ಗುಣಗಳಿಂದಲೇ ಸಿರಿಧಾನ್ಯಗಳು ರೈತರಿಗೆ ವರದಾನವಾಗಿರುವ ಬೆಳೆಗಳಾಗಿವೆ. ಈ ಧಾನ್ಯಗಳನ್ನು ಬೆಳೆಯಲು ರೈತರು ರಾಸಾಯನಿಕ ಗೊಬ್ಬರವನ್ನು ನೆಚ್ಚಿಕೊಂಡಿಲ್ಲ. ಕೊಟ್ಟಿಗೆ ಗೊಬ್ಬರ, ತರಗೆಲೆ ಗೊಬ್ಬರ ಬಳಸಿ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. ಇದರಿಂದ ಹಣ ಉಳಿಯುತ್ತದೆ. ಜೊತೆಗೆ ರಸಗೊಬ್ಬರ ಬಳಸದಿರುವುದರಿಂದ ಕೀಟಗಳ ತೊಂದರೆ ಇರುವುದಿಲ್ಲ. ಹಾಗಾಗಿ ಈ ಬೆಳೆಗಳನ್ನು ಕೀಟಮುಕ್ತ ಬೆಳೆಗಳು ಎನ್ನಬಹುದು. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಇರುವುದರಿಂದ ಪರಿಸರದ ಮೇಲೂ ಕೆಟ್ಟಪರಿಣಾಮ ಬೀರುವುದಿಲ್ಲ. ಜೊತೆಗೆ ಜನರಿಗೆ ಆಹಾರ ಮತ್ತು ಪಶುಗಳ ಮೇವಿನ ಬೆಳೆಯಾಗಿರುವ ಈ ಧಾನ್ಯಗಳನ್ನು ಬೆಳೆಯಲು ಹೆಚ್ಚಿನ ನೀರು, ಗೊಬ್ಬರ ಮತ್ತು ಆರೈಕೆಯ ಅವಶ್ಯಕತೆ ಇರುವುದಿಲ್ಲ. ಮಳೆಯಾಧಾರಿತವಾಗಿ ಹಾಗೂ ಎಲ್ಲಾ ಹವಾಮಾನಕ್ಕೂ ಹೊಂದಿಕೊಳ್ಳುವ ಬೆಳೆಗಳೆಂದರೆ ಅದು ಸಿರಿಧಾನ್ಯಗಳು'' ಎಂದು ತಿಳಿಸಿದರು.

''ಸಿರಿ ಧಾನ್ಯ ಬೇಡಿಕೆ ಹೆಚ್ಚಿದ್ದರೂ ಪೂರೈಕೆ ಕೊರತೆ ಇದೆ. ಹಾಗಾಗಿ ಪ್ರೋತ್ಸಾಹ ಧನ ಯೋಜನೆ ಮುಂದುವರೆಸುವ ಜೊತೆಗೆ ಉತ್ಪಾದನೆಯನ್ನು 30 ಸಾವಿರದಿಂದ 50 ಸಾವಿರ ಹೆಕ್ಟೇರ್​ಗೆ ಏರಿಕೆ ಮಾಡಲು ಸೂಕ್ತ ಯೋಜನೆ ರೂಪಿಸಲು ಸರ್ಕಾರ ಮುಂದಾಗಿದೆ. ರಾಜ್ಯದಲ್ಲಿ ಸ್ಥಾಪಿಸಲಾಗಿರುವ ಪುಡ್ ಪಾರ್ಕ್​ಗಳ ಪುನಶ್ಚೇತನ ಹಾಗೂ ಸಿರಿಧಾನ್ಯಗಳಿಗೆ ಸಂಬಂಧಿತ ಕಾರ್ಯಾಚರಣೆಯಲ್ಲಿರುವ ಸ್ಟಾರ್ಟ್ ಅಪ್ ಉದ್ಯಮಗಳಿಗೆ ಇಲಾಖೆ ಸಹಭಾಗಿತ್ವದಲ್ಲಿ ರೈತರೊಂದಿಗೆ ಸಂಪರ್ಕಿಸುವ ಕುರಿತು ಸಚಿವರು ಇತ್ತೀಚೆಗೆ ಸಭೆ ನಡೆಸಿದರು.

ಸಿರಿಧಾನ್ಯ ಆಧಾರಿತ ಉದ್ಯಮಗಳನ್ನು ಬಲ ಪಡಿಸಲು ಅಗತ್ಯ ಇರುವ ಸರ್ಕಾರದ ನೆರವಿನ ಕುರಿತು ಸ್ಟಾರ್ಟಪ್ ಉದ್ಯಮಿಗಳ ಅಭಿಪ್ರಾಯವನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಪಡೆದುಕೊಂಡಿದ್ದಾರೆ. ರೈತರೊಂದಿಗೆ ಉದ್ದಿಮೆದಾರರ ನೇರ ಖರೀದಿ ವ್ಯವಸ್ಥೆ ಮಾಡಿಸುವ ಬಗ್ಗೆ ಚಿಂತನೆ ನಡೆಸಿ, ರಾಜ್ಯಾದ್ಯಂತ ಇರುವ ಎಫ್.ಪಿ.ಓಗಳ ಜೊತೆ ಉದ್ದಿಮೆದರರ ಸಂಪರ್ಕ ಕಲ್ಪಿಸಲು ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದ್ದಾರೆ.

ಪ್ರತಿ ಜಿಲ್ಲೆಯಲ್ಲೂ 2 ದಿನಗಳ ಸಿರಿಧಾನ್ಯ ಮೇಳ: ಪ್ರತಿ ಜಿಲ್ಲೆಯಲ್ಲೂ 2 ದಿನಗಳ ಸಿರಿಧಾನ್ಯ ಮೇಳ ಏರ್ಪಡಿಸುವ ಜೊತೆಗೆ ವಿದೇಶದಲ್ಲಿ ನಡೆಯುವ ಆಹಾರ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಗಳಲ್ಲಿ ರಾಜ್ಯದಿಂದ ಮಳಿಗೆ ಹಾಕಲು ಸಹ ನೆರವು ಒದಗಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸಿದೆ. ಪ್ರಸಕ್ತ ಮಿಲೆಟ್ ಪೌಡರ್​​ಗಳಿಗೆ ಜಿ.ಎಸ್.ಟಿ ಯನ್ನು ಶೇ 18 ರಿಂದ 5 ಕ್ಕೆ ಇಳಿಕೆ ಮಾಡಿರುವಂತೆ ಇದನ್ನು ಇತರ ಮೌಲ್ಯವರ್ಧಿತ ಕೃಷಿ ಆಹಾರ ಉತ್ಪನ್ನಗಳಿಗೂ ವಿಸ್ತರಿಸಬೇಕು ಎಂದು ನವೋದ್ಯಮಿಗಳು ಮನವಿ ಮಾಡಿದರು. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪೂರಕ ಪ್ರಸ್ತಾವನೆ ಕಳಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಹೇಳಿದ್ದಾರೆ.

''ಮಿಲೆಟ್ ಆಹಾರ ಉತ್ಪಾದಕರಿಗೆ ತಂತ್ರಜ್ಞಾನ ವಿಸ್ತರಣೆ ಜೊತೆಗೆ ದೀರ್ಘಾವಧಿಗೆ ಆಹಾರ ಪದಾರ್ಥ ಸಂಸ್ಕರಣೆಗೆ ಸಿಫ್​ಟಿಆರ್​ಐ ಮೂಲಕ ನೆರವು ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕೃಷಿ ಇಲಾಖೆ ಮೂಲಕ ಶೀಘ್ರವೇ ಕೃಷಿ ನವೋದ್ಯಮಗಳು ಹಾಗೂ ಉತ್ಪಾದಕರು, ಪೂರೈಕೆದಾರರ ಸಂಪರ್ಕ ಬೆಸೆಯುವ ಕೆಲಸ ಮಾಡಲಾಗುವುದು. ಜೊತೆಗೆ ಮಾರುಕಟ್ಟೆ ಉತ್ತೇಜನಕ್ಕೆ ಸರ್ಕಾರದ ನೆರವು ಸದಾ ಸಿಗಲಿದೆ. ಇದರಿಂದ ರೈತರಿಗೂ ಅನುಕೂಲವಾಗಲಿದೆ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: ರಾಜ್ಯದ ವಿವಿಧ ಯೋಜನೆಗಳ ಬಗ್ಗೆ ಚರ್ಚೆ - CM meets PM modi

ABOUT THE AUTHOR

...view details