ಬೆಂಗಳೂರು:ನವಜಾತ ಶಿಶುಗಳ ಆರೈಕೆಗಾಗಿ ದಾದಿಯರ ಸೇವೆ ಒದಗಿಸುವುದಾಗಿ ಹಣದ ಪಡೆದ ಬಳಿಕ ನಿರ್ಲಕ್ಷಿಸಿದ್ದ ಮೆಸೆಸ್ ಪೆರ್ನು ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗೆ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿದೆ. ಜೊತೆಗೆ, ದಂಡದ ಮೊತ್ತ ಸೇರಿ ಮುಂಗಡವಾಗಿ ಪಾವತಿ ಮಾಡಿರುವ 23 ಸಾವಿರ ರೂ.ಗಳನ್ನು ಶೇಕಡಾ 6 ರಷ್ಟು ಬಡ್ಡಿ ಸಮೇತವಾಗಿ ತೊಂದರೆಗೊಳಗಾದ ದೂರುದಾರರಿಗೆ ಹಿಂದಿರುಗಿಸಲು ಸೂಚನೆ ನೀಡಿ ಆದೇಶಿಸಿದೆ.
ಬೆಂಗಳೂರಿನ ನಂದಿನಿ ಬಡಾವಣೆಯ ವೈ.ಸಿ. ಶಿವರಾಮ್ ಎಂಬುವರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಬೆಂಗಳೂರು ನಗರದ ಎರಡನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆಯ ಅಧ್ಯಕ್ಷರಾದ ವಿಜಯ್ಕುಮಾರ್ ಎಂ. ಪಾವಲೆ ಅವರ ನೇತೃತ್ವದ ತ್ರಿಸದಸ್ಯ ಪೀಠ ಈ ಆದೇಶ ಮಾಡಿದೆ. ಪ್ರಕರಣ ಸಂಬಂಧ ದಾಖಲಾಗಿದ್ದ ದೂರಿನ ಕುರಿತ ದಾಖಲೆಗಳನ್ನು ಪರಿಶೀಲಿಸಿದ ಪೀಠ, ಸೇವಾ ನ್ಯೂನತೆ ಮಾಡಿದ್ದ ಪೆರ್ನು ಸರ್ವೀಸ್ ಪ್ರೈವೇಟ್ ಲಿಮಿಟೆಡ್ಗೆ ದಂಡ ವಿಧಿಸಿ ಆದೇಶಿಸುತ್ತಿರುವುದಾಗಿ ತನ್ನ ಆದೇಶದಲ್ಲಿ ಹೇಳಿದೆ.
ಪ್ರಕರಣದ ಹಿನ್ನೆಲೆ:ಹಿರಿಯ ನಾಗರಿಕರಾದ ಅರ್ಜಿದಾರರ ಮಗಳಿಗೆ 2023ರ ಅಕ್ಟೋಬರ್ 25ರಂದು ಅವಳಿ ಮಕ್ಕಳು ಜನಿಸಿದ್ದು, ಮಕ್ಕಳನ್ನು ರಾತ್ರಿ 8 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ 10 ತಾಸುಗಳ ಕಾಲ ನೋಡಿಕೊಳ್ಳುವುದಕ್ಕಾಗಿ ದಾದಿಯ ಸೇವೆ ಒದಗಿಸಲು ಪೆರ್ನು ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಜೊತೆ ಒಪ್ಪಂದ ಮಾಡಿಕೊಂಡಿದ್ದರು. ಅದಕ್ಕಾಗಿ 5,500 ರೂ.ಗಳನ್ನು ತಕ್ಷಣ ಪಾವತಿ ಮಾಡಿದ್ದರು.
ಅದರಂತೆ, 2023ರ ನವೆಂಬರ್ 1ರಂದು ಮಂಜುಳಾ ಎಂಬ ದಾದಿ ಮಕ್ಕಳನ್ನು ನೋಡಿಕೊಳ್ಳುವುದಕ್ಕಾಗಿ ಕಳುಹಿಸಿದ್ದು, 10 ತಾಸುಗಳ ಕಾಲ ಮಕ್ಕಳನ್ನು ನೋಡಿಕೊಂಡಿದ್ದರು. ಸೇವೆಯನ್ನು ಪರಿಗಣಿಸಿ, 18 ದಾವಿರ ರೂ.ಗಳನ್ನು ಪಾವತಿಸುವ ಸಂಬಂಧ ನಿರ್ಧಾರ ಮಾಡಿಕೊಳ್ಳಲಾಗಿತ್ತು. ಆದರೆ, ಮರುದಿನ ದಾದಿ 8 ಗಂಟೆಯಾದರೂ ಬಂದಿರಲಿಲ್ಲ. ಸಂಪರ್ಕಿಸಿದಾಗ ಮತ್ತೊಂದು ಕೆಲಸದಲ್ಲಿದ್ದು, ಕ್ಯಾಬ್ ಕಳುಹಿಸಿದಲ್ಲಿ ಮಾತ್ರ 9 ಗಂಟೆಗೆ ಬರುವುದಾಗಿ ತಿಳಿಸಿದ್ದರು. ಆನಂತರ ಕೆಲ ದಿನಗಳ ಬಳಿಕ ದಾದಿ ಬರುವುದಕ್ಕೆ ನಿರಾಕರಿಸಿದ್ದರು. ಈ ಸಂಬಂಧ ಅರ್ಜಿದಾರರು ಪೆರ್ನು ಸರ್ವೀಸ್ ಪ್ರೈವೇಟ್ ಲಿಮಿಟೆಡ್ ಗಮನಕ್ಕೆ ತಂದಿದ್ದರೂ, ಯಾವುದೇ ಕ್ರಮಕ್ಕೆ ಮುಂದಾಗಿರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.
ಈ ನಡುವೆ 2023ರ ನವೆಂಬರ್ 3 ರಂದು 18 ಸಾವಿರ ರೂ.ಗಳನ್ನು ಪೆರ್ನು ಸರ್ವೀಸ್ ಪ್ರೈವೇಟ್ ಲಿಮಿಟೆಡ್ನ ಪಾವತಿ ಮಾಡಿದ್ದರು. ಹಣ ಪಡೆದ ಸಂಸ್ಥೆ ಎರಡು ಮೂರು ದಿನದಲ್ಲಿ ದಾದಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ, ನಿಗದಿತ ಸಮಯ ಕಳೆದರೂ ದಾದಿಯನ್ನು ಕಳುಹಿಸಿರುವುದಿಲ್ಲ. ಬಳಿಕ ಹಣ ಹಿಂದಿರುಗಿಸುವಂತೆ ಇ - ಮೇಲ್ ಮತ್ತು ಫೋನ್ ಮೂಲಕ ಕರೆ ಮಾಡಿ ಮನವಿ ಮಾಡಿದರೂ, ಹಣ ಹಿಂದಿರುಗಿಸಿರುವುದಿಲ್ಲ ಎಂದು ದೂರುದಾರರು ಉಲ್ಲೇಖಿಸಿದ್ದರು.
ಹೀಗಾಗಿ, ಸೇವಾ ನ್ಯೂನತೆ ಆರೋಪದಲ್ಲಿ ಪೆರ್ನು ಸರ್ವೀಸ್ ಪ್ರೈವೇಟ್ ಲಿಮಿಟೆಡ್ ದೂರು ದಾಖಲಿಸಿ, ತಾನು ಪಾವತಿಸಿರುವ 23,500 ರೂ. ಮತ್ತು 1 ಲಕ್ಷ ರೂ.ಗಳ ಪರಿಹಾರ ಮತ್ತು ಮಾನಸಿಕ ಹಿಂಸೆ ಅನುಭವಿಸಿದ ಪರಿಣಾಮ 10 ಸಾವಿರ ರೂ.ಗಳ ಪರಿಹಾರ ನೀಡಲು ನಿರ್ದೇಶಿಸುವಂತೆ ಕೋರಿದ್ದರು.
ಇದನ್ನೂ ಓದಿ:15 ದಿನಗಳ ಪ್ರವಾಸಕ್ಕೆ ಹಣ ಪಡೆದು 13 ದಿನಕ್ಕೆ ಮುಕ್ತಾಯಗೊಳಿಸಿದ ಪ್ರಯಾಣ ಸಂಸ್ಥೆಗೆ ದಂಡ