ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಹೇಳಿಕೆ (ETV Bharat) ಮಂಗಳೂರು: ಮಂಗಳೂರಿನ ಬೀದಿ ವ್ಯಾಪಾರಿಗಳಿಗೆ 10 ಕಡೆ ವ್ಯಾಪಾರ ವಲಯ ಮತ್ತು 2 ಕಡೆ ಫುಡ್ ಸ್ಟ್ರೀಟ್ ನಿರ್ಮಾಣ ಮಾಡಲಾಗುವುದು ಎಂದು ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ತಿಳಿಸಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹತ್ತು ಕಡೆ ವ್ಯಾಪಾರ ವಲಯವನ್ನು ಸ್ಥಾಪಿಸಲಾಗುವುದು. ಲೇಡಿಗೋಷನ್ ಬಳಿಯ ಇಂದಿರಾ ಕ್ಯಾಂಟೀನ್ ಬಳಿ, ಕಂಕನಾಡಿ, ಪಂಪ್ ವೆಲ್, ಕೆಪಿಟಿ, ಕಾವೂರು, ವಾಮಂಜೂರು, ಬೈಕಂಪಾಡಿ, ಸುರತ್ಕಲ್, ಕೃಷ್ಣಾಪುರ, ಕಾಟಿಪಳ್ಳದಲ್ಲಿ ವ್ಯಾಪಾರ ವಲಯವನ್ನು ಸ್ಥಾಪಿಸಲಾಗುವುದು ಎಂದರು.
ವ್ಯಾಪಾರ ವಲಯದಲ್ಲಿ ಬೀದಿಬದಿ ವ್ಯಾಪಾರದ ನಿಬಂಧನೆಗಳನ್ನು ಒಪ್ಪಿದ ವ್ಯಾಪಾರಿಗಳಿಗೆ ಅವಕಾಶ ನೀಡಲಾಗುವುದು. ಇಲ್ಲಿ ಗೂಡಂಗಡಿಗಳಿಗೆ ಅವಕಾಶ ಇಲ್ಲ. ಕುಳಿತು ವ್ಯಾಪಾರ ಮಾಡುವುದಕ್ಕೆ ಮಾತ್ರ ಅವಕಾಶ ಇರುತ್ತದೆ. ಇನ್ನು ನಗರದ ಎರಡು ಕಡೆ ಸ್ಟ್ರೀಟ್ ಫುಡ್ ಮಾಡಲು ಚಿಂತನೆ ಮಾಡಲಾಗಿದೆ. ಇದಕ್ಕಾಗಿ ಬೀದಿಗಳನ್ನು ಗುರುತಿಸಲಾಗುವುದು. ಶೀಘ್ರವೆ ಟೆಂಡರ್ ಕರೆದು 10×10 ಚ.ಅಡಿ ಅಥವಾ 10×20 ಚ.ಅಡಿಯ ಮಳಿಗೆ ನಿರ್ಮಿಸಿ ಹಸ್ತಾಂತರಿಸುವ ಚಿಂತನೆ ಇದೆ ಎಂದರು.
10 ಬೀದಿಬದಿ ವ್ಯಾಪಾರಿಗಳಿಗಷ್ಟೇ ಗುರುತಿನ ಚೀಟಿ :ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈವರೆಗೆ ಕೇವಲ 10 ಮಂದಿ ಬೀದಿಬದಿ ವ್ಯಾಪಾರಿಗಳಿಗೆ ಮಾತ್ರವೇ ಗುರುತಿನ ಚೀಟಿ ನೀಡಲಾಗಿದೆ. ಪಾಲಿಕೆಯ 18 ಷರತ್ತುಗಳನ್ನು ಒಪ್ಪಿ ಅಫಿಡಾವಿಟ್ ಸಲ್ಲಿಸಲು ನಿರಾಕರಿಸಿರುವ ಹಿನ್ನೆಲೆಯಲ್ಲಿ ಉಳಿದ ಬೀದಿಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ಸಾಧ್ಯವಾಗಿಲ್ಲ. ಮನಪಾ ಗುರುತಿನ ಚೀಟಿ ನೀಡಿ ಬೀದಿಬದಿ ವ್ಯಾಪಾರಿಗಳಿಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಬೀದಿಬದಿ ವ್ಯಾಪಾರಸ್ಥರ ಸಂಘಟನೆಯ ಪ್ರತಿನಿಧಿಗಳ ಆರೋಪ ನಿರಾಧಾರ. ನಗರದಲ್ಲಿ 2,500ರಷ್ಟು ತಳ್ಳುಗಾಡಿ, ಗೂಡಂಗಡಿಗಳಿವೆ. ಒಬ್ಬರ ಹೆಸರಿನಲ್ಲಿ 200ಕ್ಕೂ ಅಧಿಕ ತಳ್ಳುಗಾಡಿಗಳಿರುವುದು ಗಮನಕ್ಕೆ ಬಂದಿದೆ ಎಂದು ಮೇಯರ್ ಹೇಳಿದರು.
ಪ್ರಧಾನ ಮಂತ್ರಿಗಳ ದೀನ್ ದಯಾಲ್ ಸ್ವನಿಧಿ ಯೋಜನೆಯಡಿ ಈಗಾಗಲೇ 667 ಬೀದಿ ಬದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ನೀಡಲು ವ್ಯವಸ್ಥೆ ಮಾಡಲಾಗಿದೆ. ಷರತ್ತುಗಳಿಗೆ ಬದ್ಧರಾಗಲು ಯಾರೂ ಒಪ್ಪದ ಕಾರಣ ಕೇವಲ 10 ಮಂದಿಗೆ ಮಾತ್ರವೇ ಸಾಂಕೇತಿಕವಾಗಿ ಗುರುತಿನ ಚೀಟಿ ನೀಡಲಾಗಿದೆ. ಆದರೆ ನಗರದ ಹೃದಯಭಾಗವಾದ ಕೆಪಿಟಿ ರಸ್ತೆ, ಲೇಡಿಗೋಶನ್, ಸ್ಟೇಟ್ ಬ್ಯಾಂಕ್, ಕಂಕನಾಡಿ, ಪಂಪ್ ವೆಲ್, ಸುರತ್ಕಲ್ ಸೇರಿದಂತೆ ವಿವಿಧ ಕಡೆ ಸಾವಿರಾರು ಸಂಖ್ಯೆಯಲ್ಲಿ ಗೂಡಂಗಡಿಗಳು, ಬೀದಿ ಬದಿ ವ್ಯಾಪಾರ ನಡೆಯುತ್ತಿದೆ.
ಟೈಗರ್ ಕಾರ್ಯಾಚರಣೆ ನಿರಂತರ ಮುಂದುವರಿಕೆ:ಕಾರ್ಯಾಚರಣೆ ವೇಳೆ ಬಹುತೇಕ ಆಹಾರ ಪೂರೈಕೆಯ ಗೂಡಂಗಡಿಗಳು ಸೇರಿದಂತೆ ಬೀದಿ ಬದಿ ವ್ಯಾಪಾರದ ಸ್ಥಳಗಳಲ್ಲಿ ಸ್ವಚ್ಛತೆಯ ಕೊರತೆ, ಜಿರಳೆ ರಾಶಿ, ಹೆಗ್ಗಣಗಳ ರಾಶಿ ಕಂಡು ಬಂದಿದೆ. ಕೆಲ ಗೂಡಂಗಡಿಗಳಲ್ಲಿ ಶರಾಬು ಮಾರಾಟ, ಆಹಾರ ಪದಾರ್ಥಗಳಿಗೆ ಅಜಿನೊಮೋಟೋ ಮೊದಲಾದ ಪದಾರ್ಥಗಳನ್ನು ಬಳಸುತ್ತಿರುವುದು ಕಂಡುಬಂದಿದೆ. ನಗರದಲ್ಲಿ ಈಗಾಗಲೇ ಡೆಂಗಿ, ಮಲೇರಿಯಾದ ಹಿನ್ನೆಲೆಯಲ್ಲಿ ಜನರ ಆರೋಗ್ಯ ದೃಷ್ಟಿಯಿಂದ ಹಾಗೂ ನಗರದ ಪ್ರಮುಖ ಸ್ಥಳಗಳಲ್ಲಿ ಪಾದಚಾರಿಗಳಿಗೆ ಅನಧಿಕೃತ ಗೂಡಂಗಡಿ, ಬೀದಿಬದಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿರುವುದರಿಂದ ಟೈಗರ್ ಕಾರ್ಯಾಚರಣೆ ನಡೆಸಲಾಗುತ್ತಿದೆ. ಇದು ನಿರಂತರವಾಗಿ ಮುಂದುವರಿಯಲಿದೆ ಎಂದು ಮೇಯರ್ ಸುಧೀರ್ ಶೆಟ್ಟಿ ಹೇಳಿದರು.
ಬೀದಿಬದಿ ವ್ಯಾಪಾರಿಗಳು ಷರತ್ತಿಗೆ ಒಪ್ಪಿಲ್ಲದ ಮೇಲೆ ಗುರುತಿನ ಚೀಟಿ ನೀಡಲಾಗಿಲ್ಲ ಎಂದ ಮೇಲೆ ಪಿಎಂ ಸ್ವನಿಧಿಯಲ್ಲಿ ಯಾವ ಆಧಾರದಲ್ಲಿ ಎಷ್ಟು ಮಂದಿಗೆ ಸಾಲ ನೀಡಲಾಗಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಪಿಎಂ ಸ್ವನಿಧಿ ಯೋಜನೆಯಡಿ 667 ಮಂದಿ ಬೀದಿಬದಿ ವ್ಯಾಪಾರಸ್ಥರಿಗೆ ಸಾಲ ನೀಡಲಾಗಿದೆ. ಅವರಲ್ಲಿ 63 ಮಂದಿ ತಳ್ಳುಗಾಡಿ ವ್ಯಾಪಾರಿಗಳು. ಕೆಲವರು ಮನೆಗಳಲ್ಲೇ ಆಹಾರ ತಯಾರಿಸಿ ಮಾರಾಟ ಮಾಡುವವರೂ ಇದ್ದಾರೆ ಎಂದರು.
ಓದಿ:ಸಿಎಂ ಸಿದ್ದರಾಮಯ್ಯಗೆ ರಾಜ್ಯಪಾಲರಿಂದ ಶೋಕಾಸ್ ನೋಟಿಸ್: ಹೊನ್ನಾಳಿ ಸ್ತಬ್ದ! - Honnali bandh