ಬೆಂಗಳೂರು :ಮುಂಬರುವ ರಾಜ್ಯ ಸಭಾ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಹಾಗೂ ಜಾತ್ಯತೀತ ಜನತಾದಳ ಅಭ್ಯರ್ಥಿ ಕುಪೇಂದ್ರ ರೆಡ್ಡಿಯವರಿಗೆ ಅಡ್ಡಮತ ಚಲಾಯಿಸಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸದಸ್ಯರನ್ನ ಸೆಳೆಯಲು ಷಡ್ಯಂತ್ರ ರಚಿಸಲಾಗಿದೆ ಎಂಬ ಆರೋಪವಿದೆ. ಹೀಗಾಗಿ ಈ ಆರೋಪದಡಿ ಬಿಜೆಪಿ ಹಾಗೂ ಜೆಡಿಎಸ್ ಬೆಂಬಲಿಗರ ವಿರುದ್ಧ ಶಾಸಕ ರವಿ ಗಾಣಿಗ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಹ ಸದಸ್ಯರಾಗಿರುವ ಹಾಗೂ ಶಾಸಕರುಗಳಾದ ಶ್ರೀಮತಿ ಲತಾ, ಪುಟ್ಟಸ್ವಾಮಿ ಗೌಡ ಹಾಗೂ ಕೆಲವು ಕಾಂಗ್ರೆಸ್ ಶಾಸಕರಿಗೆ ಆಮಿಷ ಮತ್ತು ಒತ್ತಡ ಹೇರುತ್ತಿರುವ ಆರೋಪದಡಿ ದೂರು ನೀಡಲಾಗಿದೆ.
ದೂರಿನ ಸಾರಾಂಶ: 22 ಫೆಬ್ರವರಿ 2024ರಂದು ಕರ್ನಾಟಕದಿಂದ ವಿಧಾನಸಭೆ ಸದಸ್ಯರು ಆಯ್ಕೆ ಮಾಡಲಿರುವ ರಾಜ್ಯಸಭಾ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಗಳು ಮೂರು ಜನರಾಗಿದ್ದು, ಅವರ ಗೆಲುವು ಸಾಧಿಸಲು ಬೇಕಾಗಿರುವಂತೆ ಮತಗಳು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸದಸ್ಯ, ಅದರೊಂದಿಗೆ ಸಹ ಸದಸ್ಯರಾಗಿರುವವರು ಸೇರಿದಂತೆ ಸಂಖ್ಯಾಬಲ ಇರುತ್ತದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿಯವರು ನಾಮ ಪತ್ರವನ್ನು ಸಲ್ಲಿಸಿದ್ದು, ಅವರಲ್ಲಿ ಗೆಲುವು ಸಾಧಿಸಲು ನಿರ್ದಿಷ್ಟ ಮತ ಸಂಖ್ಯೆ ಇರುವುದಿಲ್ಲ. ಇದನ್ನು ತಿಳಿದೂ ಕೂಡ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಹಾಗೂ ಸಹ ಸದಸ್ಯರಾದ ಶಾಸಕರನ್ನು ಒತ್ತಡ ಹಾಗೂ ಹಣದ ಆಮಿಷವನ್ನು ಒಡ್ಡಿ ಪಕ್ಷಾಂತರವನ್ನು ನಡೆಸಿ ಮತ ಚಲಾಯಿಸುವಂತೆ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸಿದ ಸಂದರ್ಭದಿಂದ ಬಿಜೆಪಿ ಹಾಗೂ ಜೆಡಿಎಸ್‌ನ ಹಿರಿಯ ಮುಖಂಡರು ಷಡ್ಯಂತ್ರವನ್ನು ರೂಪಿಸಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಮತ್ತು ಸಹ ಸದಸ್ಯ ಶಾಸಕರನ್ನು ಎಲ್ಲ ರೀತಿಯಾದಂತಹ ಕಾನೂನು ಬಾಹಿರ ಚಟುವಟಿಕೆಗಳ ಮೂಲಕ ಸೆಳೆಯಲು ಸೇರಿರುತ್ತಾರೆ.
ಈ ಷಡ್ಯಂತರದ ನಿಮಿತ್ತ 37/ಕ್ರಸೆಂಟ್ ಹೋಟೆಲ್ ಮಾಲೀಕರಾದ ರವಿ ಎಂಬುವರು ಲತಾರವರನ್ನ ಸಂಪರ್ಕಿಸಿ ‘ಕುಪ್ಪೇಂದ್ರರೆಡ್ಡಿ ಅವರ ಪುತ್ರ ತಮ್ಮನ್ನು ಭೇಟಿ ಮಾಡಿ ಹಣವನ್ನು ಕೊಡುತ್ತಾರೆ. ನೀವು ಕುಪೇಂದ್ರ ರೆಡ್ಡಿಯವರಿಗೆ ಮತ ಚಲಾಯಿಸಿ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ಮತ ಚಲಾಯಿಸಲಿಲ್ಲ ಎಂದರೆ ತಮಗೆ ತೊಂದರೆಯಾಗುತ್ತದೆ’ ಎಂದು ಬೆದರಿಕೆ ಹಾಕಿದ್ದಾರೆ.