ವಿಜಯಪುರ:''ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 18ರಿಂದ 20 ಸ್ಥಾನಗಳನ್ನು ಗೆಲ್ಲಲಿದೆ'' ಎಂದು ಸಚಿವ ಸಂತೋಷ್ ಲಾಡ್ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ಇಂದು (ಭಾನುವಾರ) ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ''ಪ್ರಹ್ಲಾದ್ ಜೋಶಿ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಈವರೆಗೂ ಉತ್ತರ ಲಭಿಸಿಲ್ಲ. ಅವರು ಇನ್ನೂ ಉತ್ತರ ಹುಡುಕುತ್ತಿದ್ದಾರೆ'' ಎಂದರು.
''ರಾಜ್ಯದ ಕಾಂಗ್ರೆಸ್ ಸರ್ಕಾರದಿಂದ ಬಡವರಿಗೆ ತಿಂಗಳಿಗೆ 8 ರಿಂದ 10 ಸಾವಿರ ರೂಪಾಯಿ ತಲುಪುತ್ತಿದೆ. ಜನರು ದೇಶ, ರಾಜ್ಯದಲ್ಲಿ ಕಾಂಗ್ರೆಸ್ ಪರ ನಿಲ್ಲುತ್ತಾರೆ ಎನ್ನುವ ನಂಬಿಕೆಯಿದೆ'' ಎಂದ ಅವರು, ''ಎಂ.ಎಂ.ಕಲಬುರಗಿ, ಗೌರಿ ಲಂಕೇಶ ಹತ್ಯೆಯಾದಾಗ ಬಿಜೆಪಿಯ ನಿಲುವು ಏನಿತ್ತು? ಯಾವುದಾದರೂ ಘಟನೆ ನಡೆದಾಗ ರಾಜಕೀಯ ಮಾಡುತ್ತಾರೆ'' ಎಂದು ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
''ಹುಬ್ಬಳ್ಳಿ ನೇಹ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪೊಲೀಸ್ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಯುತ್ತಿದೆ. ಈ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ'' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಮೋದಿ ಹೋದಲೆಲ್ಲ ಜೈ ಶ್ರೀರಾಮ:''ಮೋದಿ ಹೋದಲೆಲ್ಲ ಜೈ ಶ್ರೀರಾಮ ಅಂತಾರೆ. ಎಲ್ಲೆಡೆ ಟಾರ್ಚ್ ಹಾಕಿ ಜೈ ಶ್ರೀರಾಮ, ಜೈ ಶ್ರೀರಾಮ ಎಂದು ಘೋಷಣೆ ಕೂಗುತ್ತಾರೆ. ಇದು ನೀತಿ ಸಂಹಿತೆ ಉಲ್ಲಂಘನೆ ಅಲ್ವಾ'' ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಯತ್ನಾಳ ಅವರ ಆರೋಪ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ''ಯತ್ನಾಳ್ ಸಾಹೇಬರು ಯುನಿವರ್ಸಲ್ ಗುರು ಇದ್ದ ಹಾಗೆ. ಅವರು ಹಾರಿಕೆ ಉತ್ತರ ಕೊಟ್ಟು ಹೋಗ್ತಾರೆ. ನನ್ನ ಬಗ್ಗೆ ಏನಾದ್ರೂ ಮಾತನಾಡುತ್ತಾರೆ. ಯಾವ ನೋಟು ಕೊಟ್ಟಿದ್ದಾರೆ, ಎಷ್ಟು ಕೊಟ್ಟಿದ್ದಾರೆ ಅವರನ್ನು ಕೇಳಬೇಕು. ಯತ್ನಾಳ್ ಅವರ ಅಲ್ಬರ್ಟ್ ಐನ್‍ಸ್ಟೈನ್ ಸಿದ್ಧಾಂತ ನಮಗೆ ಗೊತ್ತಾಗಲ್ಲ'' ಎಂದು ವ್ಯಂಗ್ಯವಾಡಿದರು.
''ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿಶ್ವ ಗುರು ಅಂತಾರೆ. ಹಾಗಾದ್ರೆ ಜೆಡಿಎಸ್ ಜೊತೆ ಏಕೆ ಮೈತ್ರಿ ಮಾಡಿಕೊಂಡಿದ್ದಾರೆ. ಯಾಕೆ ಗಾಲಿ ಜನಾರ್ಧನ ರೆಡ್ಡಿ ಅವರನ್ನ ಸೇರಿಸಿಕೊಂಡರು. ಅವರಿಗೆ ಸೋಲುವ ಭೀತಿ ಇದೆ, ಅದಕ್ಕೆ ಈ ರೀತಿ ಮಾಡುತ್ತಿದ್ದಾರೆ. ಮೋದಿ ಅವರು ವಿಶ್ವಗುರು ಆಗಿದ್ರೆ ಪ್ರಚಾರ ಏಕೆ ಮಾಡ್ಬೇಕಿತ್ತು'' ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರಾಜ್ಯವನ್ನು ಮತಾಂಧರ ಯುದ್ಧಭೂಮಿಯಾಗಿ ಪರಿವರ್ತಿಸಿದ ಕಾಂಗ್ರೆಸ್: ಬಿ.ಎಸ್.ಯಡಿಯೂರಪ್ಪ - Yediyurappa