ಬೆಂಗಳೂರು:ಕೇಂದ್ರದ ಬರ ಪರಿಹಾರದ ಕುರಿತಾಗಿ ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಲಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಬರ ಪರಿಹಾರ ಸಂಬಂಧ ಪಕ್ಷದ ಶಾಸಕರು ಪ್ರತಿಭಟನೆ ಮಾಡ್ತೇವೆ. 223 ತಾಲೂಕುಗಳಲ್ಲಿ ಬರವಿದೆ. 120 ವರ್ಷಗಳ ಇತಿಹಾಸದಲ್ಲಿ ಹೀಗೆ ಆಗಿರಲಿಲ್ಲ. ಬೆಂಗಳೂರಿಗೆ ನೀರಿನ ಬವಣೆ ಹೆಚ್ಚಾಯಿತು. ಆದರೂ ಬವಣೆಯಾಗದಂತೆ ನಿರ್ವಹಿಸುತ್ತಿದ್ದೇವೆ. 56.9 ಲಕ್ಷ ಹೆಕ್ಟೇರ್ ಬೆಳೆ ನಷ್ಟವಾಗಿತ್ತು. ಎನ್ಡಿಆರ್ಎಫ್ ನಿಯಮದ ಪ್ರಕಾರ ಬರ ಪರಿಹಾರ ಕೋರಿದ್ದೆವು. ಆಗಸ್ಟ್ನಲ್ಲೇ ಕೇಂದ್ರದ ಟೀಂ ಬಂದು ಪರಿಶೀಲಿಸಿತು. ನಾವು ಕಂಪ್ಲೀಟ್ ದಾಖಲೆ ಕೇಂದ್ರಕ್ಕೆ ಕೊಟ್ಟಿದ್ದೇವೆ ಎಂದು ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ದ್ರೋಹ ಮಾಡಿದೆ:ನಮ್ಮ ರಾಜ್ಯದ ಬಿಜೆಪಿ ಸಂಸದರು ಮತ್ತು ಕೇಂದ್ರ ಸರ್ಕಾರದಿಂದ ದ್ರೋಹ ಆಗಿದೆ. ಮೊದಲೇ ಹಣ ಸಿಕ್ಕಿದ್ರೆ ಎಷ್ಟು ಕಾಮಗಾರಿ ಮಾಡುತ್ತಿದ್ದೆವು. ಎಷ್ಟೋ ಉದ್ಯೋಗ ಸೃಷ್ಟಿ ಮಾಡುತ್ತಿದ್ದೆವು. ನಾರ್ಮ್ಸ್ ಪ್ರಕಾರ 18 ಸಾವಿರ ಕೋಟಿ ಬರಬೇಕು. ಮೊದಲ ಬಾರಿಗೆ ನಾವು ಸುಪ್ರೀಂ ಮೆಟ್ಟಿಲೇರಿದ್ದೇವೆ. ನ್ಯಾಯಾಲಯ ಕೂಡ ಪ್ರಶ್ನೆ ಮಾಡಿತು. ನ್ಯಾಯಾಲಯ ಮಧ್ಯ ಪ್ರವೇಶಕ್ಕೆ ಹೆದರಿದರು. ಈಗ 3,454 ಕೋಟಿ ರೂ. ಬಿಡುಗಡೆ ಮಾಡಿದ್ದಾರೆ. ಈ ಹಣ ಯಾವಾಗ ಅಕೌಂಟಿಗೆ ಜಮೆ ಆಗುತ್ತೋ ಗೊತ್ತಿಲ್ಲ ಎಂದು ತಿಳಿಸಿದರು.
ಹಿಂದೆ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಈಗ ಕೊಟ್ಟಿರೋದೇ ಸಾಕು ಬಿಡಿ ಅಂತಾರೆ. ಇದೇನೂ ನಮ್ಮಪ್ಪನ ಆಸ್ತಿಯೇ, ರಾಜ್ಯದ ಆಸ್ತಿ. ಈಗಾಗಲೇ ಬಿಜೆಪಿ ನಾಯಕರು ಹೇಳ್ತಿದ್ದಾರೆ. ಕುಮಾರಸ್ವಾಮಿ ಕೂಡ ಮಾತನಾಡಿದ್ದಾರೆ. ಚೊಂಬಿನ ಬಗ್ಗೆಯೂ ಚರ್ಚೆಯಾಗ್ತಿದೆ. ಭದ್ರಾ ಯೋಜನೆಗೆ 5,300 ಕೋಟಿ ರೂ. ಕೇಂದ್ರ ಬಜೆಟ್ನಲ್ಲೇ ಘೋಷಣೆ ಮಾಡಿದ್ರು. ಆದ್ರೆ ಇಲ್ಲಿಯವರೆಗೆ ಹಣ ಬರಲಿಲ್ವಲ್ಲಾ?. ಇದಕ್ಕೆ ಏನು ಹೇಳ್ತೀರಿ. ಮಹದಾಯಿ ಬಗ್ಗೆ ನೀವು ಉತ್ತರ ಕೊಡಬೇಕು ಎಂದು ಬಿಜೆಪಿ ನಾಯಕರ ವಿರುದ್ಧ ಡಿಕೆಶಿ ವಾಗ್ದಾಳಿ ನಡೆಸಿದರು.
ಹೋರಾಟ ಮುಂದುವರಿಯಲಿದೆ:ಈಗ ಕುಮಾರಸ್ವಾಮಿ ಏನೇನೋ ಮಾತನಾಡ್ತಿದ್ದಾರೆ. ಒಂದೇ ದಿನ ಕೈಹಿಡಿದು ಬರೆಸ್ತಾರಂತೆ. ಕುಮಾರಸ್ವಾಮಿ ಮೊದಲೇ ಮಾಡಬಹುದಿತ್ತಲ್ಲ. ನಮಗೆ ವೋಟು ಕೊಡಿ ನಾವು ಮಾಡಿಸ್ತೇವೆ ಅಂತಾರೆ. ಅಧಿಕಾರ ಕೊಟ್ರೆ ಮಾತ್ರ ಅವರಿಗೆ ರಾಜ್ಯದ ಹಿತ. ಅಧಿಕಾರ ಇಲ್ಲದಿದ್ರೆ ಯಾವ ಹಿತವಿಲ್ಲ. ನಾವು ಕೇಳಿದ್ದು 18 ಸಾವಿರ ಕೋಟಿ ರೂ. ಬರ ಪರಿಹಾರ. ರಾಜ್ಯಕ್ಕೆ ದಿನೇ ದಿನೆ ಅನ್ಯಾಯವಾಗ್ತಿದೆ. ಬಿಜೆಪಿಯವರು ಬಾಯಿ ಮುಚ್ಚಿಕೊಂಡಿದ್ದಾರೆ. ನಾಲ್ಕು ದಿನಗಳಿಂದ ಏನೇನೂ ಸಿನಿಮಾ ನೋಡ್ತಿದ್ದಾರೆ. ಅದಕ್ಕೆ ಎಲ್ಲರೂ ಮೌನವಾಗಿದ್ದಾರೆ. ನಮ್ಮ ಹೋರಾಟ ನ್ಯಾಯಾಲಯದಲ್ಲಿ ಮುಂದುವರಿಯಲಿದೆ. 35 ಸಾವಿರ ಕೋಟಿ ನಷ್ಟವಾಗಿದೆ. ನಾವು ಫಿಪ್ಟಿ ಪರ್ಸೆಂಟ್ ಕೇಳಿದ್ದೆವು. ಇದೇನು ಆನೆಗೆ ಅರೆಕಾಸಿನ ಮಜ್ಜಿಗೆ ಇದ್ದಂತೆ ಕೊಟ್ಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂಓದಿ:ಬರ ಪರಿಹಾರ ಪ್ರಧಾನಿ ಮೋದಿ ಸಾಧನೆ ಎನ್ನುತ್ತಿರುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಸಿಎಂ ಸಿದ್ದರಾಮಯ್ಯ - Drought Relief