ಬೆಂಗಳೂರು:ಕರ್ನಾಟಕ ಲೋಕಸಮರ ಚುನಾವಣೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿ ಮೈಲುಗೈ ಸಾಧಿಸಿದ್ದು, ಕಾಂಗ್ರೆಸ್ ಒಂದಂಕಿಗೆ ತೃಪ್ತಿ ಪಟ್ಟುಕೊಂಡಿದೆ. ರಾಜ್ಯ ಲೋಕಸಮರದಲ್ಲಿ ಮೂರು ಪಕ್ಷಗಳು ಪಡೆದ ಮತ ಪ್ರಮಾಣ ಏನು ಎಂಬ ವರದಿ ಇಲ್ಲಿದೆ.
ಲೋಕಸಮರ ಫಲಿತಾಂಶದ ಕುತೂಹಲ ಮುಕ್ತಾಯವಾಗಿದೆ. ಕರ್ನಾಟಕದಲ್ಲಿ ಬಿಜೆಪಿ 17 ಸ್ಥಾನ, ಕಾಂಗ್ರೆಸ್ 9 ಹಾಗೂ ಜೆಡಿಎಸ್ 2 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಕಳೆದ ಬಾರಿ 25 ಸ್ಥಾನ ಗೆದ್ದಿದ್ದ ಬಿಜೆಪಿ, ಈ ಸಲ 8 ಸ್ಥಾನ ಕುಸಿತ ಕಂಡಿದೆ. ಇತ್ತ 2019ರಲ್ಲಿ 1 ಸ್ಥಾನ ಪಡೆದ ಕಾಂಗ್ರೆಸ್, ಈ ಸಲ 8 ಸ್ಥಾನ ಹೆಚ್ಚಿಸಿಕೊಂಡಿದೆ. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಿತ್ತು. ಈ ಬಾರಿ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ.
ಮತ ಪ್ರಮಾಣ ಹೆಚ್ಚಿಸಿಕೊಂಡ ಕಾಂಗ್ರೆಸ್:ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಎರಡಂಕಿ ದಾಟುವಲ್ಲಿ ವಿಫಲವಾದರೂ, ಕರ್ನಾಟಕದಲ್ಲಿ ಗಣನೀಯ ಪ್ರಮಾಣದಲ್ಲಿ ಮತ ಹೆಚ್ಚಿಸಿಕೊಳ್ಳುವಲ್ಲಿ ಯಶ ಕಂಡಿದೆ. ರಾಜ್ಯದಲ್ಲಿ ಶೇ. 45.64ರಷ್ಟು ಮತ ಗಳಿಸಿದೆ. 2019ರ ಚುನಾವಣೆಯಲ್ಲಿ 1 ಸ್ಥಾನ ಜಯಿಸಿದ್ದ ಕಾಂಗ್ರೆಸ್, ರಾಜ್ಯದಲ್ಲಿ ಕೇವಲ ಶೇ. 32ರಷ್ಟು ಮತ ಗಳಿಸಿತ್ತು. ಈ ಬಾರಿ ಒಟ್ಟು 1,76,06,669 ಮತಗಳು ಕೈ ಪಡೆಗೆ ಲಭಿಸಿವೆ.
ಕಾಂಗ್ರೆಸ್ ಈ ಸಲ ಪಂಚ ಗ್ಯಾರಂಟಿ ಬಲದೊಂದಿಗೆ ಎರಡಂಕಿ ಸ್ಥಾನ ಗೆಲ್ಲುವ ವಿಶ್ವಾಸ ಹೊಂದಿತ್ತು. ಆದರೆ ಮೈತ್ರಿ ಮುಂದೆ ಗ್ಯಾರಂಟಿ ನಿರೀಕ್ಷಿತ ಫಲ ನೀಡಲು ಸಾಧ್ಯವಾಗಿಲ್ಲ. ಕೇವಲ 9 ಸ್ಥಾನಗಳನ್ನು ಗೆದ್ದು ಒಂದಂಕಿಗೆ ತೃಪ್ತಿ ಪಡಬೇಕಾಯಿತು. ರಾಜ್ಯದಲ್ಲಿ ಏಕಾಂಗಿಯಾಗಿ ಹೋರಾಟ ಮಾಡಿದ್ದ ಕಾಂಗ್ರೆಸ್ ಹಲವು ಕ್ಷೇತ್ರಗಳಲ್ಲಿ ಬಿಜೆಪಿಗೆ ಬಿರುಸಿನ ಸ್ಪರ್ಧೆ ನೀಡಿದೆ.