ಬೆಳಗಾವಿ:ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಗುರುವಾರ ವಿಧಾನಸಭೆಯಲ್ಲಿ ವಿಷಯ ಪ್ರಸ್ತಾಪಿಸಿ, ಆಡಳಿತ ಪಕ್ಷದ ಶಾಸಕರೇ ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ಕಲಾಪ ಮುಂದೂಡಿದ ಘಟನೆ ನಡೆಯಿತು.
ಸ್ಪೀಕರ್ ಯು.ಟ.ಖಾದರ್ ಅವರು ಸದನವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದ ನಂತರವೂ ಸದನದಲ್ಲೇ ಪ್ರತಿಭಟನೆ ಮುಂದುವರೆದಿತ್ತು. ನಿಯಮ 69ರ ಅಡಿ ಸಾರ್ವಜನಿಕ ಮಹತ್ವದ ವಿಷಯವನ್ನಾಗಿ ಬಳ್ಳಾರಿ ಜಿಲ್ಲೆಯಲ್ಲಿನ ಬಾಣಂತಿಯರ ಸಾವಿನ ಪ್ರಕರಣದ ಮೇಲೆ ನಡೆದ ಚರ್ಚೆಗೆ ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಸುದೀರ್ಘ ಉತ್ತರ ನೀಡಿದರು.
ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ (ETV Bharat) ವಿಷಯ ಪ್ರಸ್ತಾಪಿಸಿದ ಹೆಚ್.ಸಿ.ಬಾಲಕೃಷ್ಣ:ನಂತರ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಕೆಲ ಸ್ಪಷ್ಟನೆಗಳನ್ನು ಕೇಳುತ್ತಿದ್ದರು. ಈ ಮಧ್ಯ ಪ್ರವೇಶಿಸಿದ ಕಾಂಗ್ರೆಸ್ ಶಾಸಕ ಹೆಚ್.ಸಿ.ಬಾಲಕೃಷ್ಣ, ಸಚಿವರು ಸಮರ್ಥವಾಗಿ ಉತ್ತರ ನೀಡಿದ್ದಾರೆ. ಮತ್ತೊಂದು ಮಹತ್ವದ ವಿಚಾರ ಇಲ್ಲಿ ಚರ್ಚೆಯಾಗಬೇಕು, ನಿರ್ಣಯವೂ ಅಂಗೀಕಾರಗೊಳ್ಳಬೇಕು ಎಂದು ವಿಷಯ ಪ್ರಸ್ತಾಪಿಸಿದರು.
ಕಾಂಗ್ರೆಸ್‌ನ ಎಲ್ಲಾ ಶಾಸಕರು ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು. ಜೊತೆಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳನ್ನು ತಮ್ಮ ಸ್ಥಾನದಿಂದಲೇ ಪ್ರದರ್ಶನ ಮಾಡಿ ಆಕ್ರೋಶ ವ್ಯಕ್ತಪಡಿಸಿದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮಾತಿನ ಚಕಮಕಿಗೆ ಕಾರಣವಾಯಿತು.
ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ (ETV Bharat) ಹತ್ತು ನಿಮಿಷಗಳ ಕಾಲ ಮುಂದೂಡಿಕೆ:ಸದನದ ಒಳಗೆ ಯಾವುದೇ ಭಿತ್ತಿಪತ್ತ ಹಾಗೂ ಭಾವಚಿತ್ರಗಳನ್ನು ಪ್ರದರ್ಶನ ಮಾಡುವಂತಿಲ್ಲ ಎಂದು ಸ್ಪೀಕರ್ ಖಾದರ್ ತಿಳಿ ಹೇಳಿದರೂ, ಇದಕ್ಕೆ ಕಿವಿಗೊಡದ ಕಾಂಗ್ರೆಸ್ ಶಾಸಕರು ಪ್ರತಿಭಟನೆ ಮುಂದುವರೆಸಿದರು. ಈ ಸಂದರ್ಭದಲ್ಲಿ ಗೊಂದಲದ ವಾತಾವರಣ ಮುಂದುವರೆದಾಗ ಸ್ಪೀಕರ್ ಅವರು ಕಲಾಪವನ್ನು ಹತ್ತು ನಿಮಿಷಗಳ ಕಾಲ ಮುಂದೂಡಿದರು.
ಆ ನಂತರವೂ ಕಾಂಗ್ರೆಸ್ ಶಾಸಕರು ಅಂಬೇಡ್ಕರ್ ಭಾವಚಿತ್ರ ಹಿಡಿದು ಪ್ರತಿಭಟನೆ ಮುಂದುವರೆಸಿದರು. ಜೈ ಭೀಮ್ ಘೋಷಣೆಗಳನ್ನು ಕೂಗಿದರು. ಸದನದಲ್ಲಿ ಕುಳಿತಿದ್ದು ಮುಖ್ಯಮಂತ್ರಿಯವರು ಅಂಬೇಡ್ಕರ್ ಅವರ ಭಾವಚಿತ್ರ ಹಿಡಿದು ತಮ್ಮ ಶಾಸಕರ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ (ETV Bharat) ಕಲಾಪ ಮುಂದೂಡಿಕೆಯಾದರೂ ಪ್ರತಿಭಟನೆ:ಸಾಮಾನ್ಯವಾಗಿ, ಕಲಾಪ ಮುಂದೂಡಿದ ಬಳಿಕ ಸದನದ ಒಳಗೆ ಯಾವುದೇ ರೀತಿಯ ಚಟುವಟಿಕೆಗಳು ಮುಂದುವರೆಯುವುದಿಲ್ಲ ಮತ್ತು ಅವು ಕಡತದಲ್ಲಿ ದಾಖಲಾಗುವುದಿಲ್ಲ. ಆದರೆ ಇಂದು ಅಂಬೇಡ್ಕರ್ ವಿಚಾರದಲ್ಲಿ ಕಲಾಪ ಮುಂದೂಡಿಕೆಯಾದ ಬಳಿಕವೂ ಪ್ರತಿಭಟನೆಗಳು ಮುಂದುವರೆದವು.
ಕಾಂಗ್ರೆಸ್ ಶಾಸಕರಿಂದ ಪ್ರತಿಭಟನೆ (ETV Bharat) ಆಡಳಿತ ಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಧಿಕ್ಕಾರಗಳ ವಿನಿಮಯವಾಯಿತು. ಮತ್ತೆ ಸದನ ಸಮಾವೇಶಗೊಳ್ಳುವವರೆಗೂ ಈ ಪ್ರತಿಭಟನೆಯಾಗಿ ನಂತರ ಕಲಾಪದಲ್ಲೂ ಮುಂದುವವರೆಯಿತು. ಸದನ ನಡೆಯದಿದ್ದಾಗಲೂ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಪರಸ್ಪರ ಟೀಕೆಗಳನ್ನು ಮಾಡಿಕೊಳ್ಳುತ್ತಿದ್ದರು.
ಇದನ್ನೂ ಓದಿ:ಅಂಬೇಡ್ಕರ್ ಬಗ್ಗೆ ಅಮಿತ್ ಶಾ ಹೇಳಿಕೆ: ರಾಜ್ಯ ಕಾಂಗ್ರೆಸ್ ನಾಯಕರ ಆಕ್ರೋಶ