ಪ್ರತಿಪಕ್ಷ ನಾಯಕ ಆರ್ ಅಶೋಕ್ ವಿರುದ್ಧ ಹಕ್ಕುಚ್ಯುತಿ ಮಂಡಿಸಿದ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ (ETV Bharat) ಬೆಂಗಳೂರು :ಪ್ರತಿಪಕ್ಷದ ನಾಯಕ ಆರ್. ಅಶೋಕ್ ವಿರುದ್ಧ ಆಡಳಿತ ಪಕ್ಷದ ಶಾಸಕ ಪ್ರದೀಪ್ ಈಶ್ವರ್ ವಿಧಾನಸಭೆಯಲ್ಲಿ ಇಂದು ಹಕ್ಕುಚ್ಯುತಿ ಮಂಡಿಸಿದರು.
ಸಂವಿಧಾನದ ಪೀಠಿಕೆಯನ್ನು ಉಲ್ಲೇಖಿಸಿದ ಅವರು, ಪ್ರತಿಪಕ್ಷದ ನಾಯಕ ಅಶೋಕ್ ಅವರು, ಅವಾಚ್ಯ ಶಬ್ದಗಳನ್ನು ಬಳಸಿದ್ದಾರೆ. ಹೊಸ ಶಾಸಕರ ಕನಸು ನನಸಾಗುವುದಿಲ್ಲ. ನಾನು ಬಡತನದಿಂದ ನೋವು ಅನುಭವಿಸಿ ಬಂದಿದ್ದೇನೆ.
ಪೆರೆಸಂದ್ರದಲ್ಲಿ ಟ್ರ್ಯಾಕ್ಟರ್ ಓಡಿಸಿದ್ದೇನೆ. ಎಪಿಎಂಸಿ ಮಾರುಕಟ್ಟೆಯಲ್ಲಿ ಮೂಟೆ ಹೊತ್ತಿದ್ದೇನೆ. ನನ್ನ ತಂದೆ ತಾಯಿಗೆ ಅನಾರೋಗ್ಯವಾದಾಗ ಸೂಕ್ತ ಚಿಕಿತ್ಸೆ ಸಿಗಲಿಲ್ಲ. ಆ ಕಾರಣಕ್ಕಾಗಿ ಹತ್ತು ಆಂಬ್ಯುಲೆನ್ಸ್ ವ್ಯವಸ್ಥೆಯನ್ನು ಕ್ಷೇತ್ರದಲ್ಲಿ ಮಾಡಿದ್ದೇನೆ. ಡಿಜಿಟಲ್ ಕ್ರಾಂತಿಗೆ ಮುನ್ನುಡಿ ಬರೆದಿದ್ದೇನೆ ಎಂದರು.
ಆಗ ಮಧ್ಯಪ್ರವೇಶಿಸಿದ ಸ್ಪೀಕರ್ ಯು. ಟಿ ಖಾದರ್, ವಿಧಾನಸಭೆಯಲ್ಲಿ ನಡೆದಿರುವ ವಿಚಾರಕ್ಕೆ ಸೀಮಿತವಾಗಿ ಮಾತನಾಡಿ ಎಂದರು. ಆಗ ಮಾತನಾಡಿದ ಬಿಜೆಪಿ ಶಾಸಕ ಸುರೇಶ್ ಕುಮಾರ್, ಮಾತನಾಡಲು ಸದಸ್ಯರು ಸ್ಪೀಕರ್ ಅನುಮತಿ ಕೇಳುವುದು ರೂಢಿ. ಆದರೆ ಸ್ಪೀಕರ್ ಅವರೇ ಅವಕಾಶ ಕೇಳುತ್ತಿದ್ದಾರೆ ಎಂದು ಹೇಳಿದರು. ಆಗ ಸ್ಪೀಕರ್, ಸ್ಟೇಟಸ್ ಮುಖ್ಯವಲ್ಲ, ಪ್ರೀತಿಯಿಂದ ಸದನ ನಡೆಯಬೇಕು ಎಂದು ಹೇಳಿದರು.
ಈ ವೇಳೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಮಾತನಾಡಿ, ನಾವು ಧರಣಿ ನಡೆಸುವಾಗ ಪ್ರದೀಪ್ ಈಶ್ವರ್ ಮಾತನಾಡಿದರು. ಆಗ ಅವಾಚ್ಯ ಶಬ್ದ ಬಳಕೆ ಮಾಡಿರುವುದಾಗಿ ಹೇಳಿದ್ದಾರೆ. ದಾಖಲೆಗಳಲ್ಲಿ ಆ ರೀತಿ ಪದಬಳಕೆ ಮಾಡಿರುವುದು ದಾಖಲಾಗಿಲ್ಲ. ಪ್ರದೀಪ್ ಈಶ್ವರ್ ಅವರು ರೋಷಾವೇಶದಲ್ಲಿ ದೊಡ್ಡ ಪದದ ಬಳಕೆ ಮಾಡಿದ್ದಾರೆ. ಒಂದು ವೇಳೆ ಆ ರೀತಿ ಪದಬಳಕೆ ಮಾಡಿದ್ದರೆ ಕಡತದಿಂದ ತೆಗೆಸಿ. ತಪ್ಪಾಗಿದ್ದರೆ ತಪ್ಪೇ ಎಂದರು. ಆಗ ಸ್ಪೀಕರ್ ಖಾದರ್ ಅವರು, ಆಡಿಯೋ, ವಿಡಿಯೋ ದಾಖಲೆ ಪರಿಶೀಲನೆ ಮಾಡಿ ಹಕ್ಕುಚ್ಯುತಿ ಮಂಡನೆ ವಿಚಾರದ ಬಗ್ಗೆ ರೂಲಿಂಗ್ ಕೊಡುವುದಾಗಿ ಹೇಳಿದರು.
ಇದನ್ನೂ ಓದಿ :ವಿಧಾನಸಭೆಯಲ್ಲಿ ಇಂದು ಧರಣಿ ವಾಪಸ್ ಪಡೆದ ಪ್ರತಿಪಕ್ಷಗಳು - Monsoon Session