ಬೆಂಗಳೂರು: "ಶಿಗ್ಗಾವಿಯಲ್ಲಿ ಬಿಜೆಪಿ ಗೆದ್ದಾಗಿದೆ ಎಂಬ ವಾತಾವರಣವಿದೆ. ಇನ್ನು ಚನ್ನಪಟ್ಟಣ ಹಾಗೂ ಸಂಡೂರಿನಲ್ಲಿ ಕಾಂಗ್ರೆಸ್ ಗೆಲುವಿನ ವಿಶ್ವಾಸದಲ್ಲಿ ಸಿಎಂ ಸಿದ್ದರಾಮಯ್ಯ ಇದ್ದರು. ಆದರೆ, ಚನ್ನಪಟ್ಟಣ ಕ್ಷೇತ್ರ ಕೈಜಾರಿ ಹೋಗುತ್ತಿದೆ. ಅದು ಕಾಂಗ್ರೆಸ್ನವರಿಗೂ ಗೊತ್ತಾಗಿದೆ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, "ಸಂಡೂರು, ಚನ್ನಪಟ್ಟಣದಲ್ಲಿ ಬಿಜೆಪಿ ಕೈ ಮೇಲಾಗುತ್ತಿದೆ. ಹಾಗಾಗಿ, ಸಿಎಂ ಸಿದ್ದರಾಮಯ್ಯ ಅವರು ಸಂಡೂರು ಕ್ಷೇತ್ರದ ಕಡೆ ಹೆಚ್ಚು ಗಮನ ಕೊಟ್ಟಿದ್ದಾರೆ. ವಕ್ಫ್ ವಿಚಾರ, ಇವರ ರೈತ ವಿರೋಧಿ ಧೋರಣೆಗಳು, ಹಿಂದೂ ವಿರೋಧಿ ನಡವಳಿಕೆಗಳಿಂದ ಉಪಚುನಾವಣೆ ಮೇಲೆ ಪರಿಣಾಮ ಬೀರಿವೆ. ಮೂರು ಕ್ಷೇತ್ರಗಳಲ್ಲೂ ಎನ್‌ಡಿಎ ಗೆಲ್ಲಲಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಧಿಕಾರದ ದರ್ಪ: ತಗ್ಗಿ ಬಗ್ಗಿ ನಡೆಯಬೇಕೆಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಖಂಡಿಸಿದ ವಿಜಯೇಂದ್ರ ಅವರು, "ಅಧಿಕಾರದ ದರ್ಪ ಅವರಿಗೆ ಈ ರೀತಿ ಮಾತನಾಡಿಸಿದೆ. ಜಯನಗರದ ಜನ ಏನು ತಪ್ಪು ಮಾಡಿದ್ದಾರೆ. ಅಲ್ಲಿ ನಮ್ಮ (ಬಿಜೆಪಿ) ಶಾಸಕರು ಇದ್ದಾರೆ. ಅವರು ತಗ್ಗಿ ಬಗ್ಗಿ ನಡೆಯಬೇಕಾ? ನಾವೇನು ಪ್ರಜಾಪ್ರಭುತ್ವದಲ್ಲಿ ಇದ್ದಿವೋ? ಇಲ್ಲ ಸರ್ವಾಧಿಕಾರಿ ಆಡಳಿತದಲ್ಲಿ ಇದ್ದೀವೋ? ಕ್ಷೇತ್ರದ ಶಾಸಕರಿಗಷ್ಟೇ ಅಲ್ಲ ಮತದಾರರಿಗೆ ಅವಮಾನ ಮಾಡಿದಂತೆ ಆಗಿದೆ" ಎಂದು ವಾಗ್ದಾಳಿ ನಡೆಸಿದರು.