ಬೆಂಗಳೂರು: ಬರ ಪರಿಹಾರ ಕೊಟ್ಟು ಕರ್ನಾಟಕಕ್ಕೆ ಬನ್ನಿ, ಇಲ್ಲವಾದರೆ ಮತ ಕೇಳುವ ನೈತಿಕತೆ ನಿಮಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಿ ಬಳಿಕ ಮಾತನಾಡಿದ ಅವರು, ಮೋದಿ, ಅಮಿತ್ ಶಾ ಅವರೇ ಯಾವ ಮುಖ ಹಿಡಿದು ಕರ್ನಾಟಕಕ್ಕೆ ಬರುತ್ತೀರಿ. ಕೇಂದ್ರ ಸರ್ಕಾರ ಮಲತಾಯಿ ದೋರಣೆ ಮಾಡಿದೆ. ಮೋದಿ ಹಾಗೂ ಅಮಿತ್ ಶಾ ಕರ್ನಾಟಕವನ್ನು ದ್ವೇಷಿಸುತ್ತಿದ್ದಾರೆ. ರಾಜ್ಯದ ರೈತರನ್ನು ದ್ವೇಷಿಸುತ್ತಿದ್ದಾರೆ. 223 ತಾಲೂಕು ಬರಗಾಲ ಪೀಡಿತವಾಗಿದೆ. ಮೆಮೊರಾಡಂ ಕೊಟ್ಟರೂ ಅಮಿತ್ ಶಾ ವಿಳಂಬವಾಗಿ ಕೊಟ್ಟರು ಎಂದು ಸುಳ್ಳು ಹೇಳಿದರು ಎಂದು ಕಿಡಿ ಕಾರಿದರು.
ನಿರ್ಮಲಾ ಸೀತಾರಾಮನ್ ಗ್ಯಾರಂಟಿಗೆ ಹಣ ಕೇಳುತ್ತಿದ್ದಾರೆ ಎಂದು ಸುಳ್ಳು ಹೇಳುತ್ತಿದ್ದಾರೆ. ಗ್ಯಾರಂಟಿಗಳಿಗಾಗಿ ನಾವು ಕೇಂದ್ರದಿಂದ ನಯಾ ಪೈಸೆ ಹಣ ಕೇಳಿಲ್ಲ. ನಮಗೆ ಅದರ ಅಗತ್ಯವೂ ಇಲ್ಲ. 48,000 ಹೆಕ್ಟೇರ್ ಬೆಳೆ ಹಾನಿಯಾಗಿದೆ. ರೈತರಿಗೆ ಮೊದಲ ಕಂತಾಗಿ ನಾವೇ ಹಣ ನೀಡುತ್ತಿದ್ದೇವೆ. 34 ಲಕ್ಷ ರೈತರಿಗೆ ತಲಾ 2000 ರೂ. ಪರಿಹಾರ ನೀಡಿದ್ದೇವೆ. ಬರ ಪರಿಹಾರವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದೇವೆ ಎಂದರು.
18,172 ಕೋಟಿ ರೂ. ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಮನವಿ ಕೊಟ್ಟು ಏಳು ತಿಂಗಳು ಆಗಿದೆ. ನಾನೇ ಸ್ವತಃ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದೇನೆ. ಅಮಿತ್ ಶಾ ಡಿ.23ಕ್ಕೆ ಸಭೆ ಕರದಿದ್ದೇವೆ ಎಂದು ಹೇಳಿದ್ದರು. ಆದರೆ, ಇವತ್ತಿನವರೆಗೆ ಯಾವುದೇ ಸಭೆ ಮಾಡಿಲ್ಲ. ಭದ್ರಾ ಯೋಜನೆಗೆ 5,300 ಕೋಟಿ ರೂ. ಕೊಡುವುದಾಗಿ ಹೇಳಿದ್ದಾರೆ. ಅದೂ ಇನ್ನೂ ಬಿಡುಗಡೆ ಆಗಿಲ್ಲ. ಹಣಕಾಸು ಆಯೋಗದಂತೆ ವಿಶೇಷ ಅನುದಾನವನ್ನೂ ಕೊಟ್ಟಿಲ್ಲ. ಫೆರಿಪರೆಲ್ ರಿಂಗ್ ರಸ್ತೆಗೆ 3000 ಕೋಟಿ ರೂ. ಕೊಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮೋದಿಗೆ ಅವರಿಗೆ ಕರ್ನಾಟಕ ನೆನಪಾಗುವುದು ಚುನಾವಣೆ ಬಂದಾಗ ಮಾತ್ರ. ಪ್ರವಾಹ ಬಂದಿದ್ದಾಗ ಬರಲಿಲ್ಲ. ಗೋ ಬ್ಯಾಕ್ ನರೇಂದ್ರ ಮೋದಿ, ಗೋ ಬ್ಯಾಕ್ ಅಮಿತ್ ಶಾ ಎಂದು ಹೇಳುತ್ತಿದ್ದೇವೆ. ಇಂದು ಅಮಿತ್ ಶಾ ಬರುತ್ತಿದ್ದಾರೆ. ಬರ ಪರಿಹಾರ ಕೊಡಿ ಎಂದು ಅವರನ್ನು ಒತ್ತಾಯಿಸುತ್ತೇವೆ. ಗೃಹ ಸಚಿವರಾಗಿ ಅಮಿತ್ ಶಾ ಹಾಗೂ ಹಣಕಾಸು ಸಚಿವರಾಗಿ ನಿರ್ಮಲಾ ಸೀತಾರಾಮನ್ ಸುಳ್ಳು ಹೇಳುತ್ತಿದ್ದಾರೆ. ಅವರಿಗೆ ಪ್ರಧಾನ ಮಂತ್ರಿಯಾಗಿರಲೂ ನೈತಿಕತೆ ಇಲ್ಲ. ಗೃಹ ಸಚಿವರಾಗಿ ಇರಲೂ ನೈತಿಕತೆ ಇಲ್ಲ. ಹಣಕಾಸು ಸಚಿವರಾಗಿ ಇರಲೂ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಬರ ಪರಿಹಾರ ಶೀಘ್ರ ಬಿಡುಗಡೆಗೆ ಆಗ್ರಹ: ಸಿಎಂ ನೇತೃತ್ವದಲ್ಲಿ ಕಾಂಗ್ರೆಸ್ನಿಂದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ - Congress protest