ಕರ್ನಾಟಕ

karnataka

ETV Bharat / state

ಕೇಂದ್ರದ ಮಲತಾಯಿ ಧೋರಣೆಯಿಂದ ರಾಜ್ಯಕ್ಕೆ 62 ಸಾವಿರ ಕೋಟಿ ನಷ್ಟ: ಫೆ.7ಕ್ಕೆ ದೆಹಲಿಯಲ್ಲಿ ಪ್ರತಿಭಟನೆ; ಡಿಸಿಎಂ

ಕೇಂದ್ರದ ಬಜೆಟ್​ನಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದ್ದು ಮುಂದಿನ ವಾರ ದೆಹಲಿಯಲ್ಲಿ ಪ್ರತಿಭಟನೆ ನಡೆಸುವುದಾಗಿ ಡಿಸಿಎಂ ಹೇಳಿದ್ದಾರೆ. ​

ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ​ ಪ್ರತಿಭಟನೆ: ಡಿಸಿಎಂ ಹೇಳಿಕೆ
ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ​ ಪ್ರತಿಭಟನೆ: ಡಿಸಿಎಂ ಹೇಳಿಕೆ

By ETV Bharat Karnataka Team

Published : Feb 2, 2024, 6:12 PM IST

ಬೆಂಗಳೂರು: ಕೇಂದ್ರ ಬಜೆಟ್​ನಲ್ಲಿ ಕರ್ನಾಟಕ ರಾಜ್ಯಕ್ಕೆ ನಿರಂತರ ಅನ್ಯಾಯವಾಗುತ್ತಿದೆ. ಕೇಂದ್ರದ ಮಲತಾಯಿ ಧೋರಣೆಯಿಂದ ಕಳೆದ ಐದು ವರ್ಷಗಳಲ್ಲಿ ರಾಜ್ಯಕ್ಕೆ 62 ಸಾವಿರ ಕೋಟಿ ಹಣ ನಷ್ಟವಾಗಿದೆ. ಹೀಗಾಗಿ ಫೆ.7 ರಂದು ಕರ್ನಾಟಕ ಸರಕಾರವು ದೆಹಲಿಯಲ್ಲಿ ಪ್ರತಿಭಟನೆ ನಡೆಸಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಾನು ಸೇರಿದಂತೆ ರಾಜ್ಯದ ಸಚಿವರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಈ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇವೆ. ಪ್ರತಿಭಟನೆ ಸ್ಥಳವಕಾಶದ ಬಗ್ಗೆ ಕೆಂದ್ರಕ್ಕೆ ಪತ್ರ ಬರೆದಿದ್ದು, ಅನುಮತಿ ಸಿಕ್ಕ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಹೇಳಿದರು.

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರತಿಭಟನೆ ನಮ್ಮ ಮೂಲಭೂತ ಹಕ್ಕು. ಕಾಂಗ್ರೆಸ್ ಜನಪ್ರತಿನಿಧಿಗಳು ಭಾಗವಹಿಸಲಿರುವ ಈ ಪ್ರತಿಭಟನೆಯಲ್ಲಿ ಪ್ರತಿಪಕ್ಷದ ಸಂಸದರು, ಶಾಸಕರು ಭಾಗವಹಿಸಬೇಕು ಎಂದು ಮನವಿ ಮಾಡುತ್ತೇನೆ. 2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ 24.5 ಲಕ್ಷ ಕೋಟಿ ಇತ್ತು. 2023-24ನೇ ಸಾಲಿನಲ್ಲಿ ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದು 45 ಲಕ್ಷ ಕೋಟಿಯಾಗಿದೆ. 2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್​ನಲ್ಲಿ ರಾಜ್ಯಕ್ಕೆ 46 ಸಾವಿರ ಕೋಟಿ ಅನುದಾನ ಸಿಕ್ಕಿತ್ತು. ಆದರೆ 2024-25ನೇ ಸಾಲಿನಲ್ಲಿ ರಾಜ್ಯಕ್ಕೆ ಬಂದಿರುವ ಅನುದಾನ ಕೇವಲ 50 ಸಾವಿರ ಕೋಟಿ ಮಾತ್ರ. ಕೇಂದ್ರ ಸರ್ಕಾರದ ಬಜೆಟ್ ಗಾತ್ರ ದುಪ್ಪಟ್ಟಾಗಿದ್ದರೂ ರಾಜ್ಯಕ್ಕೆ ಬರುವ ಅನುದಾನದ ಪ್ರಮಾಣದಲ್ಲಿ ಅತ್ಯಲ್ಪ ಏರಿಕೆ ಅಷ್ಟೇ ಆಗಿದೆ ಎಂದು ಹೇಳಿದರು.

ಕರ್ನಾಟಕ ರಾಜ್ಯ ದೇಶದಲ್ಲೇ ಪ್ರಗತಿಪರ ರಾಜ್ಯ. ಮಹಾರಾಷ್ಟ್ರ ಬಿಟ್ಟರೆ ಕೇಂದ್ರಕ್ಕೆ ಅತಿ ಹೆಚ್ಚು ತೆರಿಗೆ ಪಾವತಿ ಮಾಡುತ್ತಿರುವ ರಾಜ್ಯ ಕರ್ನಾಟಕ. ನಿನ್ನೆ ಬಜೆಟ್​ ಅನ್ನು ನಾವೆಲ್ಲ ಗಮನಿಸಿದ್ದೇವೆ. ಕೇವಲ ನಿನ್ನೆಯ ಬಜೆಟ್ ಮಾತ್ರವಲ್ಲ. ಕಳೆದ ಐದು ವರ್ಷಗಳ ಬಜೆಟ್ ನೋಡಿದರೆ ನಮಗೆ ನಮ್ಮ ಪಾಲು ನ್ಯಾಯುತವಾಗಿ ಸಿಕ್ಕಿಲ್ಲ. ರಾಜ್ಯದ 28 ಸಂಸದರ ಪೈಕಿ 27 ಸಂಸದರು ಎನ್​ಡಿಎ ಮೈತ್ರಿಕೂಟದವರೇ ಆಗಿದ್ದರೂ ನಮಗೆ ಸೂಕ್ತ ನ್ಯಾಯ ಸಿಗುತ್ತಿಲ್ಲ. 2018-19ರಿಂದ ಈಗಿನವರೆಗೂ ಕೇಂದ್ರ ಬಜೆಟ್ ಗಮನಿಸಿದರೆ ನಮ್ಮ ರಾಜ್ಯದ ಪಾಲಿನಲ್ಲಿ ಶೇ 40 ರಿಂದ ಶೇ45 ರಷ್ಟು ಪಾಲು ಕಡಿಮೆಯಾಗಿದೆ. ಇದರಿಂದಾಗಿ ನಮ್ಮ ರಾಜ್ಯದ ಮೇಲೆ ಸಾಲದ ಹೊರೆ ಹೆಚ್ಚಾಗುತ್ತಿದೆ ಎಂದರು.

5 ವರ್ಷಕ್ಕೆ 62 ಸಾವಿರ ಕೋಟಿ ನಷ್ಟ: ಇತ್ತೀಚೆಗೆ ನಡೆಸಿದ ಸಮೀಕ್ಷೆಯಲ್ಲಿ ಪ್ರತಿ ವರ್ಷ 7 ರಿಂದ 10 ಸಾವಿರ ಕೋಟಿ ಅನುದಾನ ಕಡಿಮೆಯಾಗುತ್ತಾ ಬರುತ್ತಿದೆ. 14ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಕರ್ನಾಟಕ ರಾಜ್ಯಕ್ಕೆ 4.71% ಪಾಲು ನೀಡಲಾಗಿತ್ತು. ಆದರೆ, 15ನೇ ಹಣಕಾಸು ಆಯೋಗದಲ್ಲಿ ರಾಜ್ಯದ ಪಾಲನ್ನು 3.64%ಗೆ ಇಳಿಸಲಾಗಿದೆ. ಇದರಿಂದಾಗಿ ನಮಗೆ ಐದು ವರ್ಷಕ್ಕೆ 62 ಸಾವಿರ ಕೋಟಿಯಷ್ಟು ಹಣ ಕಡಿಮೆಯಾಗಿದೆ. ಇನ್ನು ವಿವಿಧ ರೀತಿಯಲ್ಲಿ ಕರ್ನಾಟಕ ರಾಜ್ಯಕ್ಕೆ ಘೋಷಣೆ ಮಾಡಿದ್ದ ಅನುದಾನ ಕೂಡ ಸರಿಯಾಗಿ ನೀಡಿಲ್ಲ ಎಂದು ವಿವರಿಸಿದರು.

ನೀರಾವರಿ ಯೋಜನೆಯಲ್ಲಿ ಭದ್ರ ಮೇಲ್ದಂಡೆ ಯೋಜನೆಗೆ 5,200 ಕೋಟಿ ನೀಡುವುದಾಗಿ ಘೋಷಣೆ ಮಾಡಿದ್ದರು. ಅದನ್ನು ನೀಡಿಲ್ಲ. ಇನ್ನು ಬೆಂಗಳೂರಿನಲ್ಲಿ ಮೆಟ್ರೋಗೆ ಕೂಡ ವಿವಿಧ ಹಂತದ ಯೋಜನೆ ಅನುದಾನ ನೀಡುವುದಾಗಿ ಹೇಳಿದ್ದರು. ನಾನು ಹಲವು ಬಾರಿ ಪ್ರಧಾನಿ, ಜಲಶಕ್ತಿ ಸಚಿವರು, ನಗರಾಭಿವೃದ್ಧಿ ಸಚಿವರಿಗೆ ಪತ್ರ ಬರೆದಿದ್ದೇನೆ. ನಮ್ಮ ರಾಜ್ಯದಿಂದ ಹೆಚ್ಚು ತೆರಿಗೆ ರವಾನೆಯಾಗುತ್ತಿದ್ದರೂ ನಮಗೆ ಮಲತಾಯಿ ಧೋರಣೆ ತೋರುತ್ತಿದ್ದೀರಿ. ಸಿದ್ದರಾಮಯ್ಯ ಅವರು ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ಮನವಿ ಮಾಡಿದ್ದರು. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದಾಗಿ ನಮಗೆ ನಿರಾಸೆಯಾಗಿದೆ ಎಂದಿದ್ದಾರೆ.

ವಿರೋಧ ಪಕ್ಷದ ಸಂಸದರಿಗೂ ಆಹ್ವಾನ: ಈ ಸಮಯದಲ್ಲಿ ನಾವು ಅನಿವಾರ್ಯವಾಗಿ ಹೋರಾಟ ಮಾಡಬೇಕಿದೆ. ಕರ್ನಾಟಕ ಸರ್ಕಾರ ಮುಖ್ಯಮಂತ್ರಿಗಳ ನೇತೃತ್ವದಲ್ಲಿ 136+2 ಒಟ್ಟು 138 ಶಾಸಕರು, ಎಲ್ಲಾ ಪರಿಷತ್ ಸದಸ್ಯರು ಪ್ರತಿಭಟನೆ ನಡೆಸುತ್ತೇವೆ. ಈ ಪ್ರತಿಭಟನೆಗೆ ರಾಜ್ಯದ ಎಲ್ಲಾ ಸಂಸದರಿಗೆ ಆಹ್ವಾನ ನೀಡಲಾಗುವುದು. ಎಲ್ಲರೂ ರಾಜ್ಯದ ಹಿತ ಕಾಯಲು ಪಕ್ಷಾತೀತವಾಗಿ ಹೋರಾಟ ಮಾಡಲು ತೀರ್ಮಾನಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ:ಕೇಂದ್ರದ ತಾರತಮ್ಯ ನೀತಿ ಖಂಡಿಸಿ ಡಿ ಕೆ ಸುರೇಶ್ ಈ ರೀತಿ ಹೇಳಿರಬಹುದು: ಸಚಿವ ಸತೀಶ್ ಜಾರಕಿಹೊಳಿ

ABOUT THE AUTHOR

...view details