ವಿಜಯಪುರ:ನೀವು ಪ್ರಧಾನಿಯವರ ಭಾಷಣಗಳನ್ನು ಕೇಳಿದ್ದೀರಿ. ಅವರು ಭಯಭೀತರಾಗಿದ್ದಾರೆ. ಅವರು ವೇದಿಕೆಯಲ್ಲಿ ಕಣ್ಣೀರು ಹಾಕುವ ಸಾಧ್ಯತೆಯೂ ಇದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ನಗರದ ಕಾಂಗ್ರೆಸ್ ಸಮಾವೇಶದಲ್ಲಿಂದು ಜನರನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿನ ಚುನಾವಣಾ ರ್‍ಯಾಲಿಗಳಲ್ಲಿ ಮೋದಿ ಅವರು "ಮಂಗಳಸೂತ್ರ", "ಸಂಪತ್ತಿನ ಮರುಹಂಚಿಕೆ" ಮತ್ತು " ಪಿತ್ರಾರ್ಜಿತ ತೆರಿಗೆ" ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಕಾಂಗ್ರೆಸ್ ಗುರಿಯಾಗಿಸಿಕೊಂಡು ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ ಎಂದು ಟೀಕಿಸಿದರು.
ಬಡತನ, ನಿರುದ್ಯೋಗ ಮತ್ತು ಬೆಲೆ ಏರಿಕೆ ಸೇರಿದಂತೆ ದೇಶದಲ್ಲಿ ಮೂರ್ನಾಲ್ಕು ಪ್ರಮುಖ ಸಮಸ್ಯೆಗಳಿವೆ. ಕಾಂಗ್ರೆಸ್ನಿಂದ ಮಾತ್ರ ನಿರುದ್ಯೋಗವನ್ನು ತೊಡೆದುಹಾಕಲು, ಬೆಲೆ ಏರಿಕೆಯನ್ನು ನಿಯಂತ್ರಿಸಲು ಮತ್ತು ಜನರಿಗೆ ಅವರ ಪಾಲು ನೀಡಲು ಸಾಧ್ಯ. ಮೋದಿ ಬಡವರ ಹಣವನ್ನು ಮಾತ್ರ ಕಿತ್ತುಕೊಂಡಿದ್ದಾರೆ. ಅವರು ಕೆಲವರನ್ನು ಕೋಟ್ಯಾಧಿಪತಿಗಳನ್ನಾಗಿ ಮಾಡಿದ್ದಾರೆ. ದೇಶದ 70 ಕೋಟಿ ಜನರ ಸಂಪತ್ತಿಗೆ ಸಮನಾದ ಸಂಪತ್ತನ್ನು ಕೇವಲ 22 ಮಂದಿ ಹೊಂದಿದ್ದಾರೆ. ಕೇವಲ ಒಂದು ಶೇಕಡಾ ಜನರು ರಾಷ್ಟ್ರದ ಶೇಕಡಾ 40ರಷ್ಟು ಸಂಪತ್ತನ್ನು ನಿಯಂತ್ರಿಸುತ್ತಿದ್ದಾರೆ. ನಾನು ಒಂದು ಸಾಲಿನಲ್ಲಿ ಸ್ಪಷ್ಟವಾದ ವಿಷಯವನ್ನು ಹೇಳುತ್ತೇನೆ. ಆ ಕೋಟ್ಯಾಧಿಪತಿಗಳಿಗೆ ಮೋದಿ ನೀಡಿದ ಸಂಪತ್ತನ್ನು ನಾವು ದೇಶದ ಬಡ ಜನರಿಗೆ ಹಂಚಲಿದ್ದೇವೆ ಎಂದು ಭರವಸೆ ನೀಡಿದರು.