ಬೆಂಗಳೂರು:ಚುನಾವಣಾ ವ್ಯವಸ್ಥೆಯಲ್ಲಿ ಅಡ್ಡ ಮತದಾನಕ್ಕೆ ಜನ್ಮ ಕೊಟ್ಟಿದ್ದೇ ಕಾಂಗ್ರೆಸ್ ಪಕ್ಷ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ ನಡೆಸಿದ್ದಾರೆ. ವಿಧಾನಸೌಧದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆಯಲ್ಲಿ ಬಿಜೆಪಿ ಶಾಸಕರಿಂದ ಅಡ್ಡ ಮತದಾನ ಮಾಡಿಸಿದ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ದೇಶ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷ ದೊಡ್ಡ ಕಳಂಕ. ಆತ್ಮಸಾಕ್ಷಿ ಮತದಿಂದ ಅಲ್ಲ, ಅಡ್ಡ ಮತದಾನದಿಂದ ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಇದು ಪ್ರಜಾಪ್ರಭುತ್ವ, ಸಂವಿಧಾನ ಎಂದೆಲ್ಲ ಭಜನೆ ಮಾಡುವ ಪಕ್ಷ ಮಾಡುವ ಕೆಲಸವೇ? ಎಂದು ಕೇಳಿದರು.
ಆತ್ಮಸಾಕ್ಷಿ ಮತ ಎಂದರೆ ಅಡ್ಡಮತನಾ?:ಆತ್ಮಸಾಕ್ಷಿ ಮತ ಎನ್ನುವ ಪದವನ್ನು ದೇಶದಲ್ಲಿ ಮೊದಲು ಹುಟ್ಟು ಹಾಕಿದ್ದೇ ಕಾಂಗ್ರೆಸ್. ಆತ್ಮಸಾಕ್ಷಿ ಮತ ಎಂದರೆ ಅಡ್ಡಮತ ಎಂದೇ ಅರ್ಥ. 1969ರಲ್ಲಿ ಅಂದಿನ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಕೈಗೊಂಬೆ ರಾಷ್ಟ್ರಪತಿ ಬೇಕೆಂದು ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವ ರೆಡ್ಡಿ ಅವರ ವಿರುದ್ಧ ವಿ.ವಿ.ಗಿರಿ ಅವರನ್ನು ಕಣಕ್ಕಿಳಿಸಿ ಆತ್ಮಸಾಕ್ಷಿ ಮತ ಹಾಕುವಂತೆ ಕರೆ ನೀಡಿದ್ದರು. ಅಂದು ಪಕ್ಷದ ಅಧಿಕೃತ ಅಭ್ಯರ್ಥಿಯಾಗಿದ್ದ ನೀಲಂ ಸಂಜೀವ ರೆಡ್ಡಿ ಅವರು ಆತ್ಮಸಾಕ್ಷಿ ಅಲಿಯಾಸ್ ಅಡ್ಡ ಮತಗಳಿಂದ ಸೋತರು. ಅಡ್ಡ ಮತ ಪರಿಕಲ್ಪನೆಯ ಜನಕನೇ ಕಾಂಗ್ರೆಸ್ ಎಂದು ಟೀಕಿಸಿದರು.
ನಾವು ಮತ್ತಷ್ಟು ಗಟ್ಟಿಯಾಗಿದ್ದೇವೆ: ರಾಜ್ಯಸಭೆ ಚುನಾವಣೆಯ ಮೂಲಕ ಜೆಡಿಎಸ್-ಬಿಜೆಪಿ ಮೈತ್ರಿ ಮತ್ತಷ್ಟು ಬಲವಾಗಿದೆ. ಪ್ರಜಾಪ್ರಭುತ್ವ ದ್ರೋಹಿಗಳು, ಸಂವಿಧಾನ ದ್ರೋಹಿಗಳು ಯಾರು? ಎಂಬುದು ಜಗಾಜ್ಜಾಹೀರಾಗಿದೆ. ಕಾಂಗ್ರೆಸ್‌ನಿಂದ ಬಿಜೆಪಿಗೆ ಹಾರಿ ಅಲ್ಲಿ ಅಧಿಕಾರ ಅನುಭವಿಸಿದವರು ಈಗ ಅದೇ ಬಿಜೆಪಿಗೆ ಟೋಪಿ ಹಾಕಿ ಅಡ್ಡ ಮತದಾನ ಮಾಡಿ ದ್ರೋಹ ಎಸಗಿದ್ದಾರೆ. ಅವರು ಏಳೆಂಟು ತಿಂಗಳಿಂದ ಏನೇನು ಮಾಡುತ್ತಿದ್ದರು ಎಂದು ಮಾಧ್ಯಮಗಳೇ ತೋರಿಸಿವೆ. ಇದರಿಂದ ಬಿಜೆಪಿಗೇನೂ ಶಾಕ್ ಆಗಿಲ್ಲ, ನನಗೂ ಆಗಿಲ್ಲ. ಈ ಚುನಾವಣೆ ಇರಲಿ, ಲೋಕಸಭೆ ಚುನಾವಣೆಯಲ್ಲಿ ಅಸಲಿ ಆಟವಿದೆ ಎಂದು ಹೆಚ್‌ಡಿಕೆ ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.