ಕರ್ನಾಟಕ

karnataka

ETV Bharat / state

ಪರಿಷತ್ ಚುನಾವಣೆ: ರಾಯಚೂರಿನ ಮೂವರು ನಾಯಕರಿಗೆ ಕಾಂಗ್ರೆಸ್‌ ಟಿಕೆಟ್​ - Council Election - COUNCIL ELECTION

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್​ನಿಂದ ರಾಯಚೂರಿನ ಮೂವರು ನಾಯಕರಿಗೆ ಟಿಕೆಟ್​ ಒಲಿದಿದೆ.

Basavanagowda Badarly, Vasantakumar
ಬಸವನಗೌಡ ಬಾದರ್ಲಿ, ವಸಂತಕುಮಾರ (ETV Bharat)

By ETV Bharat Karnataka Team

Published : Jun 2, 2024, 10:33 PM IST

ರಾಯಚೂರು: ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಟಿಕೆಟ್‌ಗಾಗಿ ಭಾರೀ ಪೈಪೋಟಿ ನಡೆದಿತ್ತು. ಇದರ ನಡುವೆ ಇಂದು ಎಐಸಿಸಿ ತನ್ನ ಎಂಟು ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಈ ಎಂಟು ಅಭ್ಯರ್ಥಿಗಳ ಪೈಕಿ ರಾಯಚೂರು ಜಿಲ್ಲೆಯ ಮೂವರಿಗೆ ಟಿಕೆಟ್ ಒಲಿದಿದೆ.

ಹಾಲಿ ಸಚಿವರಾದ ಎನ್.ಎಸ್.ಬೋಸರಾಜು, ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ವಸಂತ ಕುಮಾರ ಹಾಗೂ ಯೂತ್ ಕಾಂಗ್ರೆಸ್ ಮಾಜಿ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ ಅವರಿಗೆ ಟಿಕೆಟ್ ಘೋಷಿಸಿ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ ಆದೇಶಿಸಿದ್ದಾರೆ.

ಎನ್.ಎಸ್.ಬೋಸರಾಜು: ಹಾಲಿ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಸಣ್ಣ ನೀರಾವರಿ ಖಾತೆ ಸಚಿವ ಎನ್.ಎಸ್.ಬೋಸರಾಜು ಜಿಲ್ಲೆಯ ಮಾನ್ವಿ ವಿಧಾನಸಭೆ ಕ್ಷೇತ್ರದಿಂದ 1999 ಮತ್ತು 2004ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಧರ್ಮಸಿಂಗ್ ಸಿಎಂ ಆಗಿದ್ದಾಗ ಅವರ ರಾಜಕೀಯ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದರು.

ಎಐಸಿಸಿ ಕಾರ್ಯದರ್ಶಿಯಾಗಿ, ತುಂಗಭದ್ರಾ (ಕಾಡಾ) ಅಧ್ಯಕ್ಷರಾಗಿ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ವಿಧಾನಪರಿಷತ್ ಶಾಸಕ ಅಲ್ಲದಿದ್ದರೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆದು ಸಚಿವ ಸ್ಥಾನ ಪಡೆಯುವ ಮೂಲಕ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದ್ದರು.

ಎ.ವಸಂತಕುಮಾರ: ರಾಜಕೀಯ ಕುಟುಂಬದಿಂದ ಬಂದ ಪರಿಶಿಷ್ಟ ಜಾತಿಗೆ (ಮಾದಿಗ) ಸೇರಿದ ಎ. ವಸಂತಕುಮಾರ ನಗರಸಭೆ ಸದಸ್ಯರಾಗಿ ಎರಡು ಬಾರಿ ಆಯ್ಕೆಯಾಗಿದ್ದರು. ನಂತರ ಎರಡು ಅವಧಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಇತ್ತೀಚೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡಿದ್ದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಬಲಿಗರು ಆಗಿದ್ದು, ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡು ಬಂದಿದ್ದಾರೆ.

ಬಸನಗೌಡ ಬಾದರ್ಲಿ: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಬಾದರ್ಲಿ ಗ್ರಾಮದವರಾಗಿದ್ದು, ಲಿಂಗಾಯತ ರೆಡ್ಡಿ ಸಮುದಾಯಕ್ಕೆ ಸೇರಿದವರು. ಬಸನಗೌಡ ಬಾದರ್ಲಿ ಮೂಲತಃ ರೈತ ಕುಟುಂಬದಿಂದ ಬಂದವರು. ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡಿದ್ದು, ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಪಕ್ಷದ ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸಿದ್ದರು. ಪಕ್ಷೇತರರಾಗಿ ಸ್ಪರ್ಧೆಗೆ ಮುಂದಾಗಿದ್ದಾಗ ಸುರ್ಜೇವಾಲಾ ಮಧ್ಯಸ್ಥಿಕೆವಹಿಸಿ ಲೋಕಸಭೆ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಲೋಕಸಭೆ ಚುನಾವಣೆಯಲ್ಲೂ ಟಿಕೆಟ್ ನೀಡದ ಕಾರಣ ಪರಿಷತ್ ಟಿಕೆಟ್ ನೀಡಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ:ವಿಧಾನ ಪರಿಷತ್ ಚುನಾವಣೆ: ರಾಯಚೂರಿಗೆ 3 ಸ್ಥಾನ, ಯತೀಂದ್ರ ಸೇರಿ 8 'ಕೈ' ಅಭ್ಯರ್ಥಿಗಳ ಹೆಸರು ಪ್ರಕಟ - Council Election

ABOUT THE AUTHOR

...view details