ಮೈಸೂರು : ನನ್ನನ್ನು ಗೆಲ್ಲಿಸುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗೌರವ ತಂದುಕೊಡಿ ಎಂದು ಮೈಸೂರು - ಕೊಡಗು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ. ಲಕ್ಷ್ಮಣ್ ಅವರು ಮನವಿ ಮಾಡಿದರು. ನಗರದ ಕಾಂಗ್ರೆಸ್ ಭವನದಲ್ಲಿ ಜಿಲ್ಲಾ, ನಗರ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತರ ಜಿಲ್ಲಾ ಘಟಕದ ಸಹಯೋಗದಲ್ಲಿ ನಡೆದ ಜಿಲ್ಲೆಯ ವಿಧಾನ ಸಭಾ ಕ್ಷೇತ್ರಗಳ ಅಲ್ಪಸಂಖ್ಯಾತರ ಘಟಕದ ಪದಾಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.
ಕಳೆದ 10 ವರ್ಷಗಳಿಂದ ಸ್ವಂತ ಜಿಲ್ಲೆಯಲ್ಲಿ ಲೋಕಸಭಾ ಅಭ್ಯರ್ಥಿ ಸೋತಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನಸ್ಸಿನಲ್ಲಿ ಕೊರಗಿದೆ. ಕುರುಬ ಸಮುದಾಯಕ್ಕೆ ಟಿಕೆಟ್ ನೀಡಿದ್ದರಿಂದ ಸೋಲಾಯಿತು ಎಂಬ ಕಾರಣ ಬಂದ ಹಿನ್ನೆಲೆಯಲ್ಲಿ ಈ ಬಾರಿ ಒಕ್ಕಲಿಗ ಸಮುದಾಯದವರು ನನಗೆ ಟಿಕೆಟ್ ಕೊಟ್ಟಿದ್ದಾರೆ. ಒಕ್ಕಲಿಗ ಸಮುದಾಯ ಮತ ನೀಡಬೇಕು ಎಂದು ಮನವಿ ಮಾಡಿದರು.
ನಾನು ಹಣೆಯ ಮೇಲೆ ಜಾತಿ ಹೆಸರು ಬರೆದುಕೊಂಡವನಲ್ಲ. ನಾನು ಹುಟ್ಟಿದ್ದು ಒಕ್ಕಲಿಗನಾಗಿ. ಆದರೆ, ಬೆಳೆಯುತ್ತ ವಿಶ್ವಮಾನವನಾದೆ. ಆದರೆ, ಪ್ರತಾಪ ಸಿಂಹ ಟಿಕೆಟ್ ತಪ್ಪಿರುವ ಹತಾಶೆಯಿಂದ ಮಾಧ್ಯಮಗಳ ಮುಂದೆ ಜಾತಿ ಪ್ರಶ್ನಿಸುತ್ತಿದ್ದಾರೆ. ನನ್ನನ್ನು ಜೈಲಿಗೆ ಕಳುಹಿಸುತ್ತೇನೆ ಎಂಬ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಅವರ ವಿರುದ್ಧ ಮಾತನಾಡಬಾರದು ಎಂದು ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದಾರೆ. ಇದಕ್ಕೆ ಕಾರಣ ಕೇಳಿದರೆ ಉತ್ತರಿಸುತ್ತಿಲ್ಲ ಎಂದು ಹೇಳಿದರು.
ಮೈಸೂರು ಕೊಡಗು ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಪೂರಕ ವಾತಾವರಣವಿದೆ. ಇಂತಹ ಸಂದರ್ಭದಲ್ಲಿ ನನ್ನನ್ನು ಸೋಲಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವಮಾನ ಮಾಡಬೇಡಿ. ನಾನು ಸೋತು ಸೋತು ಸಾಕಾಗಿದೆ. ಕೊನೆಯದಾಗಿ ಕಾಂಗ್ರೆಸ್ ಪಕ್ಷ ಅವಕಾಶ ನೀಡಿದೆ. ಈ ಬಾರಿ ಸೋತರೆ ಸತ್ತಂತೆ ಎಂದು ಪುನರ್ ಉಚ್ಚರಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಜೈಲಿಗೆ ಕಳುಹಿಸಲು ಯತ್ನಿಸಲಾಗುತ್ತಿದೆ. ಕೇಂದ್ರದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ಅಲ್ಪಸಂಖ್ಯಾತರು, ದಲಿತರು, ಹಿಂದುಳಿದ ವರ್ಗಗಳನ್ನು ಭಿಕ್ಷುಕರನ್ನಾಗಿ ಮಾಡಲಿದೆ. ಈಗಾಗಲೇ ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಿ ಮೀಸಲಾತಿ ಸೌಲಭ್ಯ ದೊರೆಕದಂತೆ ಮಾಡುತ್ತಿದೆ. ಏಕರೂಪ ಚುನಾವಣೆ ನಡೆಸಿ ಪ್ರಜಾಪ್ರಭುತ್ವವನ್ನು ಸಂಪೂರ್ಣ ನಾಶಗೊಳಿಸಲಿದೆ ಎಂದು ದೂರಿದರು.