ಬೆಂಗಳೂರು/ಕೋಲಾರ:ಕಾಂಗ್ರೆಸ್ ಗೆ ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಹೈಕಮಾಂಡ್ ಮೂರನೇ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಕೋಲಾರದಲ್ಲಿ ಕಾಂಗ್ರೆಸ್ ಬಣ ರಾಜಕೀಯ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿತ್ತು. ಇದೀಗ ಬಣಗಳ ಹೊರಗಿನ ಮೂರನೇ ಅಭ್ಯರ್ಥಿ ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಗೌತಮ್ ಗೆ ಟಿಕೆಟ್ ನೀಡಲಾಗಿದೆ. ಇವರು ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಕೋಲಾರದಿಂದ ರಾಜ್ಯಸಭೆ ಮಾಜಿ ಸದಸ್ಯ ಡಾ. ಎಲ್. ಹನುಮಂತಯ್ಯ, ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸಚಿವ ಕೆ.ಹೆಚ್. ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸಲು ಪಟ್ಟು ಹಿಡಿದಿದ್ದರು. ಹೈಕಮಾಂಡ್, ಸಿಎಂ ಸಿದ್ದರಾಮಯ್ಯ, ಡಿಕೆಶಿ ಮುಂದೆ ಪ್ರಬಲ ಲಾಬಿ ನಡೆಸಿದ್ದರು.
ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡುವ ಬಗ್ಗೆ ಮಾಜಿ ಸಚಿವ ರಮೇಶ್ ಕುಮಾರ್ ಬಣ ವಿರೋಧ ವ್ಯಕ್ತಪಡಿಸಿದ್ದರು. ಸಚಿವರ ಅಳಿಯನಿಗೆ ಟಿಕೆಟ್ ಬಹುತೇಕ ಫಿಕ್ಸ್ ಎಂಬ ಮಾಹಿತಿ ಬಂದ ಹಿನ್ನೆಲೆ ಕೋಲಾರ ಶಾಸಕರು ರಾಜೀನಾಮೆ ನೀಡುವ ಹಂತದವರೆಗೆ ಹೋಗಿ ಸಚಿವ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡದಂತೆ ಬಂಡಾಯ ಎದ್ದಿದ್ದರು. ಎರಡೂ ಕಡೆಯಿಂದ ನಾ ಕೊಡೆ ನಾ ಬಿಡೆ ಎಂಬಂತಾದ ಕಾರಣ ಕೊನೆಯದಾಗಿ ಮೂರನೇ ಅಭ್ಯರ್ಥಿಗೆ ಹೈಕಮಾಂಡ್ ಮಣೆ ಹಾಕಿದೆ.
ಕ್ಷೇತ್ರದ ಇಬ್ಬರು ಪ್ರಭಾವಿ ನಾಯಕರ ಬಣ ರಾಜಕೀಯದ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿಗಳ ಮೇಲಾಗುವುದು ಬೇಡ ಎಂಬ ಉದ್ದೇಶದಿಂದ ಇದೀಗ ಯಾವುದೇ ಬಣದಿಂದ ಗುರುತಿಸಲ್ಪಡದ ಮೂರನೇ ವ್ಯಕ್ತಿಗೆ ಹೈಕಮಾಂಡ್ ಮಣೆ ಹಾಕಿದೆ. ಅಲ್ಲಿಗೆ ಕಾಂಗ್ರೆಸ್ ರಾಜ್ಯದ ಎಲ್ಲಾ 28 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.