ಕರ್ನಾಟಕ

karnataka

ETV Bharat / state

ಬೆಳಗಾವಿ ಲೋಕಸಭೆ ಕ್ಷೇತ್ರದ ಸಂಪೂರ್ಣ ಇತಿಹಾಸ, ಸಂಸದರ ಪಟ್ಟಿ ಇಲ್ಲಿದೆ - Belagavi Constituency Profile - BELAGAVI CONSTITUENCY PROFILE

ಬೆಳಗಾವಿ ಲೋಕಸಭಾ ಕ್ಷೇತ್ರ 19ನೇ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದೆ. ಬಿಜೆಪಿಯಿಂದ ಜಗದೀಶ ಶೆಟ್ಟರ್ ಕಣಕ್ಕಿಳಿದರೆ, ಕಾಂಗ್ರೆಸ್​​ನಿಂದ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಸ್ಪರ್ಧಿಸುತ್ತಿದ್ದಾರೆ.

BELAGAVI LOK SABHA CONSTITUENCY
BELAGAVI LOK SABHA CONSTITUENCY

By ETV Bharat Karnataka Team

Published : Apr 12, 2024, 7:57 PM IST

ಬೆಳಗಾವಿ: ಬೆಳಗಾವಿ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಲೋಕಸಭಾ ಕ್ಷೇತ್ರ. ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರುವ ಘಟಾನುಘಟಿ ನಾಯಕರ ತವರೂರು ಕೂಡಾ ಹೌದು. ರಾಜ್ಯದಲ್ಲಿ ಒಂದು ಸರ್ಕಾರವನ್ನು ಕೈಬಿಡುವ, ಮತ್ತೊಂದು ಸರ್ಕಾರವನ್ನು ತಂದು ಕೂರಿಸುವ ತಾಕತ್ತು ಈ ಕ್ಷೇತ್ರಕ್ಕಿದೆ. ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಳಗಾವಿ, ಕಳೆದ ಐದು ಚುನಾವಣೆಗಳಲ್ಲಿ ಬಿಜೆಪಿ ವಶದಲ್ಲಿದೆ. 14 ಬಾರಿ ಲಿಂಗಾಯತ ನಾಯಕರು ಗೆಲುವು ಸಾಧಿಸಿದ್ದಾರೆ.

ಉಭಯ ಪಕ್ಷಗಳ ಅಭ್ಯರ್ಥಿಗಳು

ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭೆ ಕ್ಷೇತ್ರಗಳಿವೆ. ಅವುಗಳೆಂದರೆ ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಅರಭಾವಿ, ಗೋಕಾಕ, ಸವದತ್ತಿ, ರಾಮದುರ್ಗ ಮತ್ತು ಬೈಲಹೊಂಗಲ. ಈ ಪೈಕಿ ಸದ್ಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಮೂರು ಕ್ಷೇತ್ರಗಳಲ್ಲಿ ಬಿಜೆಪಿಯವರಿದ್ದಾರೆ. 1957ರಿಂದ ಇದುವರೆಗೆ ಎರಡು ಉಪಚುನಾವಣೆಗಳು ನಡೆದಿವೆ. 18 ಸಾರ್ವತ್ರಿಕ ಚುನಾವಣೆಗಳನ್ನು ಕ್ಷೇತ್ರ ಕಂಡಿದೆ.

1957ರಿಂದ 2019ರವರೆಗೆ ಕಾಂಗ್ರೆಸ್‌ 11 ಬಾರಿ, ಜನತಾದಳ ಒಮ್ಮೆ ಹಾಗೂ ಬಿಜೆಪಿ 6 ಬಾರಿ ಜಯ ಗಳಿಸಿವೆ. ಕಾಂಗ್ರೆಸ್‌ ಪಕ್ಷದ 11 ಗೆಲುವಿನಲ್ಲಿ ಜಗಜೀವನ ರಾಂ ಗುಂಪಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದಿಂದ 1971ರಲ್ಲಿ ಸ್ಪರ್ಧಿಸಿದ್ದ ಎ.ಕೆ.ಕೊಟ್ರಶೆಟ್ಟಿ ಗೆಲುವು ಸಾಧಿಸಿದ್ದರು. 1980ರಿಂದ 1991ರವರೆಗೆ ಸತತ 4 ಬಾರಿ ಕಾಂಗ್ರೆಸ್‌ನಿಂದ ಎಸ್.ಬಿ.‌ಸಿದ್ನಾಳ ಗೆದ್ದಿದ್ದರು. ಕಾಂಗ್ರೆಸ್ ಭದ್ರಕೋಟೆಯಲ್ಲಿ 2004ರಿಂದ ಸತತವಾಗಿ ನಾಲ್ಕು ಬಾರಿ ಗೆಲ್ಲುವ ಮೂಲಕ ಸುರೇಶ ಅಂಗಡಿ ಅವರು ಸಿದ್ನಾಳ ಅವರ ದಾಖಲೆ ಸರಿಗಟ್ಟಿದ್ದರು. ಸುರೇಶ ಅಂಗಡಿ ಅಕಾಲಿಕ ಸಾವಿನ ಬಳಿಕ ನಡೆದ ಉಪಚುನಾವಣೆಯಲ್ಲಿ‌ ಅವರ ಪತ್ನಿ ಮಂಗಲಾ ಅಂಗಡಿ ಗೆದ್ದು, ಕ್ಷೇತ್ರದಲ್ಲಿ ಬಿಜೆಪಿ‌‌ ತನ್ನ ಪಾರುಪತ್ಯ ಮುಂದುವರಿಸಿತು. ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದರೂ ಎರಡು ಬಾರಿ ಬ್ರಾಹ್ಮಣ ಸಮುದಾಯದ ಬಿ‌.ಎನ್.ದಾತಾರ್, ಒಮ್ಮೆ ಕುರುಬ ಸಮುದಾಯದ ಅಮರಸಿಂಹ ಪಾಟೀಲ, ಒಮ್ಮೆ ಮುಸ್ಲಿಂ ಸಮುದಾಯದ ಎನ್.ಎಂ.ನಬೀಸಾಬ ಲೋಕಸಭೆಗೆ ಆಯ್ಕೆಯಾಗಿದ್ದರು. ಒಟ್ಟು 18 ಚುನಾವಣೆಗಳಲ್ಲಿ 14 ಬಾರಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳೇ ಗೆದ್ದು ಬಂದಿದ್ದಾರೆ.

ಜಾತಿ ಲೆಕ್ಕಾಚಾರ: ಲಿಂಗಾಯತ ಮತದಾರರು 5.5 ಲಕ್ಷ, ಎಸ್ಸಿ-ಎಸ್ಟಿ 2.83 ಲಕ್ಷ, ಮರಾಠಾ 2.50 ಲಕ್ಷ, ಮುಸ್ಲಿಂ 3 ಲಕ್ಷ, ಕುರುಬ 2 ಲಕ್ಷ, ಜೈನ 50 ಸಾವಿರ, ಉಪ್ಪಾರ 80 ಸಾವಿರ, ಬ್ರಾಹ್ಮಣ 60 ಸಾವಿರ, ಲಂಬಾಣಿ 45 ಸಾವಿರ, ಹಣಬರ 20 ಸಾವಿರ ಮತದಾರರು ಇದ್ದಾರೆ.

ಸಮುದಾಯಮತದಾರರು
ಲಿಂಗಾಯತ 5.5 ಲಕ್ಷ
ಎಸ್ಸಿ-ಎಸ್ಟಿ 2.83 ಲಕ್ಷ
ಮರಾಠಾ 2.50 ಲಕ್ಷ
ಮುಸ್ಲಿಂ 3 ಲಕ್ಷ
ಕುರುಬ 2 ಲಕ್ಷ
ಜೈನ 50 ಸಾವಿರ
ಉಪ್ಪಾರ 80 ಸಾವಿರ
ಬ್ರಾಹ್ಮಣ 60 ಸಾವಿರ
ಲಂಬಾಣಿ 45 ಸಾವಿರ
ಹಣಬರ 20 ಸಾವಿರ

ಈವರೆಗೆ ಗೆದ್ದ ಸಂಸದರ ಪಟ್ಟಿ:1957 ಹಾಗೂ 1962ರಲ್ಲಿ ನಡೆದ ಎರಡೂ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಬಿ.ಎನ್.ದಾತಾರ್ ಗೆದ್ದರೆ, 1963ರಲ್ಲಿ ನಡೆದ ಚುನಾವಣೆಯಲ್ಲಿ ಹೆಚ್.ವಿ.ಕೌಜಲಗಿ ಕಾಂಗ್ರೆಸ್​ನಿಂದ, 1967ರಲ್ಲಿ ಎನ್.ಎಂ.ನಬೀಸಾಬ್ ಕಾಂಗ್ರೆಸ್​ನಿಂದ, 1971ರಲ್ಲಿ ಎ.ಕೆ.ಕೊಟ್ರಶೆಟ್ಟಿ ಎನ್‌.ಸಿ.ಜಿ.(ಜಗಜೀವನ್ ರಾಮ್ ಗುಂಪು) ಪಕ್ಷದಿಂದ, 1977ರಲ್ಲಿ ಎ.ಕೆ.ಕೊಟ್ರಶೆಟ್ಟಿ ಕಾಂಗ್ರೆಸ್​ನಿಂದ, 1980, 1984, 1989 ಮತ್ತು 1991ರಲ್ಲಿ ನಡೆದ ನಾಲ್ಕೂ ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಎಸ್.ಬಿ. ಸಿದ್ನಾಳ ಆಯ್ಕೆ ಆಗಿದ್ದಾರೆ.

ಬೆಳಗಾವಿ

1996ರಲ್ಲಿ ಶಿವಾನಂದ ಕೌಜಲಗಿ ಜನತಾದಳದಿಂದ, 1998ರಲ್ಲಿ ಬಾಬಾಗೌಡ ಪಾಟೀಲ ಬಿಜೆಪಿಯಿಂದ, 1999ರಲ್ಲಿ ಅಮರಸಿಂಹ ಪಾಟೀಲ ಕಾಂಗ್ರೆಸ್​ನಿಂದ, 2004, 2009, 2014 ಮತ್ತು 2019ರಲ್ಲಿ ನಡೆದ ಈ ನಾಲ್ಕೂ ಚುನಾವಣೆಯಲ್ಲಿ ಬಿಜೆಪಿಯಿಂದ ಸುರೇಶ ಅಂಗಡಿ ಗೆದ್ದರೆ, 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅವರ ಪತ್ನಿ ಮಂಗಲ ಆಯ್ಕೆ ಆಗಿದ್ದರು.

ಕ್ರ.ಸವರ್ಷಅಭ್ಯರ್ಥಿಗಳ ಹೆಸರುಪಕ್ಷ
1 1957 ಬಿ.ಎನ್.ದಾತಾರ್ ಕಾಂಗ್ರೆಸ್
2 1962 ಬಿ.ಎನ್.ದಾತಾರ್ ಕಾಂಗ್ರೆಸ್
3 1963 ಹೆಚ್.ವ್ಹಿ.ಕೌಜಲಗಿ ಕಾಂಗ್ರೆಸ್
4 1967 ಎನ್.ಎಂ.ನಬೀಸಾಬ್ ಕಾಂಗ್ರೆಸ್
5 1971 ಎ.ಕೆ.ಕೊಟ್ರಶೆಟ್ಟಿ ಎನ್‌.ಸಿ.ಜಿ
6 1977 ಎ.ಕೆ.ಕೊಟ್ರಶೆಟ್ಟಿ ಕಾಂಗ್ರೆಸ್
7 1980 ಎಸ್.ಬಿ. ಸಿದ್ನಾಳ ಕಾಂಗ್ರೆಸ್
8 1984 ಎಸ್.ಬಿ. ಸಿದ್ನಾಳ ಕಾಂಗ್ರೆಸ್
9 1989 ಎಸ್.ಬಿ. ಸಿದ್ನಾಳ ಕಾಂಗ್ರೆಸ್
10 1991 ಎಸ್.ಬಿ. ಸಿದ್ನಾಳ ಕಾಂಗ್ರೆಸ್
11 1996 ಶಿವಾನಂದ ಕೌಜಲಗಿ ಜನತಾದಳ
12 1998 ಬಾಬಾಗೌಡ ಪಾಟೀಲ ಬಿಜೆಪಿ
13 1999 ಅಮರಸಿಂಹ ಪಾಟೀಲ ಕಾಂಗ್ರೆಸ್
14 2004 ಸುರೇಶ ಅಂಗಡಿ ಬಿಜೆಪಿ
15 2009 ಸುರೇಶ ಅಂಗಡಿ ಬಿಜೆಪಿ
16 2014 ಸುರೇಶ ಅಂಗಡಿ ಬಿಜೆಪಿ
17 2019 ಸುರೇಶ ಅಂಗಡಿ ಬಿಜೆಪಿ
18 2021 ಮಂಗಲ ಸುರೇಶ ಅಂಗಡಿ ಬಿಜೆಪಿ

ಹಿಂದಿನ 5 ಚುನಾವಣೆಗಳ ವಿವರ:

2004ರ ಚುನಾವಣೆ:ಬಿಜೆಪಿಯಿಂದ ಸ್ಪರ್ಧಿಸಿದ್ದ ಸುರೇಶ ಅಂಗಡಿ 4,10,843 ಮತಗಳನ್ನು ಪಡೆದು ಮೊದಲ ಬಾರಿ ಸಂಸದರಾದರು. ಕಾಂಗ್ರೆಸ್ ಅಭ್ಯರ್ಥಿ ಅಮರಸಿಂಹ ಪಾಟೀಲ 3,26,090 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರೆ, ಜೆಡಿಎಸ್​ನಿಂದ ಕಣಕ್ಕಿಳಿದಿದ್ದ ಜಮೀಲ್ ಅಹ್ಮದ್ ಕಾಸಿಂಸಾಹೇಬ ರೇಝಾ 66,831 ಮತಗಳನ್ನು ಪಡೆದು ಮೂಲರನೇ ಸ್ಥಾನಕ್ಕೆ ಕುಸಿದಿದ್ದರು. 84,753 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಕಂಡಿದ್ದರು.

ಪಕ್ಷಅಭ್ಯರ್ಥಿಗಳುಪಡೆದ ಮತಗಳು
ಬಿಜೆಪಿ ಸುರೇಶ ಅಂಗಡಿ 4,10,843
ಕಾಂಗ್ರೆಸ್ ಅಮರಸಿಂಹ ಪಾಟೀಲ್​ 3,26,090
ಜೆಡಿಎಸ್ ಜಮೀಲ್ ಅಹ್ಮದ್ ರೇಝಾ 66,831
ಗೆಲುವಿನ ಅಂತರ 84,753

2009ರ ಚುನಾವಣೆ:ಬಿಜೆಪಿಯಿಂದ ಮತ್ತೆ ಕಣಕ್ಕಿಳಿದಿದ್ದ ಸುರೇಶ ಅಂಗಡಿ ಅವರು 3,84,324 ಮತಗಳನ್ನು ಪಡೆದು ಎರಡನೇ ಬಾರಿ ಸಂಸತ್​ಗೆ ಆಯ್ಕೆ ಆದರು. ಕಾಂಗ್ರೆಸ್​ನಿಂದ ಮತ್ತೆ ಸ್ಪರ್ಧಿಸಿದ್ದ ಅಮರಸಿಂಹ ಪಾಟೀಲ 2,65,637 ಮತಗಳನ್ನು ಪಡೆದು ಮತ್ತೆ ಸೋಲು ಕಂಡರು. 68,594 ಮತಗಳನ್ನು ಪಡೆದ ಜೆಡಿಎಸ್ ಅಭ್ಯರ್ಥಿ ಎ.ಬಿ.ಪಾಟೀಲ ಸ್ಥಾನ ಮೂರಕ್ಕೆ ಕುಸಿದಿದ್ದರು. ಸುರೇಶ ಅಂಗಡಿ 1,18,687 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

ಪಕ್ಷಅಭ್ಯರ್ಥಿಗಳುಪಡೆದ ಮತಗಳು
ಬಿಜೆಪಿ ಸುರೇಶ ಅಂಗಡಿ 3,84,324
ಕಾಂಗ್ರೆಸ್ ಅಮರಸಿಂಹ ಪಾಟೀಲ 2,65,637
ಜೆಡಿಎಸ್ ಎ.ಬಿ.ಪಾಟೀಲ 68,594
ಗೆಲುವಿನ ಅಂತರ 1,18,687

2014ರ ಚುನಾವಣೆ:ಬಿಜೆಪಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಿದ್ದ ಸುರೇಶ ಅಂಗಡಿ ಅವರು 5,54,417 ಮತಗಳನ್ನು ಪಡೆದು ಮತ್ತೆ ಸಂಸತ್​ ಪ್ರವೇಶ ಮಾಡಿದರು. ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ 4,78,557 ಮತಗಳನ್ನು ಪಡೆದರೆ, ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಮುತ್ತಪ್ಪ ಅಂಗಡಿ 8,524 ಮತ ಪಡೆದು ಸೋಲು ಕಂಡಿದ್ದರು. ಸುರೇಶ ಅಂಗಡಿ ಅವರು 75,860 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.

ಪಕ್ಷಅಭ್ಯರ್ಥಿಗಳುಪಡೆದ ಮತಗಳು
ಬಿಜೆಪಿ ಸುರೇಶ ಅಂಗಡಿ 5,54,417
ಕಾಂಗ್ರೆಸ್ ಲಕ್ಷ್ಮೀ ಹೆಬ್ಬಾಳ್ಕರ್ 4,78,557
ಆಪ್​ ಮುತ್ತಪ್ಪ ಅಂಗಡಿ 8,524
ಗೆಲುವಿನ ಅಂತರ 75,860

2019ರ ಚುನಾವಣೆ:ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸುರೇಶ ಅಂಗಡಿ ಅವರು ಬರೋಬ್ಬರಿ 7,56,986 ಮತಗಳನ್ನು ಪಡೆದು ಸತತ ನಾಲ್ಕನೆ ಬಾರಿ ಗೆಲುವಿನ ನಗೆ ಬೀರಿದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ. ವಿರೂಪಾಕ್ಷ ಸಾಧುನವರ ಅವರು 3,69,944 ಮತಗಳನ್ನು, ಐಎನ್​​ಡಿಪಿ ಅಭ್ಯರ್ಥಿಯಾಗಿದ್ದ ಗಣೇಶ ದಡ್ಡಿಕರ್ 8150 ಮತಗಳನ್ನು ಪಡೆದು ಸೋಲು ಕಂಡಿದ್ದರು. 3,87,042 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಕಂಡಿದ್ದರು.

ಪಕ್ಷಅಭ್ಯರ್ಥಿಗಳುಪಡೆದ ಮತಗಳು
ಬಿಜೆಪಿ ಸುರೇಶ ಅಂಗಡಿ 7,56,986
ಕಾಂಗ್ರೆಸ್ ಡಾ. ವಿರೂಪಾಕ್ಷ ಸಾಧುನವರ 3,69,944
ಐಎನ್​​ಡಿಪಿ ಗಣೇಶ ದಡ್ಡಿಕರ್ 8150
ಗೆಲುವಿನ ಅಂತರ 3,87,042

2021(ಉಪ ಚುನಾವಣೆ)ಈ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸುರೇಶ ಅಂಗಡಿ ಅವರ ಪತ್ನಿ ಮಂಗಲ ಸುರೇಶ ಅಂಗಡಿ ಅವರು 4,40,327 ಮತಗಳನ್ನು ಸಂಸತ್ ಪ್ರವೇಶ ಮಾಡಿದರು. ಕಾಂಗ್ರೆಸ್​ನಿಂದ ಕಣಕ್ಕಿಳಿದಿದ್ದ ಸತೀಶ ಜಾರಕಿಹೊಳಿ ಅವರು 4,35,087 ಮತಗಳನ್ನು ಪಡೆದರೆ, ಪಕ್ಷೇತರ(ಎಂಇಸ್)ದಿಂದ ಸ್ಪರ್ಧಿಸಿದ್ದ ಶುಭಂ ಶೆಳ್ಕೆ ಅವರು 1,17,174 ಮತಗಳನ್ನು ಪಡೆದರು. ಗೆಲುವಿನ ಅಂತರ 5240.

ಸುರೇಶ ಅಂಗಡಿ ಅವರ ಕುಟುಂಬ
ಪಕ್ಷಅಭ್ಯರ್ಥಿಗಳುಪಡೆದ ಮತಗಳು
ಬಿಜೆಪಿ ಮಂಗಲ ಸುರೇಶ ಅಂಗಡಿ 4,40,327
ಕಾಂಗ್ರೆಸ್ ಸತೀಶ ಜಾರಕಿಹೊಳಿ 4,35,087
ಪಕ್ಷೇತರ(ಎಂಇಸ್) ಶುಭಂ ಶೆಳ್ಕೆ 1,17,174
ಗೆಲುವಿನ ಅಂತರ 5240

ಮೂವರಿಗೆ ಮಾತ್ರ ಮಂತ್ರಿ ಸ್ಥಾನ:ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸಂಪುಟದಲ್ಲಿ ಬಿ.ಎನ್.ದಾತಾರ್ ಕೇಂದ್ರ ಗೃಹ ವ್ಯವಹಾರಗಳ ಇಲಾಖೆ ರಾಜ್ಯ ಖಾತೆ ಸಚಿವರಾಗಿದ್ದರು. ಬಾಬಾಗೌಡ ಪಾಟೀಲ, ಅಟಲ್ ಬಿಹಾರಿ‌ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇನ್ನು ನರೇಂದ್ರ ಮೋದಿ ಸಂಪುಟದಲ್ಲಿ ಸುರೇಶ ಅಂಗಡಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾಗಿದ್ದರು.

19ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮಾಜಿ‌ ಸಿಎಂ ಜಗದೀಶ ಶೆಟ್ಟರ್ ಕಣಕ್ಕಿಳಿದರೆ, ಕಾಂಗ್ರೆಸ್​​ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್​ಗೆ ಟಿಕೆಟ್ ನೀಡಿದೆ.

ಇದನ್ನೂ ಓದಿ: ಲೋಕಸಭೆ ಚುನಾವಣೆ ಎರಡನೇ ಹಂತದ 14 ಕ್ಷೇತ್ರಗಳಿಗೆ ಅಧಿಸೂಚನೆ ಪ್ರಕಟ: ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭ - Second phase election

ABOUT THE AUTHOR

...view details