ಬೆಂಗಳೂರು: ಸ್ಕೂಟರ್ಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದು ಕಾಲೇಜು ವಿದ್ಯಾರ್ಥಿನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮಲ್ಲೇಶ್ವರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿಶ್ಚಂದ್ರ ಘಾಟ್ ಬಳಿ ಇಂದು ಬೆಳಿಗ್ಗೆ 8.30ರ ಸುಮಾರಿಗೆ ನಡೆಯಿತು. ಕುಸುಮಿತಾ (21) ಮೃತಪಟ್ಟ ಯುವತಿ ಎಂದು ಗುರುತಿಸಲಾಗಿದೆ.
ಖಾಸಗಿ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ ಕುಸುಮಿತಾ ಎಂದಿನಂತೆ ತಮ್ಮ ನಿವಾಸದಿಂದ ಕಾಲೇಜಿಗೆ ಸ್ಕೂಟರ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಬಿಎಂಟಿಸಿ ಬಸ್ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಕುಸುಮಿತಾ ಕೆಳಗೆ ಬಿದ್ದಿದ್ದಾರೆ. ಈ ವೇಳೆ ಬಸ್ ಹರಿದು ಸ್ಥಳದಲ್ಲೇ ಸಾವಿಗೀಡಾದರು ಎಂದು ತಿಳಿದುಬಂದಿದೆ. ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮಲ್ಲೇಶ್ವರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಈ ಬಗ್ಗೆ ಉತ್ತರ ವಿಭಾಗದ ಡಿಸಿಪಿ ಸಿರಿಗೌರಿ ಅವರು ಪ್ರತಿಕ್ರಿಯೆ ನೀಡಿದ್ದು, ''ಮಲ್ಲೇಶ್ವರಂ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತದಲ್ಲಿ 20 ವರ್ಷದ ಯುವತಿ ಸಾವನ್ನಪ್ಪಿದ್ದಾಳೆ. ಜೈನ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದಳು. ಇಂದು ಬೆಳಗ್ಗೆ ಬೆಳಗ್ಗೆ 8.30ರ ವೇಳೆ ದುರ್ಘಟನೆ ನಡೆದಿದೆ. ರಸ್ತೆ ಎಡಭಾಗದಲ್ಲಿ ಬರುತ್ತಿದ್ದ ಸ್ಕೂಟರ್ಗೆ ಟಚ್ ಆಗಿ ಬಸ್ ಕೆಳಗೆ ಬಿದ್ದಿದ್ದಾಳೆ. ಬಿದ್ದಿದ್ದ ಯುವತಿಯನ್ನ ಬಸ್ ಚಾಲಕ ನೋಡಿಲ್ಲ ಎಂದು ಹೇಳಲಾಗುತ್ತಿದೆ. ಮೇಲ್ನೋಟಕ್ಕೆ ಬಸ್ ಚಾಲಕನ ನಿರ್ಲಕ್ಷ್ಯ ಎಂದು ಕಂಡುಬಂದಿದೆ. ಚಾಲಕನ ವಿರುದ್ದ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆಸಲಾಗಿದೆ'' ಎಂದು ತಿಳಿಸಿದ್ದಾರೆ.