ಕಾರವಾರ:ತಿಂಗಳ ಹಿಂದೆ ಕುಸಿದು ಬಿದ್ದ ಕಾಳಿ ನದಿಯ ಹಳೆಯ ಸೇತುವೆಯ ಅವಶೇಷಗಳನ್ನು ತೆರವುಗೊಳಿಸಲು ಕೊನೆಗೂ ಗುತ್ತಿಗೆ ಕಂಪೆನಿ ಮುಂದಾಗಿದೆ. ಜಿಲ್ಲಾಡಳಿತದ ಸೂಚನೆಯಂತೆ ಕಂಪೆನಿ ಅರ್ಧ ಕುಸಿದ ಸೇತುವೆಯ ಭಾಗಗಳನ್ನು ಬೃಹತ್ ಜೆಸಿಬಿ ಮೂಲಕ ತೆರವುಗೊಳಿಸುವ ಕಾರ್ಯಾರಂಭಿಸಿದೆ. ಹೊಸ ಸೇತುವೆಗೆ ಹಾನಿಯಾಗದಂತೆ ತೆರವು ಕಾರ್ಯ ನಡೆಸುವುದು ಸವಾಲಾಗಿದೆ.
ಸುಮಾರು 40 ವರ್ಷಗಳ ಹಿಂದೆ ನಿರ್ಮಿಸಿದ ಈ ಸೇತುವೆ ಆ.7ರ ತಡರಾತ್ರಿ ಕುಸಿದು ಬಿದ್ದಿದೆ. 665 ಮೀಟರ್ ಉದ್ದದ ಸೇತುವೆಯಲ್ಲಿ 300 ಮೀ.ನಷ್ಟು ಭಾಗ ಕುಸಿದಿದೆ. ಕಾಂಕ್ರೀಟ್ ಸ್ಲ್ಯಾಬ್, ಸೇತುವೆಗೆ ಅಳವಡಿಸಲಾಗಿದ್ದ ಕೇಬಲ್, ಡಾಂಬರು ರಸ್ತೆ, ಕಬ್ಬಿಣದ ಸರಳುಗಳು ನದಿಯಲ್ಲಿ ಸಿಲುಕಿಕೊಂಡಿವೆ. ಅಲ್ಲದೇ ಅರ್ಧ ಸೇತುವೆಯ ಭಾಗ ಇನ್ನೂ ಕುಸಿಯುವ ಸ್ಥಿತಿಯಲ್ಲಿದೆ.
ಆದರೆ ಸೇತುವೆ ಕುಸಿದು ತಿಂಗಳು ಕಳೆದರೂ ಬಿದ್ದ ಅವಶೇಷಗಳನ್ನು ತೆರವು ಮಾಡದ ಕಾರಣ ಸೇತುವೆಯ ಮೇಲೆ ಜನರು ಪೊಲೀಸರ ಕಣ್ತಪ್ಪಿಸಿ ರೀಲ್ಸ್ ಮತ್ತು ಸೆಲ್ಫಿ ಕ್ಲಿಕ್ಕಿಸುವ ಹುಚ್ಚಾಟ ಮಾಡುತ್ತಿದ್ದರು. ಈ ಬಗ್ಗೆ ಸಾರ್ವಜನಿಕರು, ಮೀನುಗಾರರು ಆತಂಕ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ಜಿಲ್ಲಾಡಳಿತ ಎನ್‌ಎಚ್‌ಎಐ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ ಪರಿಣಾಮ ಕೊನೆಗೂ ಗುತ್ತಿಗೆ ಪಡೆದಿರುವ ಐಆರ್‌ಬಿ ಕಂಪೆನಿ ಕಳೆದ ಎರಡು ದಿನಗಳಿಂದ ತೆರವು ಕಾರ್ಯ ನಡೆಸುತ್ತಿದೆ.
ಸದ್ಯ ಸೇತುವೆಯ ಎರಡೂ ತುದಿಗಳಲ್ಲಿ ಕುಸಿಯದೇ ನಿಂತಿರುವ ಭಾಗವನ್ನು ಜೆಸಿಬಿಗಳ ಮೂಲಕ ತೆರವು ಮಾಡಲಾಗುತ್ತಿದೆ. ಸದಾಶಿವಗಡ ಕಡೆಯಲ್ಲಿ ಸೇತುವೆಯ ಕಂಬಗಳು ಹಾಗೂ ಸೇತುವೆಯ ಕೆಲ ಭಾಗ ಬೀಳದೇ ನಿಂತಿದೆ. ಮಧ್ಯಭಾಗದಲ್ಲಿ ನದಿಗೆ ಬಿದ್ದಿರುವ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ಹೊಸ ಸೇತುವೆಗೆ ಹಾನಿಯಾಗದಂತೆ ಮೇಲೆತ್ತಬೇಕಿದೆ. ಇದು ಕಂಪೆನಿಗೂ ಸವಾಲಿನ ಕೆಲಸ. ಈ ಕಾರಣದಿಂದ ಕೆಲಸಕ್ಕೆ ಬೇಕಾದ ಅಗತ್ಯ ಉಪಕರಣಗಳು, ಅವಶೇಷ ಎತ್ತಿ ಸಾಗಿಸಲು ಕ್ರೇನ್‌ಸಹಿತ ಬಾರ್ಜ್ ತರಿಸಲು ಕಂಪನಿ ಪ್ರಕ್ರಿಯೆ ಆರಂಭಿಸಿದೆ. ಆದರೆ, ತೆರವುಗೊಳಿಸಿದ ಅವಶೇಷ ದಾಸ್ತಾನು ಮಾಡಲು ಜಿಲ್ಲಾಡಳಿತಕ್ಕೆ ಜಾಗ ಗುರುತಿಸಕೊಡಲು ಮನವಿ ಮಾಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.