ಮೀನಿನ ಗಾಣಕ್ಕೆ ಸಿಲುಕಿ ಒದ್ದಾಡುತ್ತಿದ್ದ ನಾಗರಹಾವಿನ ರಕ್ಷಣೆ (ETV Bharat) ಶಿವಮೊಗ್ಗ :ಮೀನಿನ ಗಾಳಕ್ಕೆ ಸಿಲುಕಿ ಒದ್ದಾಡುತ್ತಿದ್ದ ನಾಗರ ಹಾವನ್ನು ಉರಗ ರಕ್ಷಕ ಸ್ನೇಕ್ ಕಿರಣ್ ಅವರು ರಕ್ಷಿಸಿದ್ದಾರೆ. ಜಿಲ್ಲೆಯ ಕಡದಕಟ್ಟೆ ಗ್ರಾಮದಲ್ಲಿ ನಾಗರ ಹಾವು ಮೀನಿನ ಗಾಳಕ್ಕೆ ಸಿಲುಕಿ ಒದ್ದಾಡುತ್ತಿತ್ತು. ಇದನ್ನು ಕಂಡ ಗ್ರಾಮಸ್ಥರು ಸ್ನೇಕ್ ಕಿರಣ್ ಅವರಿಗೆ ಪೋನ್ ಮೂಲಕ ವಿಷಯ ತಿಳಿಸಿದ್ದಾರೆ.
ಗ್ರಾಮಕ್ಕೆ ತೆರಳಿದ ಸ್ನೇಕ್ ಕಿರಣ್ ಮೊದಲು ಹಾವನ್ನು ಬೇಲಿ ಬದಿಯಿಂದ ಬಿಡಿಸಿಕೊಂಡು ಸುರಕ್ಷಿತ ಜಾಗಕ್ಕೆ ಕರೆದುಕೊಂಡು ಬಂದಿದ್ದಾರೆ. ಮೀನು ಹಿಡಿಯಲು ತೆಗೆದುಕೊಂಡು ಹೋಗಿದ್ದ ಗಾಳವನ್ನು ಯಾರೋ ಬೇಲಿ ಬಳಿ ಬಿಸಾಡಿ ಹೋಗಿದ್ದಾರೆ. ಆಹಾರ ಅರಸಿ ಬಂದಿದ್ದ ಹಾವು ಗಾಳಕ್ಕೆ ಸಿಲುಕಿಕೊಂಡಿದೆ. ಒಂದು ಗಾಳ ಹಾವಿನ ತಲೆ ಬಳಿ ಸಿಲುಕಿಕೊಂಡಿದ್ದರೆ, ಇನ್ನೊಂದು ಗಾಳ ಹಾವಿನ ಬಾಲದ ಬಳಿ ಸಿಕ್ಕಿಹಾಕಿಕೊಂಡಿತ್ತು. ಹಾವಿಗೆ ಸಿಲುಕಿಕೊಂಡಿದ್ದ ಗಾಳವನ್ನು ಸ್ನೇಕ್ ಕಿರಣ್ ಗ್ರಾಮಸ್ಥರ ನೆರವಿನಿಂದ ಬಿಡಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ನೇಕ್ ಕಿರಣ್, ''ಹಾವು ಸುಮಾರು ಮೂರುವರೆ ಅಡಿ ಉದ್ದವಿದ್ದು, ಈ ರೀತಿ ಮೀನಿನ ಗಾಳಕ್ಕೆ ಸಿಲುಕಿಕೊಂಡಿದ್ದನ್ನು ಇದೇ ಮೊದಲ ಬಾರಿ ನೋಡುತ್ತಿದ್ದೇನೆ. ಹಿಂದೆ ಮೀನಿನ ಬಲೆಯಲ್ಲಿ ಸಿಲುಕಿಕೊಂಡಿದನ್ನು ನೋಡಿದ್ದೆ. ಹಾವು ಸಿಲುಕಿಕೊಂಡಿದ್ದ ಗಾಳವನ್ನು ತೆಗೆಯಲಾಗಿದೆ. ಆದರೆ ಗಾಳ ಎಷ್ಟು ದಿನದಿಂದ ಇತ್ತು?. ಅದರ ಒಳಗೆ ಯಾವ ರೀತಿ ಗಾಯವಾಗಿದೆ ಎಂಬುದು ತಿಳಿಯುತ್ತಿಲ್ಲ. ಹಾವು ಬದುಕುಳಿಯುವುದು ಕಷ್ಟಕರ'' ಎಂದು ತಿಳಿಸಿದ್ದಾರೆ.
ಇದೇ ರೀತಿ ಶಿವಮೊಗ್ಗ ತಾಲೂಕಿನ ಯಲವಟ್ಟಿ ಗ್ರಾಮದ ಅರುಣ್ ಎಂಬುವರ ಮನೆಗೆ ನಾಗರ ಹಾವು ಬಂದಿತ್ತು. ಈ ಹಾವು ಇವರ ಅಡುಗೆ ಮನೆಗೆ ಹೋಗಿತ್ತು. ಈ ಬಗ್ಗೆ ಅರುಣ್ ಕುಮಾರ್ ಅವರು ಸ್ನೇಕ್ ಕಿರಣ್ ಅವರಿಗೆ ವಿಷಯ ತಿಳಿಸಿದ್ದಾರೆ. ಯಲವಟ್ಟಿ ಗ್ರಾಮಕ್ಕೆ ತೆರಳಿದ ಸ್ನೇಕ್ ಕಿರಣ್ ಹಾವನ್ನು ಮನೆಯಿಂದ ಹೊರತಂದು, ಅದನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಇದನ್ನೂ ಓದಿ :ಸರ್ಕಾರಿ ಶಾಲೆಗೆ ನುಗ್ಗಿದ 15 ಅಡಿ ಉದ್ದದ ಕಾಳಿಂಗ ಸರ್ಪ; ಉರಗ ತಜ್ಞರಿಂದ ರಕ್ಷಣೆ- ವಿಡಿಯೋ ನೋಡಿ - King Cobra Captured