ಕರ್ನಾಟಕ

karnataka

ETV Bharat / state

ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಮುದ್ರಿಸಲು ಸಿಎಂ ಸೂಚನೆ

ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣ ಅವರ ಭಾವಚಿತ್ರದಲ್ಲಿ "ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ" ಎಂದು ಮುದ್ರಿಸಲು ಸಿಎಂ ಸೂಚಿಸಿದ್ದಾರೆ.

By ETV Bharat Karnataka Team

Published : Feb 12, 2024, 3:26 PM IST

Eಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಮುದ್ರಿಸಲು: ಸಿಎಂ ಸೂಚನೆ
ಸರ್ಕಾರಿ ಕಚೇರಿಗಳಲ್ಲಿ ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ ಎಂದು ಮುದ್ರಿಸಲು: ಸಿಎಂ ಸೂಚನೆ

ಬೆಂಗಳೂರು: ರಾಜ್ಯದ ಸರ್ಕಾರಿ ಕಚೇರಿಗಳಲ್ಲಿರುವ, ಸರ್ಕಾರ ಅನುಮೋದಿಸಿರುವ ಬಸವಣ್ಣನವರ ಭಾವಚಿತ್ರಗಳಲ್ಲಿ "ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ" ಎಂದು ಮುದ್ರಿಸಿ ಅಳವಡಿಸಲು ಕ್ರಮ ವಹಿಸಲು ಸಿಎಂ ಸಿದ್ದರಾಮಯ್ಯ ನಿರ್ದೇಶನ ನೀಡಿದ್ದಾರೆ.

ಈ ಸಂಬಂಧ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿರುವ ಸಿಎಂ, ರಾಜ್ಯದ ಸರ್ಕಾರಿ ಕಚೇರಿಗಳಲ್ಲಿರುವ, ಸರ್ಕಾರ ಅನುಮೋದಿಸಿರುವ ಬಸವಣ್ಣನವರ ಭಾವಚಿತ್ರಗಳಲ್ಲಿ "ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ" ಎಂದು ಮುದ್ರಿಸಿ ಅಳವಡಿಸಲು ಕ್ರಮ ವಹಿಸಬೇಕು. ರಾಜ್ಯ, ಜಿಲ್ಲೆ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಬಸವಣ್ಣನವರ ಚಿಂತನೆಗಳು ಹಾಗೂ ಸರ್ಕಾರದ ಉದ್ದೇಶಗಳ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಸೂಕ್ತ ನಿರ್ದೇಶನಗಳನ್ನು ಹೊರಡಿಸಬೇಕೆಂದು ಸೂಚಿಸಿದ್ದಾರೆ.

ಜಗಜ್ಯೋತಿ ಬಸವೇಶ್ವರ ಎಂದು ಪ್ರಖ್ಯಾತರಾಗಿರುವ ಬಸವಣ್ಣನವರು 12ನೇ ಶತಮಾನದ ವಚನ ಚಳವಳಿಯ ಹಾಗೂ ಸಾಮಾಜಿಕ ನ್ಯಾಯದ ನಾಯಕತ್ವ ವಹಿಸಿದ್ದರು. ಮನುಧರ್ಮಶಾಸ್ತ್ರವು ಶ್ರೇಣೀಕೃತ ಸಮಾಜವನ್ನು ನಿರ್ಮಾಣ ಮಾಡಿ ಅಸಮಾನತೆಯನ್ನು ಸೃಷ್ಟಿ ಮಾಡಿತ್ತು. ಹುಟ್ಟಿನ ಆಧಾರದ ಮೇಲೆ ಮೇಲು-ಕೀಳು ಎಂದು ಸಮುದಾಯಗಳನ್ನು ಶಾಶ್ವತವಾಗಿ ವಿಭಜಿಸಿ ಕತ್ತಲ ಕೂಪಕ್ಕೆ ತಳ್ಳಲಾಗಿತ್ತು. ದುಡಿಯುವ ವರ್ಗಗಳು ಕ್ರಿಯಾಶೀಲ ಸಮಾಜಗಳ ಸೃಜನಶೀಲ ಶಕ್ತಿಗಳಾಗಿರುತ್ತವೆ. ಆದರೆ ಜಾತಿಯ ಹೆಸರಿನಲ್ಲಿ ಈ ಸಮುದಾಯಗಳ ಚೈತನ್ಯವನ್ನು ಕಿತ್ತುಕೊಳ್ಳಲಾಗಿತ್ತು‌ ಎಂದು ಉಲ್ಲೇಖಿಸಿದ್ದಾರೆ.

ಇಂತಹ ಉಸಿರುಗಟ್ಟುವ ನಿಯಮಗಳ ವಿರುದ್ಧ ವಚನ ಚಳುವಳಿಯು ಅತ್ಯಂತ ಪ್ರಬುದ್ಧವಾದ ಹೋರಾಟವನ್ನು ರೂಪಿಸಿತ್ತು. 12ನೇ ಶತಮಾನದಲ್ಲಿ ದೇಶದ ಅನೇಕ ಭಾಗಗಳಿಂದ ಬಂದ ಚಿಂತಕರು, ಹೋರಾಟಗಾರರು ಒಟ್ಟುಗೂಡಿ ಈ ಸಮಾನತೆಯ ಚಳವಳಿಯನ್ನು ಮುನ್ನಡೆಸಿದ್ದರ ಕುರಿತು ಇತಿಹಾಸಕಾರರು ಪ್ರಸ್ತಾಪಿಸಿದ್ದಾರೆ. ಪ್ರಜಾಪ್ರಭುತ್ವವನ್ನು ಒಪ್ಪಿಕೊಂಡ ನಮ್ಮ ವ್ಯವಸ್ಥೆಯಂಥದೇ ಕಲ್ಪನೆಯನ್ನು ಬಸವಣ್ಣನವರಾದಿಯಾಗಿ ವಚನಕಾರರು ಮಂಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಮ್ಮ ಸರ್ಕಾರವು ಬಸವಣ್ಣನವರನ್ನು "ವಿಶ್ವಗುರು ಬಸವಣ್ಣ ಸಾಂಸ್ಕೃತಿಕ ನಾಯಕ" ಎಂದು ಘೋಷಣೆ ಮಾಡಿದೆ. ನಮ್ಮ ನಡೆ-ನುಡಿಗಳಲ್ಲಿ ಭಿನ್ನತೆ ಇರಬಾರದು ಎಂಬುದನ್ನು ಬಸವಣ್ಣನವರು ವಚನವೆಂಬ ಮಾಧ್ಯಮದ ಮೂಲಕ ವ್ಯಕ್ತಪಡಿಸಿದ್ದಾರೆ.

ಕಳ್ಳತನ ಮಾಡಬಾರದು, ಕೊಲೆ ಸುಲಿಗೆಗಳಲ್ಲಿ ತೊಡಗಬಾರದು, ಸುಳ್ಳು ಹೇಳಬಾರದು, ಸಿಟ್ಟು ಮಾಡಿಕೊಳ್ಳಬಾರದು, ತನ್ನನ್ನು ಶ್ರೇಷ್ಠ ಎಂದು ಭಾವಿಸಿ ಹೊಗಳಿಕೊಳ್ಳಬಾರದು, ಹುಟ್ಟಿನ ಆಧಾರದ ಮೇಲಾಗಲಿ ಅಥವಾ ಇನ್ನಿತರ ಕಾರಣಗಳಿಗಾಲಿ ಇತರರ ಕುರಿತು ಅಸಹ್ಯ ಪಟ್ಟುಕೊಳ್ಳಬಾರದು, ತನ್ನೆದುರು ನಿಂತವರನ್ನು ನಿಂದಿಸಬಾರದು, ಇವನ್ಯಾರು ಎನ್ನದೆ ಇವ ನಮ್ಮವನು ಎಂಬ ನೀತಿ ನಮ್ಮದಾಗಬೇಕು ಎಂಬುದೆ ವಿಶ್ವ ಸಂಸ್ಕೃತಿಯ ನಿಯಮ. ಇಂಥ ಉದಾತ್ತ ತತ್ವಗಳನ್ನು ಪ್ರತಿಪಾದಿಸಿದ ಬಸವಣ್ಣ ನಮ್ಮ ನಿಜವಾದ ವಿಶ್ವಗುರು, ನಾಡಿನ ಸಾಂಸ್ಕೃತಿಕ ನಾಯಕರು ಎಂದು ಸಿಎಂ ವಿವರಿಸಿದ್ದಾರೆ.

ಇದನ್ನೂ ಓದಿ:ಇಡೀ ಬಿಜೆಪಿ ಒಂದಾದರೂ ಡಿಕೆಶಿ ಅನ್ನೋ ಬಂಡೆಯನ್ನ ಏನೂ ಮಾಡೋಕಾಗಲ್ಲ: ಶಾಸಕ ಪ್ರದೀಪ್ ಈಶ್ವರ್

ABOUT THE AUTHOR

...view details