ಚಾಮರಾಜನಗರ:ಕಾವೇರಿ ಮೈದುಂಬಿ ಹರಿಯುತ್ತಿದ್ದು, ಕೊಳ್ಳೇಗಾಲ ತಾಲೂಕಿನ ಭರಚುಕ್ಕಿ ಜಲಪಾತ ವೈಯ್ಯಾರದಿಂದ ಧುಮ್ಮಿಕ್ಕುತ್ತಿದೆ. ಈ ಹಿನ್ನೆಲೆಯಲ್ಲಿ 10 ವರ್ಷಗಳ ಬಳಿಕ ಜಿಲ್ಲಾಡಳಿತ ಜಲಪಾತೋತ್ಸವ ಆಯೋಜಿಸಿದೆ. ಈ ಕುರಿತು ಇಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಆ.10ರಂದು ಸಂಜೆ 6ಕ್ಕೆ ಭರಚುಕ್ಕಿಯಲ್ಲಿ ನಡೆಯಲಿರುವ ಜಲಪಾತೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್, ಪ್ರವಾಸೋದ್ಯಮ ಸಚಿವ ಹೆಚ್.ಕೆ.ಪಾಟೀಲ್ ಕಾರ್ಯಕ್ರಮದಲ್ಲಿ ಹಾಜರಿರಲಿದ್ದಾರೆ ಎಂದು ಅವರು ಹೇಳಿದರು.
ಶಬ್ಧ-ಬೆಳಕಿನ ಜುಗಲ್ಬಂದಿ:ಧುಮ್ಮಿಕ್ಕುವ ಜಲಪಾತಕ್ಕೆ ಶಬ್ಧ ಮತ್ತು ಬೆಳಕನ್ನು ಸಂಯೋಜಿಸಿ, ಜಲಪಾತವನ್ನು ಮತ್ತಷ್ಟು ಸಿಂಗರಿಸಲಾಗುತ್ತದೆ. ಖ್ಯಾತ ಗಾಯಕಿ ಅನನ್ಯ ಭಟ್ ತಂಡ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದೆ. ಜಾನಪದಗಳ ನಾಡೆಂದೇ ಚಾಮರಾಜನಗರವನ್ನು ಕರೆಯುವ ಹಿನ್ನೆಲೆಯಲ್ಲಿ ಜಾನಪದ ಸಂಗೀತ ಸುಧೆಯೂ ಇರಲಿದೆ.