ಕರ್ನಾಟಕ

karnataka

ETV Bharat / state

ಗ್ಯಾರಂಟಿ ಸಮಾವೇಶ: ಸಿಎಂ ಸಿದ್ದರಾಮಯ್ಯ 2ನೇ ಅವಧಿಯಲ್ಲಿ ಚಾಮರಾಜನಗರಕ್ಕೆ 2ನೇ ಭೇಟಿ - CM Siddaramaiah

ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಭಾಗವಹಿಸಲು ನಾಳೆ ಸಿಎಂ ಸಿದ್ದರಾಮಯ್ಯ ಚಾಮರಾಜನಗರಕ್ಕೆ ಭೇಟಿ ನೀಡಲಿದ್ದಾರೆ.

cm-siddaramaiah-will-visit-chamarajanagar-tomorrow
ಗ್ಯಾರಂಟಿ ಸಮಾವೇಶ: ಚಾಮರಾಜನಗರಕ್ಕೆ ಸಿಎಂ ಸಿದ್ದರಾಮಯ್ಯ 2ನೇ ಅವಧಿಯಲ್ಲಿ 2ನೇ ಭೇಟಿ

By ETV Bharat Karnataka Team

Published : Mar 11, 2024, 7:18 PM IST

ಚಾಮರಾಜನಗರ: ಅಧಿಕಾರದಲ್ಲಿದ್ದಾಗ ಚಾಮರಾಜನಗರಕ್ಕೆ ಬರಲು ಈ ಹಿಂದೆ ಹಲವು ಸಿಎಂಗಳು ಹಿಂದೇಟು ಹಾಕಿದರೇ, ಸಿಎಂ ಸಿದ್ದರಾಮಯ್ಯ ಮಾತ್ರ ಮೌಢ್ಯಕ್ಕೆ ಸೊಪ್ಪು ಹಾಕಿಲ್ಲ. ಮೊದಲ ಅವಧಿಯಲ್ಲಿ ಚಾಮರಾಜನಗರಕ್ಕೆ ಭೇಟಿ ನೀಡಿದ್ದ ಅವರು, ಎರಡನೇ ಬಾರಿ ಸಿಎಂ ಆದ ಬಳಿಕವೂ ನಾಳೆ ಎರಡನೇ ಬಾರಿಗೆ ಗಡಿಜಿಲ್ಲೆಗೆ ಭೇಟಿ ನೀಡಲಿದ್ದಾರೆ.

ಹೌದು, ಎರಡನೇ ಬಾರಿಗೆ ಸಿಎಂ ಆದ ಮೂರು ತಿಂಗಳಿಗೇ ಚಾಮರಾಜನಗರಕ್ಕೆ ಭೇಟಿ ಕೊಟ್ಟು ಕೆಡಿಪಿ ಸಭೆ ನಡೆಸಿದ್ದ ಸಿದ್ದರಾಮಯ್ಯ ಇದೀಗ ಎರಡನೇ ಬಾರಿ ಭೇಟಿ ನೀಡಲಿದ್ದಾರೆ. ಮಾ.12ರ ಮಧ್ಯಾಹ್ನ 3 ಗಂಟೆಗೆ ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಅವರು ಭಾಗವಹಿಸಲಿದ್ದಾರೆ.

ಸಿಎಂ ಆಗಮನದ ಹಿನ್ನೆಲೆ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, 20 ಸಾವಿರಕ್ಕೂ ಅಧಿಕ ಆಸನ ವ್ಯವಸ್ಥೆ ಮಾಡಲಾಗಿದೆ. ಕ್ರೀಡಾಂಗಣದಲ್ಲಿ ಎರಡು ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿದೆ. ಇನ್ನು ಸಮಾವೇಶದಲ್ಲಿ ಸಿಎಂ ಹಾಗೂ ಡಿಸಿಎಂ ಅವರಿಗೆ ಸ್ಮರಣಿಕೆಯಾಗಿ ಆನೆಯ ಕಲಾಕೃತಿ ಕೊಡಲು ಜಿಲ್ಲಾಡಳಿತ ನಿರ್ಧರಿಸಿದೆ. ಸಮಾವೇಶಕ್ಕೆ ಫಲಾನುಭವಿಗಳನ್ನು ಕರೆತರಲು ಬಸ್ ವ್ಯವಸ್ಥೆ ಮಾಡಲಾಗಿದ್ದು, 30 ಸಾವಿರಕ್ಕೂ ಅಧಿಕ ಮಂದಿ ಹಾಜರಾಗುವ ನಿರೀಕ್ಷೆ ಇದೆ.

ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ಕ್ಷೇತ್ರವೂ ಕೂಡ ಚಾಮರಾಜನಗರ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡಲಿದ್ದು, ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಸಮಾವೇಶ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್​ ಎರಡು ಬಾರಿ ಪೂರ್ವಭಾವಿ ಸಭೆ ನಡೆಸಿದ್ದು, ಕಾರ್ಯಕ್ರಮ ಯಶಸ್ವಿಯಾಗಿ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ಚಾಮರಾಜನಗರದ 4 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಶಾಸಕರಿರುವ ಹಿನ್ನೆಲೆ ಸಮಾವೇಶಕ್ಕೆ ಭಾರೀ ಜನ ಸೇರುವ ನಿರೀಕ್ಷೆ ವ್ಯಕ್ತವಾಗಿದೆ.

ಮೊದಲ ಬಾರಿಯ ಸಿಎಂ ಅವಧಿಯಲ್ಲಿ 15ಕ್ಕೂ ಹೆಚ್ಚು ಬಾರಿ ಭೇಟಿ: ಮೊದಲ ಬಾರಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದ ವೇಳೆ ಚಾಮರಾಜನಗರ ಜಿಲ್ಲಾಕೇಂದ್ರಕ್ಕೆ 15ಕ್ಕೂ ಅಧಿಕ ಬಾರಿ ಭೇಟಿ ಕೊಟ್ಟು, 5 ವರ್ಷ ಸುಭದ್ರವಾಗಿ ಆಡಳಿತ ನಡೆಸಿ ಚಾಮರಾಜನಗರಕ್ಕೆ ಅಂಟಿದ್ದ ಮೌಢ್ಯ ಅಳಿಸಿದ್ದರು. ಭೇಟಿ ನೀಡುವ ಜೊತೆಗೆ, ಸಾವಿರಾರು ಕೋಟಿ ಅನುದಾನವನ್ನೂ ಗಡಿಜಿಲ್ಲೆಗೆ ನೀಡಿದ್ದರು.

ಧ್ರುವ ಸ್ಮರಣೆಯಲ್ಲಿ ಭಾಗಿ: ದಿವಂಗತ ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಮೊದಲ ವರ್ಷದ ಪುಣ್ಯಸ್ಮರಣೆ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮದಲ್ಲಿ ನಡೆಯಲಿದೆ. ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಚಾಮರಾಜನಗರಕ್ಕೆ 11.30ಕ್ಕೆ ಆಗಮಿಸುವ ಸಿಎಂ, ಡಿಸಿಎಂ ಹಾಗೂ ಸಚಿವರು ಮೊದಲು ಹೆಗ್ಗವಾಡಿಗೆ ತೆರಳಿ ಪುಣ್ಯಸ್ಮರಣೆಯಲ್ಲಿ ಭಾಗಿಯಾಗಲಿದ್ದಾರೆ. ಬಳಿಕ, ಮಧ್ಯಾಹ್ನ 3ಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆಯಲಿರುವ ಗ್ಯಾರಂಟಿ ಫಲಾನುಭವಿಗಳ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ.

ಇದನ್ನೂ ಓದಿ:ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟಿಸಿದ ಸಿಎಂ ಸಿದ್ದರಾಮಯ್ಯ

ABOUT THE AUTHOR

...view details