ಕರ್ನಾಟಕ

karnataka

ಯಾವುದೇ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ: ಸಂಸದ ಶೆಟ್ಟರ್ - Jagadish Shettar

By ETV Bharat Karnataka Team

Published : Aug 2, 2024, 5:56 PM IST

ಸಿದ್ದರಾಮಯ್ಯ ತಪ್ಪು ಮಾಡಿಲ್ಲವೆಂದರೆ ನಾವು ಕೇಳುತ್ತಿರುವ ರಾಜೀನಾಮೆ ಬಗ್ಗೆ ಹೆದರುವ ಅಗತ್ಯವಿಲ್ಲ. ಇದರ ಜೊತೆಗೆ, ಅವರನ್ನು ಅಧಿಕಾರದಿಂದ ಕೆಳಗಿಳಿಸುವ ಪ್ರಶ್ನೆಯೂ ಇಲ್ಲ ಎಂದು ಜಗದೀಶ್​ ಶೆಟ್ಟರ್​ ಹೇಳಿದ್ದಾರೆ.

MP Jagadish Shettar
ಸಂಸದ ಜಗದೀಶ್​ ಶೆಟ್ಟರ್​ (ETV Bharat)

ಬೆಳಗಾವಿ: "ರಾಜ್ಯ ರಾಜಕೀಯದಲ್ಲಿ ಪ್ರಸ್ತುತ ಸೂಕ್ಷ್ಮ ಪರಿಸ್ಥಿತಿಯಿದೆ. ಯಾವುದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ. ಮುಂದೆ ರಾಜ್ಯದಲ್ಲಿ ಏನಾಗುತ್ತದೆ ಎಂಬುದನ್ನು ಕಾದು ನೋಡಿ" ಎಂದು ಬೆಳಗಾವಿ ಸಂಸದ ಜಗದೀಶ ಶೆಟ್ಟರ್ ಹೇಳಿದರು.

ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ಬಿಜೆಪಿ ಹುನ್ನಾರ ಮಾಡುತ್ತಿದೆ ಎಂಬ ಆರೋಪಕ್ಕೆ ಬೆಳಗಾವಿಯಲ್ಲಿ ಇಂದು ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿದರು.

"ಯಾವ ಹುನ್ನಾರವೂ ಇಲ್ಲ. ಯಾರು ತಪ್ಪು ಮಾಡಿದ್ದಾರೋ ಅವರ ರಾಜೀನಾಮೆ ಕೇಳುತ್ತಿದ್ದೇವೆ. ತಪ್ಪು ಮಾಡಿಲ್ಲ ಎಂದರೆ ಅವರು ಹೆದರುವ ಕಾರಣವೂ ಇಲ್ಲ. ಅಧಿಕಾರದಿಂದ ಇಳಿಸುವ ಪ್ರಶ್ನೆಯೂ ಇಲ್ಲ" ಎಂದರು.

ಯಡಿಯೂರಪ್ಪ ಪ್ರಕರಣದಂತೆ ಸಿದ್ದರಾಮಯ್ಯ ಪ್ರಕರಣ ತಾಳೆ ಹಾಕುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ, "ಅವತ್ತಿನ ಪ್ರಕರಣ ಬೇರೆ‌. ಎರಡೂ ಪ್ರಕರಣಗಳನ್ನು ತಾಳೆ ಹಾಕಲು ಬರುವುದಿಲ್ಲ‌. ಈ ಪ್ರಕರಣದ ಬಗ್ಗೆ ಕಾನೂನು ತಜ್ಞರು ತಮ್ಮ ಅಭಿಪ್ರಾಯ ಹೇಳುತ್ತಿದ್ದಾರೆ. ನನ್ನ ಪ್ರಕಾರ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಪ್ಪು ಇರುವುದು ಎದ್ದು ಕಾಣುತ್ತದೆ" ಎಂದು ತಿಳಿಸಿದರು.

"ರಾಜ್ಯಪಾಲರಿಗೆ ಖಾಸಗಿ ದೂರು ಬಂದಿದೆ. ಆ ಆಧಾರದ ಮೇಲೆ ನೋಟಿಸ್ ನೀಡಿದ್ದಾರೆ. ಮುಡಾ ಹಗರಣ ಕುರಿತು ಕ್ಯಾಬಿನೆಟ್​ನಲ್ಲಿ ಚರ್ಚೆ ಕೂಡಾ ಆಗಿದೆ. ಈ ಹಗರಣದಲ್ಲಿ ಮುಖ್ಯಮಂತ್ರಿ ಭಾಗಿಯಾಗಿರುವುದು ಕಂಡು ಬರುತ್ತದೆ. ಈ ಹಗರಣದಲ್ಲಿ ರಾಜ್ಯಪಾಲರು ಯಾವ ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ. ಹಣಕಾಸು ಇಲಾಖೆ ಹಾಗೂ ಮುಖ್ಯಮಂತ್ರಿ ಅವರ ಪತ್ನಿ ಭಾಗಿಯಾಗಿರುವುದು ನೇರವಾಗಿ ಕಂಡು ಬರುತ್ತದೆ. ಪ್ರೈಮಾ ಫೇಸಿ ಕೇಸ್ ಮೂಲಕ ಸಿಬಿಐ ತನಿಖೆ ಮಾಡಲಿ‌ ಎಂದು ಬಿಜೆಪಿ ಒತ್ತಾಯಿಸುತ್ತಿದೆ" ಎಂದರು.

"ನಾನು ಮೂವತ್ತು ವರ್ಷಗಳಿಂದ ವಿಧಾನಸಭೆಯಲ್ಲಿ ಕೆಲಸ ಮಾಡಿದ್ದೇನೆ. ಸದನದಲ್ಲಿ ಹಗರಣವನ್ನು ಮುಖ್ಯಮಂತ್ರಿಗಳು ಎದುರಿಸಲು ಆಗಲಿಲ್ಲ. ಸ್ಪೀಕರ್ ಮೂಲಕ ರಿಜೆಕ್ಟ್ ಮಾಡುವ ಕೆಲಸ ಮಾಡಿದ್ದಾರೆ. ಅಸೆಂಬ್ಲಿಯಲ್ಲಿ ಕೊಡಬೇಕಾದ ಉತ್ತರವನ್ನು ಪತ್ರಿಕಾಗೋಷ್ಠಿ ಮೂಲಕ ನೀಡಿದ್ದಾರೆ. ಒಂದು ಪೇಜ್ ಜಾಹೀರಾತು ನೀಡುವ ಮೂಲಕ ಮುಖ್ಯಮಂತ್ರಿಗಳು ಭಾಗಿಯಾಗಿರುವುದು ಸಾಬೀತಾಗಿದೆ. ಮುಖ್ಯಮಂತ್ರಿ ರಾಜೀನಾಮೆಗೆ ಹಾಗೂ ಸಿಬಿಐ ತನಿಖೆಗೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ" ಎಂದು ಹೇಳಿದರು.

ರಾಜಭವನದ ದುರ್ಬಳಕೆ ಆರೋಪದ ಕುರಿತು ಪ್ರತಿಕ್ರಿಯಿಸಿ, "ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳಿಂದ ಅಧಿಕಾರ ದುರ್ಬಳಕೆ ಆಗಿದೆಯೋ ಇಲ್ಲವೋ‌‌" ಎಂದು ಪ್ರಶ್ನಿಸಿದ ಜಗದೀಶ್ ಶೆಟ್ಟರ್, "ಯಾವ ಭೂಮಿ ಸ್ವಾಧೀನಪಡಿಸಿಕೊಂಡಿರುತ್ತಾರೋ ಅದರಲ್ಲಿ 50:50 ಸೈಟ್ ಕೊಡುವುದು ಕಾನೂನು ಬದ್ಧ. ಮೂರು ಎಕರೆ ಜಮೀನಿನಲ್ಲಿ ಕೊಟ್ಟಿದ್ದರೆ ಓಕೆ, ಅದನ್ನು ಯಾರೂ ಪ್ರಶ್ನೆ ಮಾಡುತ್ತಿರಲಿಲ್ಲ. ಆಗ ನೀವು ಡಿಸಿಎಂ ಇದ್ರಿ, ನಿಮ್ಮಿಂದ ಅಧಿಕಾರ ದುರ್ಬಳಕೆ ಆಗಿದೆ. ಹಾಗಾಗಿ, ಮುಂದಿನ ಕಾನೂನು ಕ್ರಮವನ್ನು ತಾವು ಎದುರಿಸಬೇಕಾಗುತ್ತದೆ" ಎಂದು ತಿರುಗೇಟು ಕೊಟ್ಟರು.

"ಬಿಜೆಪಿ ಪಾದಯಾತ್ರೆಯಲ್ಲಿ ಎರಡು ಗುಂಪು ಆಗಿರುವುದರ ಬಗ್ಗೆ ವರಿಷ್ಠರು ಮಾತನಾಡುತ್ತಾರೆ. ಪಕ್ಷದ ಒಳಗಿನ ಸಮಸ್ಯೆಗಳನ್ನು ಬಗೆಹರಿಸುವ ಕೆಲಸ ಅವರು ಮಾಡುತ್ತಾರೆ" ಎಂದು ಹೇಳಿದರು.

ಇದನ್ನೂ ಓದಿ:ಪಾದಯಾತ್ರೆ ಮುಗಿಸಿ ಬರುವಷ್ಟರಲ್ಲಿ ಈ ಸರ್ಕಾರ ಇರಲ್ಲ: ಛಲವಾದಿ ನಾರಾಯಣಸ್ವಾಮಿ - Chalavadi Narayanaswamy

ABOUT THE AUTHOR

...view details