ಬೆಂಗಳೂರು:ಅಮೆರಿಕದಲ್ಲಿ ಶಸ್ತ್ರಚಿಕಿತ್ಸೆ ಪಡೆದು ಭಾನುವಾರವಷ್ಟೇ ಬೆಂಗಳೂರಿಗೆ ಆಗಮಿಸಿರುವ ನಟ ಶಿವರಾಜ್ ಕುಮಾರ್ ಅವರನ್ನುಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ನಾಗವಾರದಲ್ಲಿನ ಶಿವಣ್ಣ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಇಂದು ಭೇಟಿ ನೀಡಿದರು. ಈ ವೇಳೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶಿವರಾಜ್ ಕುಮಾರ್ ಅವರು ಶಸ್ತ್ರಚಿಕಿತ್ಸೆಗೊಳಗಾಗಿ ಅಮೆರಿಕಾದಿಂದ ಹಿಂತಿರುಗಿ ಬಂದಿದ್ದರಿಂದ ಅವರ ಆರೋಗ್ಯವನ್ನು ವಿಚಾರಿಸಲು ಇಂದು ಭೇಟಿ ಮಾಡಿದ್ದೇನೆ. ಅವರ ಶಸ್ತ್ರ ಚಿಕಿತ್ಸೆಯ ಮರುದಿನವೇ ಅವರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದೆ. ಆಗ ಅವರು ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು ತೊಂದರೆ ಇಲ್ಲ ಎಂದಿದ್ದರು. ಮುಂದಿನ ತಿಂಗಳಿನಿಂದ ಚಿತ್ರೀಕರಣಕ್ಕೆ ತೆರಳುವುದಾಗಿ ಹೇಳಿದ್ದಾರೆ ಎಂದು ಮುಖ್ಯಮಂತ್ರಿ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.