ಕಾರವಾರ: ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಜುಲೈ 16ರಂದು ಗುಡ್ಡ ಕುಸಿದು 10 ಜನರು ಸಾವನ್ನಪ್ಪಿದ್ದು, ರಕ್ಷಣಾ ತಂಡಗಳಿಂದ ಕಾರ್ಯಾಚರಣೆ ಭರದಿಂದ ಸಾಗಿದೆ. ದುರಂತ ಸಂಭವಿಸಿದ ಸ್ಥಳಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.
ಬೆಂಗಳೂರಿನಿಂದ ವಿಮಾನದ ಮೂಲಕ ಗೋವಾಕ್ಕೆ ಆಗಮಿಸಿಲಿರುವ ಸಿಎಂ, ಅಲ್ಲಿಂದ ಕಾರವಾರ ಮಾರ್ಗವಾಗಿ ಮಧ್ಯಾಹ್ನ ಶಿರೂರಿಗೆ ಭೇಟಿ ನೀಡುವರು. ನಂತರ ವಾಪಸ್ ಕಾರವಾರಕ್ಕೆ ಆಗಮಿಸಿ ನೆರೆ ಪರಿಸ್ಥಿತಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸುವರು.
ಕಂದಾಯ ಸಚಿವ ಕೃಷ್ಣ ಬೈರೇಗೌಡ, ಕಾಂಗ್ರೆಸ್ ಶಾಸಕ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಗುಡ್ಡ ಕುಸಿದ ಸ್ಥಳ ವೀಕ್ಷಿಸಿ, ಸಿಎಂ ನೇತೃತ್ವದ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸಹ ಶಿರೂರಿಗೆ ಆಗಮಿಸುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಬಿಜೆಪಿ ನಾಯಕರೊಂದಿಗೆ ಆಗಮಿಸಿ ಅಧಿಕಾರಿಗಳಿಂದ ಮಣ್ಣು ತೆರವಿನ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.