ಕರ್ನಾಟಕ

karnataka

ETV Bharat / state

ಎಲ್ಲ ಪಕ್ಷದ ಶಾಸಕರ ಕ್ಷೇತ್ರಗಳಿಗೂ ₹2000 ಕೋಟಿ ವಿತರಣೆ: ಸಿಎಂ‌ ಘೋಷಣೆ - CM SIDDARAMAIAH

ಅಪೆಂಡಿಕ್ಸ್ ಇ ನಲ್ಲಿ 4,000 ಕೋಟಿ, ಗ್ರಾಮೀಣ ರಸ್ತೆಗೆ 2,000 ಕೋಟಿ ರೂ, ಹಾಗೆಯೇ ಸಿಟಿ, ಟೌನ್ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡುತ್ತಿದ್ದೇವೆ ಸಿಎಂ‌ ಸಿದ್ದರಾಮಯ್ಯ ಘೋಷಣೆ ಮಾಡಿದರು.

siddaramaiah
ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : 6 hours ago

ಬೆಳಗಾವಿ:''ಅಪೆಂಡಿಕ್ಸ್ ಇ ನಲ್ಲಿ 4,000 ಕೋಟಿ ರೂ., ಗ್ರಾಮೀಣ ರಸ್ತೆಗೆ 2,000 ಕೋಟಿ ರೂ. ಹಾಗೆಯೇ ಸಿಟಿ, ಟೌನ್ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡುತ್ತಿದ್ದೇವೆ. ಎಲ್ಲಾ ಪಕ್ಷದ ಶಾಸಕರ ಕ್ಷೇತ್ರಗಳಿಗೂ 2000 ಕೋಟಿ ರೂ. ವಿತರಣೆ ಮಾಡುತ್ತೇವೆ. ರಾಜ್ಯದ ಜನತೆ ಈಗಲೂ ನಮ್ಮ ಪರವಾಗಿದ್ದಾರೆ. ನಾಳೆಯೂ ನಮ್ಮ ಪರವಾಗಿರಲಿದ್ದಾರೆ. ಮುಂದಿನ ಚುನಾವಣೆಯಲ್ಲೂ ನಮ್ಮ‍ ಪರವಾಗಿರುತ್ತಾರೆ. ಇದು ಖಚಿತ'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ''ಅಭಿವೃದ್ಧಿ ಪರ್ವ ರಾಜ್ಯದಲ್ಲಿ ನಿರಂತರತೆ ಕಾಯ್ದುಕೊಂಡಿದೆ. ವಿಧಾನಸಭೆ, ಪರಿಷತ್​ನಲ್ಲಿ ಮತ್ತು ಸದನದ ಹೊರಗೆ ನಮ್ಮ ಅಭಿವೃದ್ಧಿಯ ದಾಖಲೆಗಳು, ಅಂಕಿ ಅಂಶಗಳನ್ನು ಮನೆ ಮನೆ ತಲುಪಿಸಿ. ಎದೆ ಎತ್ತಿ ಮಾತನಾಡಿ'' ಎಂದು ಕಾಂಗ್ರೆಸ್ ಶಾಸಕರಿಗೆ ಕರೆ ನೀಡಿದರು.

ಸಿದ್ದರಾಮಯ್ಯ , ಡಿ.ಕೆ.ಶಿವಕುಮಾರ್ (ETV Bharat)

''ಸತ್ಯದ ದಾಖಲೆಗಳನ್ನು, ಅಂಕಿ - ಅಂಶಗಳನ್ನು ಜನರ ಮುಂದಿಟ್ಟು ಎದೆ ಎತ್ತಿ ಸತ್ಯ ಹೇಳಿ. ವಕ್ಫ್ ವಿಚಾರ ಬಿಜೆಪಿಗೆ ತಿರುಗುಬಾಣವಾಗಿದೆ. ಅತಿ ಹೆಚ್ಚು ನೋಟಿಸ್ ಕೊಟ್ಟಿರುವುದು, ವಕ್ಫ್ ಆಸ್ತಿ ಒತ್ತುವರಿ ತೆರವುಗೊಳಿಸುವುದಾಗಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲೇ ಹೇಳಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದಾಗಲೇ ವಕ್ಫ್ ಆಸ್ತಿ ತೆರವುಗೊಳಿಸಲು ನೋಟಿಸ್ ಕೊಡಲಾಗಿದೆ. ಹೀಗಾಗಿ, ಬಿಜೆಪಿಗೆ ಈ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ'' ಎಂದು ಕಿಡಿಕಾರಿದರು.

''once a waqf property... Always a waqf property ಅಂತ ಸುಪ್ರೀಂಕೋರ್ಟ್ ತೀರ್ಪು ಬಂದಿವೆ. ಸಚಿವ ಜಮೀರ್ ಅವರು ಸಮರ್ಥವಾಗಿ ಉತ್ತರ ನೀಡುತ್ತಾರೆ. ಪರಿಷತ್​​ನಲ್ಲಿ ಈಗಾಗಲೇ ಕೊಟ್ಟಿದ್ದಾರೆ. ಬಿಜೆಪಿ 9 ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ, ಸಮ್ಮಿಶ್ರ ಸರ್ಕಾರದಲ್ಲಿದ್ದಾಗಲೂ ಉತ್ತರ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಕೆಲಸ ಮಾಡಲಿಲ್ಲ. ಪ್ರಾದೇಶಿಕ ತಾರತಮ್ಯ ಹೋಗಲಾಡಿಸಲು ಬಿಜೆಪಿ ಪ್ರಯತ್ನವನ್ನೇ ಮಾಡಲಿಲ್ಲ'' ಎಂದು ಆರೋಪಿಸಿದರು.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ (ETV Bharat)

ಇದು ಬಿಜೆಪಿಯ ಸತ್ಯವಾದ ಮುಖ- ಸಿದ್ದರಾಮಯ್ಯ ಲೇವಡಿ:''ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ತಾಲೂಕುಗಳು ಇರುವುದೇ ಉತ್ತರ ಕರ್ನಾಟಕದಲ್ಲಿ. 176ರಲ್ಲಿ 116 ತಾಲೂಕುಗಳು ಹಿಂದುಳಿದಿವೆ. ಇವುಗಳ ಅಭಿವೃದ್ಧಿಗೆ ವಿಶೇಷ ಅನುದಾನ ಕೊಡಬೇಕು ಅಂತಲೂ ಹೇಳಿದ್ದಾರೆ. ನಂಜುಂಡಪ್ಪ ವರದಿಯ ಅನುಷ್ಠಾನ ಮತ್ತು ಸಾಮಾಜಿಕ, ಆರ್ಥಿಕ ಬದಲಾವಣೆ ಕುರಿತಂತೆ ಅಧ್ಯಯನ ನಡೆಸಿ ವರದಿ ನೀಡಲು ಗೋವಿಂದರಾವ್ ಅವರ ಸಮಿತಿಯನ್ನು ರಚಿಸಲಾಗಿದೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ 371ಜೆ ಸಂವಿಧಾನ ತಿದ್ದುಪಡಿ ಮಾಡಲು ಸಾಧ್ಯವೇ ಇಲ್ಲ ಎಂದು ಕೇಂದ್ರದಲ್ಲಿದ್ದ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರು ತಿರಸ್ಕರಿಸಿದ್ದರು. ಇದು ಬಿಜೆಪಿಯ ಸತ್ಯವಾದ ಮುಖ'' ಎಂದು ಆಪಾದಿಸಿದರು.

''ಬಿಜೆಪಿ ನೈತಿಕವಾಗಿ ಕುಸಿದಿದೆ. ಮೂರೂಕ್ಕೆ ಮೂರೂ ಉಪಚುನಾವಣೆಯಲ್ಲಿ ನಾವು ಗೆದ್ದಿರುವುದು, ಬಿಜೆಪಿ ಕೈಯಿಂದ ಎರಡು ಸೀಟುಗಳನ್ನು ಕಾಂಗ್ರೆಸ್ ಗೆದ್ದಿರುವುದು ಅವರನ್ನು ರಾಜ್ಯದ ಜನತೆ ತಿರಸ್ಕರಿಸಿರುವುದಕ್ಕೆ ಸ್ಪಷ್ಟ ನಿದರ್ಶನ. ನನ್ನ ಮೇಲೆ, ನಮ್ಮ ಸರ್ಕಾರದ ಮೇಲೆ ಮಾಡಿದ ಸರಣಿ ಸುಳ್ಳು ಆರೋಪ, ಅಪಪ್ರಚಾರ ಮಾಡಿದರೂ ಅದೆಲ್ಲವನ್ನೂ ತಿರಸ್ಕರಿಸಿ ರಾಜ್ಯದ ಜನತೆ ನಮ್ಮ ಕೈ ಹಿಡಿದಿದ್ದಾರೆ. ಇತ್ತೀಚೆಗೆ ನಾವು ಹಾಸನದಲ್ಲಿ ಮಾಡಿದ ಸ್ವಾಭಿಮಾನಿ ಸಮಾವೇಶ ಐತಿಹಾಸಿಕವಾದುದು'' ಎಂದರು.

''ನಾವು 2013ರಿಂದ 2018ರವರೆಗೆ ಅಧಿಕಾರದಲ್ಲಿದ್ದಾಗ ಅವರು ಕೇಳಿದ್ದನ್ನೆಲ್ಲಾ ಸಿಬಿಐ ತನಿಖೆಗೆ ಒಪ್ಪಿಸಿದೆವು. ಆದರೂ ಸಿಬಿಐ ತನಿಖೆಯಲ್ಲಿ ಬಿಜೆಪಿಯ ಒಂದೂ ಆರೋಪ ಸಾಬೀತಾಗಲಿಲ್ಲ. ಅವರು ಅಧಿಕಾರದಲ್ಲಿದ್ದಾಗ ನಾವು ಕೇಳಿದ ಒಂದನ್ನೂ ಸಿಬಿಐ ತನಿಖೆಗೆ ಕೊಡಲಿಲ್ಲ. ಈಗ ಮತ್ತೆ ಅದೇ ಸಿಬಿಐ ರಾಗ ಎಳೆಯುತ್ತಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರು ಸಿಬಿಐ ಅನ್ನು "ಚೋರ್ ಬಚಾವೋ ಸಂಸ್ಥೆ" ಎಂದಿದ್ದರು. ಈಗ ಇವರಿಗೆ ಸಿಬಿಐ ಮೇಲೆ ಪ್ರೀತಿ ಬಂದಿದೆ'' ಎಂದು ವ್ಯಂಗ್ಯವಾಡಿದರು.

ಹೆಚ್ಚೆಚ್ಚು ಜನ ಸಂಪರ್ಕ ಸಭೆ ಮಾಡಿ:''ನಮ್ಮ ಸಚಿವರು ಮತ್ತು ಶಾಸಕರು ಅವರವರ ಉಸ್ತುವಾರಿಯ ಜಿಲ್ಲೆ, ಕ್ಷೇತ್ರಗಳಲ್ಲಿ ಹೆಚ್ಚೆಚ್ಚು ಜನಸಂಪರ್ಕ ಸಭೆ ನಡೆಸಿ ಜನರ ಸಮಸ್ಯೆಗಳನ್ನು ಬಗೆಹರಿಸಿ. ಹಣಕ್ಕೆ ಸಮಸ್ಯೆ ಇಲ್ಲ, ಹಣ ಇದೆ. ಜನರ ಕೆಲಸ ಮಾಡಿ. ಬಿಜೆಪಿ ಅಧಿಕಾರದಲ್ಲಿದ್ದಾಗ ಒಂದೇ ಒಂದು ಮನೆ ಕೊಡಲಿಲ್ಲ. ಅವರು ಯಾವ ಮುಖ ಇಟ್ಟುಕೊಂಡು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ'' ಎಂದು ಶಾಸಕರನ್ನು ಪ್ರಶ್ನಿಸಿದರು.

ಎಲ್ಲ ಕ್ಷೇತ್ರಗಳಿಗೆ ₹2000 ಕೋಟಿ ವಿತರಣೆ: ''ಮಳೆ ಹಾನಿ ಸರಿಪಡಿಸಲು ಅಪೆಂಡಿಕ್ಸ್ ಇ ನಲ್ಲಿ ₹4,000 ಕೋಟಿ, ಗ್ರಾಮೀಣ ರಸ್ತೆ ಹಾಳಾಗಿರುವುದಕ್ಕೆ ₹2000 ಕೋಟಿ ಹಾಗೆಯೇ ಸಿಟಿ, ಟೌನ್ ರಸ್ತೆಗಳಿಗೂ ಹೆಚ್ಚುವರಿ ಹಣ ಕೊಡುತ್ತಿದ್ದೇವೆ. ಮುಂದಿನ ವರ್ಷದಿಂದ ರಾಜ್ಯದ ಆರ್ಥಿಕ ಸಾಮರ್ಥ್ಯ ಇನ್ನಷ್ಟು ಹೆಚ್ಚುತ್ತದೆ. ಆಗ ಇನ್ನಷ್ಟು ಅಭಿವೃದ್ಧಿಯ ವೇಗ ಹೆಚ್ಚುತ್ತದೆ. ಎಲ್ಲಾ ಕ್ಷೇತ್ರಗಳಿಗೂ ಎಲ್ಲಾ ಪಕ್ಷದ ಶಾಸಕರ ಕ್ಷೇತ್ರಗಳಿಗೂ ₹2000 ಕೋಟಿ ವಿತರಣೆ ಮಾಡುತ್ತೇವೆ. ಆದ್ದರಿಂದ ನಮ್ಮ ಶಾಸಕರು ಎದೆ ಎತ್ತಿ ಮಾತನಾಡಿ. ಅವರ ಬಾಯಿ ಮುಚ್ಚಿಸಿ'' ಎಂದು ತಿಳಿಸಿದರು.

ಇದನ್ನೂ ಓದಿ:ಹಿರಿಯ ಶಾಸಕ ಟಿ.ಬಿ.ಜಯಚಂದ್ರ ಅವರಿಗೆ 'ಅತ್ಯುತ್ತಮ ಶಾಸಕ ಪ್ರಶಸ್ತಿ' ಪ್ರದಾನ

ABOUT THE AUTHOR

...view details