ಕರ್ನಾಟಕ

karnataka

ETV Bharat / state

ಕೋವಿಡ್​ ವೇಳೆ ಹೆಣಗಳಿಂದಲೂ ಬಸವರಾಜ ಬೊಮ್ಮಾಯಿ ಲಂಚ ಪಡೆದಿದ್ದಾರೆ: ಸಿಎಂ ಸಿದ್ದರಾಮಯ್ಯ - CM SIDDARAMAIAH

ಶಿಗ್ಗಾಂವ್ ಉಪಚುನಾವಣೆ ಪ್ರಚಾರದ ಅಖಾಡಕ್ಕೆ ಸಿಎಂ ಸಿದ್ದರಾಮಯ್ಯ ಇಳಿದಿದ್ದು, ಇಂದು ಮತ್ತು ನಾಳೆ ಮತಯಾಚಿಸಲಿದ್ದಾರೆ. ಇಂದು ನಡೆದ ಪ್ರಚಾರ ಸಭೆಯಲ್ಲಿ ಬಸವರಾಜ ಬೊಮ್ಮಾಯಿ ವಿರುದ್ಧ ಸಿಎಂ ಕಿಡಿಕಾರಿದರು.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : Nov 4, 2024, 5:28 PM IST

ಹಾವೇರಿ:ಕೋವಿಡ್ 19 ನಲ್ಲಿ ಹೆಣಗಳಿಂದಲೂ ಲಂಚ ಪಡೆದವರು ಬಿಜೆಪಿಯವರು. ಇತಿಹಾಸದಲ್ಲಿ ಸತ್ತ ಹೆಣಗಳಿಂದಲೂ ಲಂಚ ಪಡೆದ ನಾಯಕರು ಯಾರಾದರೂ ಇದ್ದರೆ ಅದು ಬಸವರಾಜ ಬೊಮ್ಮಾಯಿ ಎಂದು ಸಿಎಂ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.

ಶಿಗ್ಗಾಂವ್ ತಾಲೂಕಿನ ಹುಲಗೂರು ಗ್ರಾಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯಾಸೀರಖಾನ್ ಪಠಾಣ್ ಪರ ಮತಯಾಚನೆ ಸಭೆಯಲ್ಲಿ ಸಿಎಂ ಮಾತನಾಡಿದರು. ಸತ್ತ ಹೆಣಗಳಿಂದ ಲಂಚ ಪಡೆಯುತ್ತಿದ್ದ ಬಸವರಾಜ ಬೊಮ್ಮಾಯಿ ಮಗ ಭರತ್ ಗೆಲ್ಲಬೇಕಾ? ಬಸವರಾಜ ಬೊಮ್ಮಾಯಿ ಮಗ ಗೆಲ್ಲಬಾರದು ಅಂದರೆ ನೀವು ಪಠಾಣ್ ಅವರನ್ನು ಗೆಲ್ಲಿಸಬೇಕು ಎಂದು ಸಿದ್ದರಾಮಯ್ಯ ಮತದಾರರಲ್ಲಿ ಮನವಿ ಮಾಡಿದರು.

ಸಿಎಂ ಸಿದ್ದರಾಮಯ್ಯ (ETV bharat)

ಶಿಗ್ಗಾಂವ್ ಉಪ ಚುನಾವಣೆಗೆ ಮೂರು ದಿನ ಪ್ರಚಾರ ಮಾಡೋದಾಗಿ ಪಠಾಣ್​​ಗೆ ಹೇಳಿದ್ದೆ. ಅದರಂತೆ ಸೋಮವಾರ ಮತ್ತು ಮಂಗಳವಾರ ಪ್ರಚಾರ ಮಾಡುತ್ತೇನೆ. ನ.10 ರಂದು ಮತ್ತೆ ಪ್ರಚಾರಕ್ಕೆ ಬರುತ್ತೇನೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಕಳೆದ ಬಾರಿ ಬೊಮ್ಮಾಯಿ ವಿಧಾನಸಭೆಗೆ ಆಯ್ಕೆ ಆಗಿದ್ದರು. ಆದರೆ ಲೋಕಸಭೆಗೆ ಸ್ಪರ್ಧಿಸಿ ಸಂಸದರಾದರು. ಹೀಗಾಗಿ ಉಪಚುನಾವಣೆ ಬಂದಿದೆ. ಬಸವರಾಜ ಬೊಮ್ಮಾಯಿ ಮಗ ಭರತ್​ಗೂ ಈ ಕ್ಷೇತ್ರಕ್ಕೂ ಸಂಬಂಧ ಇಲ್ಲ. ಮಾಜಿ ಸಿಎಂ ಮೊಮ್ಮಗನ ವಿರುದ್ಧ ಕುಸ್ತಿ ಪಟು ಪಠಾಣ್ ನಿಂತಿದ್ದಾರೆ. ನೀವು ಯಾವ ಕುಸ್ತಿ ಪಟ್ಟು ಹಾಕ್ತಿರೋ ಗೊತ್ತಿಲ್ಲ. ನೀನು ಭರತ್ ಬೊಮ್ಮಾಯಿನ ಸೋಲಿಸಲೇಬೇಕು ಎಂದ ಸಿದ್ದರಾಮಯ್ಯ ಕರೆ ನೀಡಿದರು.

ಮನುಷ್ಯರು, ಧರ್ಮ ಒಡೆದು ದ್ವೇಷ ಬಿತ್ತುವ ಜನ ಬಿಜೆಪಿಯವರು. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು ಹೋಗುವ ಪಕ್ಷ ಕಾಂಗ್ರೆಸ್. ಬಿಜೆಪಿ ಸುಳ್ಳಿನ ಪಕ್ಷ. ಬಿಜೆಪಿ ಅಂದರೆ ಭ್ರಷ್ಟಾಚಾರ ಜನತಾ ಪಾರ್ಟಿ. 40% ಕಮಿಷನ್ ಅಂತ ಜನಪ್ರಿಯ ಆಯ್ತಲ್ಲವಾ? 40% ಬಂದಿದ್ದೇ ಬಸವರಾಜ ಬೊಮ್ಮಾಯಿ ಸಿಎಂ ಆದಾಗ ಎಂದು ಸಿದ್ದರಾಮಯ್ಯ ಆರೋಪಿಸಿದರು.

2018 ರಲ್ಲಿ ಬಿಜೆಪಿಯವರು 600 ಭರವಸೆ ಕೊಟ್ಟಿದ್ದರು. ಆದರೆ 10% ಯೋಜನೆಗಳನ್ನೂ‌ ಇವರು ಜಾರಿ ಮಾಡಲಿಲ್ಲ. ಬಸವರಾಜ ಬೊಮ್ಮಾಯಿ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಗೆದ್ದಿದ್ದಾರೆ. ಈ ಕ್ಷೇತ್ರದಲ್ಲಿ ಅವರ ಕೊಡುಗೆ ಏನು? ನಾವು ಅಧಿಕಾರದಲ್ಲಿದ್ದಾಗ 15 ಲಕ್ಷ ಮನೆ ಕೊಡ್ತೀವಿ ಅಂದಿದ್ದೆವು. ನಾವು 14 ಲಕ್ಷಕ್ಕಿಂತ ಹೆಚ್ಚು ಮನೆ ಕಟ್ಟಿಕೊಟ್ಟೆವು. ಬಿಜೆಪಿಯವರು ಒಂದು ಮನೆ ಹೊಸದಾಗಿ ಕಟ್ಟಿಸಿಕೊಟ್ಟರಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಈ ರಾಜ್ಯ ಲೂಠಿ ಹೊಡೆದು ಬಿಟ್ಟವರನ್ನು ಮತ್ತೆ ಗೆಲ್ಲಿಸಬೇಕಾ?. ಬಿಜೆಪಿಯವರು 120 ಕ್ಕೂ ಹೆಚ್ಚು ಶಾಸಕರಿದ್ದರು. 2023ರಲ್ಲಿ ಚುನಾವಣೆಗೆ ಹೋದಾಗ 66ಕ್ಕಿಳಿದರು. ಅವರು ಕೆಲಸ ಮಾಡಿದ್ದರೆ ಜನ ಆಶೀರ್ವಾದ ಮಾಡ್ತಿರಲಿಲ್ಲವಾ? ನಾವು 136 ಜನ ಗೆದ್ದಿದ್ದೇವೆ. ಬಿಜೆಪಿಯವರ ಸುಳ್ಳು ನಂಬಬೇಡಿ ಎಂದು ತಿಳಿಸಿದರು.

ವಕ್ಫ್ ಆಸ್ತಿ ಈಗ ಆಗಿರೋದಾ? ಬಿಜೆಪಿ ಸರ್ಕಾರದ ಅವಧಿಯಲ್ಲಿಯೇ ನೋಟಿಸ್ ಕೊಟ್ಟಿದಾರೆ. ಸದಾನಂದಗೌಡ, ಶೆಟ್ಟರ್, ಬೊಮ್ಮಾಯಿ ಇದ್ದಾಗಲೂ ನೋಟಿಸ್ ಕೊಟ್ಟಿದಾರೆ. ಉಪ ಚುನಾವಣೆಗೋಸ್ಕರ ರಾಜಕೀಯ ಮಾಡ್ತಿದ್ದಾರೆ. ಯಾವ‌ ಕಾರಣಕ್ಕೂ ಕೂಡಾ ರೈತರನ್ನು ಒಕ್ಕಲೆಬ್ಬಿಸಲ್ಲ. ವಕ್ಫ್ ಬೋರ್ಡ್​ನವರು ಯಾವ ಕಾರಣಕ್ಕೂ ಖಾಲಿ ಮಾಡಿಸಂಗಿಲ್ಲ. ಕಂದಾಯ ದಾಖಲೆಗಳಲ್ಲಿ ವಕ್ಫ್ ಅಂತ ಇದ್ದರೂ ರದ್ದು ಮಾಡಲು ಹೇಳಿದಿನಿ. ಆದರೂ ಬಿಜೆಪಿ ಪ್ರತಿಭಟನೆ ಮಾಡುತ್ತಿದೆ ಎಂದು ದೂರಿದರು.

ನನ್ನ ಮೇಲೆ ಸುಳ್ಳು ಆರೋಪ ಮಾಡಿ ಕಳಂಕ‌ ತರುವ ಕೆಲಸ ಮಾಡ್ತಿದ್ದಾರಲ್ವಾ? ಈ‌ ಬಿಜೆಪಿಯವರನ್ನು ನಂಬುತ್ತೀರಾ? ಸಿದ್ದರಾಮಯ್ಯನನ್ನು ಕಂಡರೆ ಅವರಿಗೆ ಹೊಟ್ಟೆ ಉರಿ, ನನ್ನ ಜೀವನ ತೆರೆದಿಟ್ಟ ಪುಸ್ತಕ. ಪಠಾಣ್ ಅವರನ್ನು ಗೆಲ್ಲಿಸಿದರೆ ಬಿಜೆಪಿಯವರಿಗೆ ಉತ್ತರ ಕೊಟ್ಟ ಹಾಗೆ ಆಗುತ್ತೆ. ಪಠಾಣ್​ ಗೆದ್ದರೆ ನಾನು ಗೆದ್ದಂತೆ. ಶಿಗ್ಗಾಂವಿ, ಸವಣೂರು ಏತ ನೀರಾವರಿ ಯೋಜನೆಗಳಿಗೆ ಮತ್ತು ಬಾಡ ಕನಕ‌ ಅರಮನೆಗೆ ಅನುದಾನ ಬಿಡುಗಡೆ ಮಾಡಿದ್ದೇ ನಾನು ಎಂದು ಸಿಎಂ ತಿಳಿಸಿದರು.

ಇದನ್ನೂ ಓದಿ:ಚನ್ನಪಟ್ಟಣ ಉಪಚುನಾವಣೆ: ನಿಖಿಲ್ ಕುಮಾರಸ್ವಾಮಿ ಪರ ಪತ್ನಿ ರೇವತಿ ಪ್ರಚಾರ

ಇದನ್ನೂ ಓದಿ: ರೈತರ ತಲೆ ಮೇಲೆ ಸಿದ್ದರಾಮಯ್ಯ ಟೋಪಿ ಹಾಕ್ತಾರೆ, ಆಸ್ತಿ ಕಬಳಿಕೆ ವಕ್ಫ್‌ ಬೋರ್ಡ್‌ ದಂಧೆ: ಅಶೋಕ್ ಆರೋಪ

ABOUT THE AUTHOR

...view details