ಕರ್ನಾಟಕ

karnataka

ETV Bharat / state

ಇದು ಸತ್ಯ-ಸುಳ್ಳಿನ‌ ನಡುವೆ ನಡೆಯುವ ಚುನಾವಣೆ : ಸಿಎಂ ಸಿದ್ದರಾಮಯ್ಯ - CM Siddaramaiah - CM SIDDARAMAIAH

ಸಿಎಂ ಸಿದ್ದರಾಮಯ್ಯ ಅವರು ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ಮತ ನೀಡುವಂತೆ ಮತಯಾಚನೆ ಮಾಡಿದರು.

cm-siddaramaiah
ಸಿಎಂ ಸಿದ್ದರಾಮಯ್ಯ (ETV Bharat)

By ETV Bharat Karnataka Team

Published : May 5, 2024, 5:40 PM IST

Updated : May 5, 2024, 7:22 PM IST

ಸಿಎಂ ಸಿದ್ದರಾಮಯ್ಯ (ETV Bharat)

ದಾವಣಗೆರೆ :ಬಿಜೆಪಿಯವರದ್ದು ಸುಳ್ಳು, ಕಾಂಗ್ರೆಸ್​ನವರದ್ದು ಸತ್ಯ. ಸತ್ಯ-ಸುಳ್ಳಿನ‌ ನಡುವೆ ನಡೆಯುವ ಚುನಾವಣೆ. ವಿನಯ್ ಕುಮಾರ್​ರನ್ನು ಬಿಜೆಪಿಯವರು ಹಣ ಕೊಟ್ಟು ಚುನಾವಣೆಗೆ ನಿಲ್ಲಿಸಿದ್ದಾರೆ. ಅವರಿಗೆ ಮತ ಹಾಕಿದ್ರೆ ಬಿಜೆಪಿಗೆ ಹೋಗಲಿದೆ. ನಿಮ್ಮ ಮತ ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರಿಗೆ ನೀಡಿ ಎಂದು ಸಿಎಂ ಸಿದ್ದರಾಮಯ್ಯ ಮತದಾರರಲ್ಲಿ ಮತಯಾಚನೆ ಮಾಡಿದರು.

ದಾವಣಗೆರೆ ಜಿಲ್ಲೆಯ ಹೊನ್ನಾಳಿಯಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಹತ್ತು ವರ್ಷಗಳಿಂದ ಪ್ರಧಾನಿ ಆದ್ರು. ಸಂಸದ ಜಿ. ಎಂ ಸಿದ್ದೇಶ್ವರ್ ಸಚಿವರಾಗಿದ್ದರು. ಇವರ ಅವಧಿಯಲ್ಲಿ ಅಹಿಂದಕ್ಕೆ, ಬಡವರಿಗೆ, ಕೃಷಿಕರಿಗೆ ಏನು ಉಪಯೋಗ ಮಾಡಲಿಲ್ಲ. ಆದ್ರೆ ಅವರಿಗೇಕೆ ಮತ ಕೊಡ್ತಿರಿ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

''ಇನ್ನು ಜಿ.ಎಂ ಸಿದ್ದೇಶ್ವರ್ ಅವರನ್ನು ಅಸಮರ್ಥ ಎಂದು ಮಂತ್ರಿ ಸ್ಥಾನದಿಂದ ತೆಗೆದುಹಾಕಿದ್ರು. ಅವರನ್ನು ಎಂಪಿ ಹೇಗೆ ಮಾಡಿದ್ರಿ?. ಜನರ ಪರ, ರೈತರ ಪರ ಪಾರ್ಲಿಮೆಂಟ್​ನಲ್ಲಿ ಯಾವಾಗ ಸಿದ್ದೇಶ್ವರ್ ಧ್ವನಿ ಎತ್ತಿದ್ದಾರೆ?. ಈ ಬಾರಿ ಸಿದ್ದೇಶ್ವರ್ ಸೋಲುತ್ತಾರೆಂದು ಅವರಿಗೆ ಟಿಕೆಟ್ ಕೊಡಲಿಲ್ಲ. ಜಿ. ಎಂ ಸಿದ್ದೇಶ್ವರ್ ಬದಲಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರ್​ಗೆ ಟಿಕೆಟ್ ಕೊಟ್ಟಿದ್ದಾರೆ. ಜಿ ಎಂ ಸಿದ್ದೇಶ್ವರ್ ಪಾರ್ಲಿಮೆಂಟ್​ನಲ್ಲಿ ಬಾಯಿ ಬಿಡಲಿಲ್ಲ ಎಂದರೆ ಅವರ ಪತ್ನಿ ಬಾಯಿ ಬಿಡ್ತಾರಾ..?'' ಎಂದು ಕೇಳಿದರು.

''ಪಾರ್ಲಿಮೆಂಟ್​ನಲ್ಲಿ ಮಾತನಾಡ್ತಾರಾ? ಲೋಕಸಭೆಯಲ್ಲಿ ಇವರು ಧ್ವನಿ ಎತ್ತಲಿಲ್ಲ. ಇವರು ಟಿಎ ಡಿಎ ತೆಗೆದುಕೊಳ್ಳಲು ಪಾರ್ಲಿಮೆಂಟ್​ಗೆ ಹೋಗ್ತಾರೆಂದು ವಾಗ್ದಾಳಿ ನಡೆಸಿದರು. ನಾನು ಕೊಟ್ಟಿರುವ ಯೋಜನೆಗಳಂತೆ ಪ್ರಧಾನಿ ಮೋದಿ ತಮ್ಮ 10 ವರ್ಷಗಳ ಆಡಳಿತಾವಧಿಯಲ್ಲಿ ಹತ್ತು ಸಾಧನೆ, ಯೋಜನೆಗಳನ್ನು ಹೇಳಲಿ. ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ'' ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ನಾವು ತೆರಿಗೆ ಹಣಕ್ಕಾಗಿ ಭಿಕ್ಷೆ ಬೇಡುವುದಿಲ್ಲ : ''ನಾವು ಕೇಂದ್ರದ ಬಳಿ ಭಿಕ್ಷೆ ಬೇಡುವುದಿಲ್ಲ. ಇವರು ತೆರಿಗೆ ಕಟ್ಟಿದ ಹಣ ಕೊಡಲಿಲ್ಲ. ನಮ್ಮ ಕಾಂಗ್ರೆಸ್ ಸಂಸದ​ ಡಿ ಕೆ ಸುರೇಶ್ ಬಿಟ್ರೆ ಯಾವ ಎಂಪಿ ಕೂಡ ಇದರ ಬಗ್ಗೆ ಧ್ವನಿ ಎತ್ತಲಿಲ್ಲ. ಕೋಲೆ ಬಸವನ ರೀತಿ ತಲೆ ಅಲ್ಲಾಡಿಸುತ್ತಾ 25 ಬಿಜೆಪಿ ಎಂಪಿಗಳು ಕೂತಿದ್ದರು. ಅಮಿತ್ ಶಾ, ಪ್ರಧಾನಿ ಮೋದಿ, ಜೆಪಿ ನಡ್ಡಾ ಏನ್ ಹೇಳ್ತಾರೆ ಅದಕ್ಕೆ? ತಲೆ ಅಲ್ಲಾಡಿಸುವುದೇ ಈ ಬಿಜೆಪಿ ಸಂಸದರ ಕೆಲಸ'' ಎಂದು ಸಿಎಂ ವಾಗ್ದಾಳಿ ನಡೆಸಿದರು.

''ಕಪ್ಪು ಹಣದ ಬಗ್ಗೆ ಮಾತನಾಡಿ, ಕಪ್ಪು ಹಣ ತಂದು 15 ಲಕ್ಷ ರೂ. ಕೊಡ್ತಿನಿ ಎಂದಿದ್ದರು. ಆದರೆ ಮೋದಿ ಯಾಕಪ್ಪ ಕೊಡಲಿಲ್ಲ. ನಿಮ್ಮಲ್ಲಿ ಕೈ ಮುಗಿದು ಮನವಿ ಮಾಡುವೆ ಬಿಜೆಪಿಯವರಿಗೆ ಮತಹಾಕ್ಬೇಡಿ, ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದ್ರೆ, ಮೋದಿ ಪಕೋಡ ಮಾರಿ ಎಂದರು'' ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹರಿಹಾಯ್ದರು.

''ಯಡಿಯೂರಪ್ಪ ರೈತ ಹೋರಾಟಗಾರ ಎನ್ನುತ್ತಾರೆ. ಅವರು ಸಿಎಂ ಆದಾಗ ಅನ್ನಭಾಗ್ಯದ ಅಕ್ಕಿ ಕಡಿಮೆ ಮಾಡಿದ್ರು. ಮಿಸ್ಟರ್ ಯಡಿಯೂರಪ್ಪ ಬಡವರ ಹೊಟ್ಟೆ ಮೇಲೆ ಹೊಡಿಬೇಡಪ್ಪ ಎಂದು ಮನವಿ ಮಾಡಿದ್ದೆ. ಯಡಿಯೂರಪ್ಪ ಅವರು ಜಪ್ಪಯ್ಯ ಎಂದ್ರು ಕೇಳಲಿಲ್ಲ. ವಿಧಾನಸಭೆ ಚುನಾವಣೆಯಲ್ಲಿ ಐದು ಕೆಜಿ ಅಕ್ಕಿ ಜೊತೆ ಇನ್ನೂ ಐದು ಕೆಜಿ ಒಟ್ಟು 10 ಕೆಜಿ ಅಕ್ಕಿ ಕೊಡ್ತಿವಿ ಎಂದು ಮಾತು ಕೊಟ್ಟಿದ್ವಿ. ಅಕ್ಕಿ ಕೊಡಿ ಎಂದ್ರೆ ಕೊಡಲಿಲ್ಲ. ಫುಡ್ ಕಾರ್ಪೋರೇಷನ್ ಆಫ್ ಇಂಡಿಯಾದವರು ನಿರಾಕರಣೆ ಮಾಡಿದ್ರು. ಮಾತು ಕೊಟ್ಟಿದ್ವಿ, ಎಲ್ಲಿಯವರೆಗೆ ಅಕ್ಕಿ ಸಿಗಲ್ಲವೋ ಅಲ್ಲಿ ತನಕ ಐದು ಕೆಜಿ ಅಕ್ಕಿ, ಉಳಿದ ಅಕ್ಕಿಗೆ ಹಣವನ್ನು ಕೊಡ್ಬೇಕೆಂದು ತೀರ್ಮಾನ ಮಾಡಿ ಹಣ ಕೊಟ್ಟಿದ್ದೇವೆ'' ಎಂದು ಸಿಎಂ ತಿಳಿಸಿದರು.

ಜಿ.ಬಿ ವಿನಯ್ ಕುಮಾರ್​ನನ್ನು ಬಿಜೆಪಿಯವರು ಹಣ ಕೊಟ್ಟು ಚುನಾವಣೆಗೆ ನಿಲ್ಲಿಸಿದ್ದಾರೆ‌: ''ಪಕ್ಷೇತರ ಅಭ್ಯರ್ಥಿ ವಿನಯ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರಿ ನಾಲ್ಕು ತಿಂಗಳಾಗಿತ್ತು. ಟಿಕೆಟ್ ಕೇಳಿದ್ರು. ಈಗಾಗಲೇ ಇಬ್ಬರಿಗೆ ಟಿಕೆಟ್ ಕೊಟ್ಟಿದ್ದರಿಂದ ಕೊಡಲಿಲ್ಲ. ಓಕೆ, ಆದರೆ ಈ ಬಿಜೆಪಿಯವರು ಕುರುಬರಿಗೆ ಎಷ್ಟು ಟಿಕೆಟ್ ಕೊಟ್ಟಿದ್ದಾರೆ? ಎಂದರು. ಇನ್ನು ವಿನಯ್ ಕುಮಾರ್​ಗೆ ಈಗಾಗಲೇ ಎರಡು ಟಿಕೆಟ್ ಕೊಟ್ಟಿದ್ದೀವಿ. ಮತ್ತೊಂದು ಟಿಕೆಟ್ ಕೊಡಲು ಬರಲ್ಲ ಎಂದು ಟಿಕೆಟ್ ನಿರಾಕರಣೆ ಮಾಡಿದ್ದೆವು. ಆದ್ದರಿಂದ ಜಿ. ಬಿ ವಿನಯ್ ಕುಮಾರ್​ನನ್ನು ಬಿಜೆಪಿಯವರು ಹಣ ಕೊಟ್ಟು ಚುನಾವಣೆಗೆ ನಿಲ್ಲಿಸಿದ್ದಾರೆ‌'' ಎಂದು ಸಿಎಂ ಆರೋಪಿಸಿದರು.

''ಅವರಿಗೆ ಮತ ಹಾಕ್ಬೇಡಿ. ನಿಮಗೆ ನಾನು ಬೇಕಾ ಇಲ್ಲವಾ. ವಿನಯ್ ಕುಮಾರ್ ಬೇಕಾ?. ವಿನಯ್ ಕುಮಾರ್ ಅವರಪ್ಪನಾಣೆ ಗೆಲ್ಲಲ್ಲ. ಅವನಿಗೆ ಮತ ಹಾಕಿದ್ರೆ ಬಿಜೆಪಿಗೆ ಮತ ಹಾಕಿದಂತೆ. ಬಿಜೆಪಿ ಈ ಬಾರಿ ಸೋಲುವುದು ಗ್ಯಾರಂಟಿ. ಮೋದಿ ಪ್ರಧಾನಿ ಆಗಲ್ಲ. ಗಾಯಿತ್ರಿ ಸಿದ್ದೇಶ್ವರ್ ಗೆಲ್ಲಲ್ಲ. ಗೆಲುವು ಡಾ. ಪ್ರಭಾ ಮಲ್ಲಿಕಾರ್ಜುನ್‌ ಅವರದ್ದು. ಡಾ. ಪ್ರಭಾ ಮಲ್ಲಿಕಾರ್ಜುನ್‌ ವಿದ್ಯಾವಂತೆ. ಮಾತನಾಡುವ ಶಕ್ತಿ ಇದೆ. ಪಾರ್ಲಿಮೆಂಟ್​ನಲ್ಲಿ ಧ್ವನಿ ಎತ್ತುವ ಶಕ್ತಿ ಇದೆ. ನನಗೆ ಶಕ್ತಿ ತುಂಬಿ'' ಎಂದು ಸಿಎಂ ಮತದಾರರಿಗೆ ಮನವಿ ಮಾಡಿದರು.

ಇದನ್ನೂ ಓದಿ :10 ವರ್ಷದಲ್ಲಿ ಪ್ರಧಾನಿ ಮೋದಿ ಆಡಳಿತ ಶೂನ್ಯ: ಸಿಎಂ ಸಿದ್ದರಾಮಯ್ಯ - CM Siddaramaiah

Last Updated : May 5, 2024, 7:22 PM IST

ABOUT THE AUTHOR

...view details