ಬೆಂಗಳೂರು :ಹಣಕಾಸು ಇಲಾಖೆ ಗಮನಕ್ಕೆ ಬಾರದೆ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ವರ್ಗಾವಣೆ ಮಾಡಲಾಗಿದ್ದು, ಇದರಲ್ಲಿ ನನ್ನ ಪಾತ್ರ ಇಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಬಿಜೆಪಿಯವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ನನಗೂ ಅದಕ್ಕೂ ಏನು ಸಂಬಂಧ ಇದೆ. ನಿಗಮದ ಒಂದನೇ ಕಂತಿನ ಹಣ ಹಣಕಾಸು ಇಲಾಖೆಯಿಂದ ಸಂಬಂಧಿತ ಇಲಾಖೆ ಕಾರ್ಯದರ್ಶಿಗೆ ಕೊಡುತ್ತಾರೆ. ಅವರಿಂದ ಇಲಾಖೆ ಮುಖ್ಯಸ್ಥರಿಗೆ ಹಣ ಕೊಡುತ್ತಾರೆ. ಅವರಿಂದ ನಿಗಮದ ಎಂಡಿಗೆ ಹಣ ಮೂವ್ ಆಗುತ್ತೆ. ಅದರಂತೆ ಕೊನೆ ಕಂತಿನ ಹಣ ಖಜಾನೆಯಲ್ಲಿರುತ್ತದೆ. ಹಣ ಬಿಡುಗಡೆ ಮಾಡುವಂತೆ ಎಂಡಿ ನಿಗಮದ ನಿರ್ದೇಶಕ ಕಲ್ಲೇಶ್ಗೆ ಪತ್ರ ಬರೆಯುತ್ತಾರೆ. ಖಜಾನೆಯಿಂದ ನಿಗಮದ ನಿರ್ದೇಶಕ ಕಲ್ಲೇಶ್ ನೇರವಾಗಿ ಹಣ ಡ್ರಾ ಮಾಡಿದ್ದಾನೆ. ಅದರಲ್ಲಿ ನನ್ನ ಪಾತ್ರ ಏನಿದೆ? ಎಂದು ಪ್ರಶ್ನಿಸಿದರು.
ಹಣಕಾಸು ಇಲಾಖೆಯ ಗಮನಕ್ಕೆ ತರದೇ ಹಣ ಡ್ರಾ ಮಾಡಿದ್ದಾರೆ. ಮಂಡಳಿ ಸಭೆಯಲ್ಲಿ ಅನುಮತಿ ನೀಡಲಾಗಿದೆ ಎಂದು ನಕಲಿ ದಾಖಲೆ ಸೃಷ್ಟಿಸಿದ್ದಾರೆ. 30.3.2024 ಮಂಡಳಿ ಸಭೆ ಆಗಿದೆ ಎಂದು ನಕಲಿಯಾಗಿ ಸೃಷ್ಟಿ ಮಾಡುತ್ತಾರೆ. ಆವಾಗ ನೀತಿ ಸಂಹಿತೆ ಇತ್ತು. ನೀತಿ ಸಂಹಿತೆ ಇದೆ. ಮಂಡಳಿ ಸಭೆ ಮಾಡಲು ಆಗಲ್ಲ ಎಂದು ಬ್ಯಾಂಕ್ ಅಧಿಕಾರಿಗಳಿಗೆ ಗೊತ್ತಿರಲ್ವಾ? ಎಂದು ತಿಳಿಸಿದರು.
ಬಿಜೆಪಿ, ಜೆಡಿಎಸ್ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದ ಬಗ್ಗೆ ಪ್ರಸ್ತಾಪಿಸಿದರು. ನಿಯಮ 69ರಡಿ ಸುದೀರ್ಘ ಚರ್ಚೆ ನಡೆಸಲಾಯಿತು. ಗುರುವಾರ ಮಧ್ಯಾಹ್ನದವರೆಗೆ ಚರ್ಚೆ ಮಾಡಿದ್ದಾರೆ. ಸರ್ಕಾರಕ್ಕೂ ಅದರ ನಿಲುವು ಹೇಳುವ ಹಕ್ಕು ಇದೆ. ಅದಕ್ಕೆ ಉತ್ತರ ಕೊಡುವ ಹಕ್ಕಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ಆಗಿಲ್ಲ ಅಂತಿಲ್ಲ. ಅಕ್ರಮ ಯಾರು ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.
ಅಕ್ರಮ ಸಂಬಂಧ ಎಸ್ಐಟಿ ಒಂದು ತನಿಖೆ ಮಾಡುತ್ತಿದೆ. ಇ.ಡಿ ತನಿಖೆ ಮಾಡುತ್ತಿದೆ. ಇನ್ನೊಂದು ಕಡೆ ಸಿಬಿಐ ತನಿಖೆ ಮಾಡುತ್ತಿದೆ. ಬಿಜೆಪಿಯವರು ಸಿಬಿಐಗೆ ಕೊಡಿ ಅಂತಾರೆ. ಆದರೆ, ನಮ್ಮ ಪೊಲೀಸರ ಮೇಲೆ ನಮಗೆ ನಂಬಿಕೆ ಇದೆ. ಸಿಬಿಐ ಈಗಾಗಲೇ ತನಿಖೆ ಮಾಡುತ್ತಿದ್ದಾರೆ. ಇ.ಡಿ ಮಾಡುತ್ತಿದೆ. ಎಸ್ಐಟಿ ತನಿಖೆ ಮಾಡುತ್ತಿದೆ. ಬಿಜೆಪಿಯವರು ಸಿಎಂ ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಬಳಿಕ ದಲಿತ ಹಣ ಎಂದು ಹೇಳುತ್ತಿದ್ದಾರೆ ಎಂದರು.
ಬೋವಿ ಅಭಿವೃದ್ಧಿ ನಿಗಮ ಯಾರದ್ದು ಅದು?. ಆಗ ಬೊಮ್ಮಾಯಿ ಸಿಎಂ ಆಗಿದ್ದರು. 87 ಕೋಟಿ ಅವ್ಯವಹಾರ ಆಗಿದೆ ಎಂದು ಗೂಳಿಹಟ್ಟಿ ಶೇಖರ್ ಆರೋಪಿಸಿದ್ದರು. ಆಗ ಬೊಮ್ಮಾಯಿ ರಾಜೀನಾಮೆ ನೀಡಿದ್ರಾ?. ಬೋವಿ ನಿಗಮ ಅಕ್ರಮವನ್ನ ಸಿಐಡಿ ತನಿಖೆ ಮಾಡುತ್ತಿದೆ. ದೇವರಾಜು ಅರಸು ಟ್ರಕ್ ಟರ್ಮಿನಲ್ 50 ಕೋಟಿ ಅಧಿಕ ಹಗರಣ ಆಗಿದೆ. ಕೆಲಸ ಮಾಡದೆ ಹಣ ತೆಗೆದುಕೊಂಡಿದ್ದಾರೆ. ಡಿ. ಹೆಚ್ ವೀರಯ್ಯ ಖಾತೆಗೆ ಹಣ ಹೋಗಿದೆ. ಆಗ ಬೊಮ್ಮಾಯಿ ರಾಜೀನಾಮೆ ಕೊಟ್ಟಿದ್ದಾರಾ? ಎಂದು ಪ್ರಶ್ನಿಸಿದರು.