ಮೈಸೂರು : ಬಹಳ ಜನ ಡಾಕ್ಟರ್, ಇಂಜಿನಿಯರ್ಗಳು ತಮ್ಮ ಮೌಢ್ಯ, ಕಂದಾಚಾರವನ್ನ ಬಿಡುವುದೇ ಇಲ್ಲ. ಮೌಢ್ಯ, ಕಂದಾಚಾರವನ್ನು ಬಿಡದೇ ಹೋದರೆ ಎಂಥಹಾ ಶಿಕ್ಷಣ ಅದು. ಮನುಷ್ಯ ಮನುಷ್ಯನನ್ನ ಪ್ರೀತಿಸುವ ಶಿಕ್ಷಣ ಬೇಕು. ದ್ವೇಷಿಸುವುದಲ್ಲ. ಜಾತಿ ಆಧಾರದ ಮೇಲೆ ಅಥವಾ ಆರ್ಥಿಕ ಶ್ರೀಮಂತಿಕೆಯ ಮೇಲೆ ನಾವು ಪ್ರೀತಿಸುವುದು ಅಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸಿದ್ಧಾರ್ಥ ಎಜುಕೇಷನ್ ಸೊಸೈಟಿಯ ಕ್ವೆಸ್ಟ್ ಶಿಕ್ಷಣ ಅಕಾಡೆಮಿ ಉದ್ಘಾಟಿಸಿ ಅವರು ಮಾತನಾಡಿದರು. ಬಸವಣ್ಣನ ಕಾಲದಲ್ಲಿ ಮಹಿಳೆಯರಿಗೆ ಸಮಾನತೆ ಬಂತು, ಇಲ್ಲದಿದ್ದರೆ ನಿಮಗೆಲ್ಲ ಸಮಾನತೆಯೇ ಇರಲಿಲ್ಲ. ತಲೆಬೋಳಿಸಿ ಒಳಗಡೆ ಕೂರಿಸುತ್ತಿದ್ದರು. ನೀವೆಲ್ಲಾ ಅಕ್ಷರ ಕಲಿಯುವಂತಿರಲಿಲ್ಲ. ಅಕ್ಷರ ಸಂಸ್ಕೃತಿಯಿಂದ ನೀವೂ ವಂಚಿತರಾಗಿದ್ರಿ. ಶೂದ್ರರು ಹೇಗೆ ಶಿಕ್ಷಣದಿಂದ ವಂಚಿತರಾಗಿದ್ದರೋ ಅದೇ ರೀತಿ ಮಹಿಳೆಯರು ಕೂಡಾ ವಂಚಿತರಾಗಿದ್ದರು. ಈಗ ವಿದ್ಯೆ ಮೂಲಭೂತ ಹಕ್ಕಾಗಿದೆ. ವಿದ್ಯೆಯನ್ನ ಕಲಿಯಲೇ ಬೇಕು. ಆದರೆ ಕಲಿಯುವಾಗ ವೈಚಾರಿಕತೆ ಹಾಗೂ ವೈಜ್ಞಾನಿಕತೆ ಇರುವ ಶಿಕ್ಷಣವನ್ನ ಕಲಿಯಬೇಕು ಎಂದು ಹೇಳಿದರು.
ನಮ್ಮ ಮನೆಯಲ್ಲೆಲ್ಲಾ ಹಣೆಬರಹದ ಬಗ್ಗೆ ಹೇಳುತ್ತಿದ್ದರು. ಬಸವಣ್ಣ ಏನು ಹೇಳಿದ್ದಾರೆ?. ಹಿಂದಿನ ಜನ್ಮದಲ್ಲಿ ಹೀಗಿದ್ದೆವು ಕರ್ಮದ ವಿಚಾರವನ್ನು ತಿರಸ್ಕರಿಸಿ ಎಂದು ಹೇಳಿದ್ರು. ಹಿಂದಿನ ಜನ್ಮವೂ ಇಲ್ಲ, ಮುಂದಿನ ಜನ್ಮವೂ ಇಲ್ಲ. ಈ ಜನ್ಮದಲ್ಲಿ ನಾವು ಮನುಷ್ಯರಾಗಿದ್ದರೆ ನಾವು ಕಲಿತ ವಿದ್ಯೆಗೆ ಅರ್ಥ ಬರುತ್ತೆ ಎಂದರು.
ಪ್ರಾಥಮಿಕ ಶಾಲೆ ಹಾಗೂ ಹೈಸ್ಕೂಲ್ನಲ್ಲಿ ನೀವು ಮಕ್ಕಳನ್ನು ಹೇಗೆ ತಯಾರು ಮಾಡುತ್ತಿರೋ ಹಾಗೆ ಬೆಳವಣಿಗೆಯಾಗುತ್ತಾರೆ. ತಂದೆ - ತಾಯಿಗಳು ಕೂಡಾ ಇದನ್ನೇ ಮಕ್ಕಳಿಗೆ ಹೇಳಿ ಕೊಡಬೇಕು. ಇದನ್ನ ಹೇಳದೇ ಕಂದಾಚಾರ, ಮೌಢ್ಯ, ಹಿಂದಿನ ಜನ್ಮದ ಸಿದ್ದಾಂತ ಇವೆಲ್ಲಾ ಹೇಳಿಕೊಟ್ರೆ ಏನು ಪ್ರಯೋಜನ ಆಗುತ್ತೆ? ಎಂದು ಪ್ರಶ್ನಿಸಿದರು.