ಕರ್ನಾಟಕ

karnataka

ETV Bharat / state

ಸಂವಿಧಾನ ಬದಲಿಸಲು ಬಂದವರನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ: ಸಿದ್ದರಾಮಯ್ಯ

ದುಡಿಯುವವರ, ಶ್ರಮಿಕರ, ರೈತರ, ಕಾರ್ಮಿಕರ ಮತ್ತು ಮಹಿಳಾ ಸಮುದಾಯದ ಅಸ್ತಿತ್ವ ಅಡಗಿರುವುದೇ ಸಂವಿಧಾನದಲ್ಲಿ. ಸಂವಿಧಾನ ಬದಲಾವಣೆಯಿಂದ ಈ ಎಲ್ಲಾ ಸಮುದಾಯಗಳು ಮರಳಿ ಗುಲಾಮಗಿರಿಗೆ ದೂಡಲ್ಪಡುತ್ತವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಸಿದ್ದರಾಮಯ್ಯ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶ
ಸಿದ್ದರಾಮಯ್ಯ

By ETV Bharat Karnataka Team

Published : Feb 25, 2024, 8:21 PM IST

Updated : Feb 25, 2024, 9:44 PM IST

ಬೆಂಗಳೂರು: ಸಂವಿಧಾನ ಬದಲಾಯಿಸಲು ಬಂದಿರುವವರನ್ನು ಅಧಿಕಾರದಿಂದ ಕಿತ್ತೊಗೆಯದಿದ್ದರೆ ಪ್ರಜಾಪ್ರಭುತ್ವಕ್ಕೆ ಉಳಿಗಾಲವಿಲ್ಲ ಎಂದು ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ನಗರದ ಅರಮನೆ ಮೈದಾನದಲ್ಲಿ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಡೀ ವಿಶ್ವದ ಸಂವಿಧಾನಗಳನ್ನೆಲ್ಲಾ ಅಧ್ಯಯನ ಮಾಡಿ ಎಲ್ಲದರಲ್ಲಿರುವ ಅತ್ಯುತ್ತಮ ಸಾರವನ್ನು ತೆಗೆದು ಡಾ. ಬಿ ಆರ್​ ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯದ ಹಕ್ಕುಗಳನ್ನು ನಮ್ಮ ಸಂವಿಧಾನದಲ್ಲಿ ಸೇರಿಸಿದ್ದಾರೆ. ಬುದ್ಧ, ಬಸವಾದಿ ಶರಣರು, ವಚನ ಕ್ರಾಂತಿಯ ಆಶಯಗಳು ಮತ್ತು ಕುವೆಂಪು, ನಾರಾಯಣಗುರು, ವಿವೇಕಾನಂದರು ಸೇರಿದಂತೆ ಮುಂತಾದವರ ಆಶಯಗಳ ಮೂರ್ತರೂಪ ನಮ್ಮ ಸಂವಿಧಾನವಾಗಿದೆ ಎಂದು ವಿವರಿಸಿದರು.

ನರೇಂದ್ರ ಮೋದಿಯವರ ಮಂತ್ರಿ ಮಂಡಲದಲ್ಲಿ ಇದ್ದುಕೊಂಡೇ ಕೇಂದ್ರ ಸಚಿವ ಆಗಿದ್ದ ಅನಂತಕುಮಾರ ಹೆಗಡೆ, "ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು" ಎಂದು ಘೋಷಿಸಿದ್ದರು. ಈ ಘೋಷಣೆಯನ್ನು ಪ್ರಧಾನಿ ಮೋದಿಯವರಾಗಲೀ, ಅಮಿತ್ ಶಾ ಆಗಲೀ, ಬಿಜೆಪಿಯಾಗಲೀ, ಆರ್​​ಎಸ್ಎಸ್ ಆಗಲಿ ಖಂಡಿಸಲಿಲ್ಲ. ವಿರೋಧಿಸಲಿಲ್ಲ. ಹೀಗಾಗಿ ಬಿಜೆಪಿ ಮತ್ತು ಆರ್​ಎಸ್ಎಸ್​​ನ ಅಜೆಂಡಾ, ಉದ್ದೇಶವನ್ನು ಅನಂತಕುಮಾರ ಹೆಗಡೆ ಬಾಯಲ್ಲಿ ಹೇಳಿಸಿದ್ದರು. ಈ ಬಗ್ಗೆ ಇಡೀ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು ಎಂದರು.

ಈ ದೇಶದ, ನಮ್ಮ ನಾಡಿನ ದುಡಿಯುವವರ ಹಕ್ಕುಗಳು, ಶ್ರಮಿಕರು, ರೈತರು, ಕಾರ್ಮಿಕರು ಮತ್ತು ಮಹಿಳಾ ಸಮುದಾಯದ ಅಸ್ತಿತ್ವ ಅಡಗಿರುವುದೇ ನಮ್ಮ ಸಂವಿಧಾನದಲ್ಲಿ. ಸಂವಿಧಾನ ಬದಲಾವಣೆಯಿಂದ ಈ ಎಲ್ಲಾ ಸಮುದಾಯಗಳು ಮರಳಿ ಗುಲಾಮಗಿರಿಗೆ ದೂಡಲ್ಪಡುತ್ತಾರೆ. ಸಂವಿಧಾನ ಇಲ್ಲದ ಸಂದರ್ಭದಲ್ಲಿ ಶೂದ್ರ, ದಲಿತ ಮತ್ತು ಶ್ರಮಿಕರನ್ನು ಹೇಗೆ ನಡೆಸಿಕೊಳ್ಳಲಾಗುತ್ತಿತ್ತು ಎನ್ನುವುದನ್ನು ಸ್ಮರಿಸಿಕೊಳ್ಳಿ ಎಂದು ಸಿಎಂ ಹೇಳಿದರು.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಮಾಜ ಕಲ್ಯಾಣ ಇಲಾಖೆ ಸಚಿವರಾದ ಹೆಚ್.ಸಿ.ಮಹದೇವಪ್ಪ, ಐಎನ್​ಡಿಐಎ ಒಕ್ಕೂಟದ ಮುಖಂಡರಾದ ಫಾರೂಕ್ ಅಬ್ದುಲ್ಲಾ, ಸೀತಾರಾಮ್ ಯೆಚೂರಿ ಸೇರಿ 18 ರಾಜ್ಯಗಳ 40 ಮಂದಿ ಮುಖಂಡರು, 12 ಪಕ್ಷಗಳ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇನ್ನು ಶನಿವಾರದ ನಡೆದ ಸಂವಿಧಾನ ಮತ್ತು ರಾಷ್ಟ್ರೀಯ ಐಕ್ಯತಾ ಸಮಾವೇಶದ ಉದ್ಘಾಟನೆ ಸಮಾರಂಭದಲ್ಲಿಯೂ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿದ್ದರು. ಸಂವಿಧಾನದ ವಿರುದ್ಧ ಎರಡು ಅಪಪ್ರಚಾರಗಳು ನಡೆಯುತ್ತಿದೆ. ಸಂವಿಧಾನ ದಲಿತರ ಉದ್ಧಾರಕ್ಕಾಗಿದೆ ಹಾಗೂ ಸಾಮಾಜಿಕ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿಲ್ಲ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಸಂವಿಧಾನ, ಸಮಾನತೆ, ಮಾನವ ಸಮಾಜದ ನಿರ್ಮಾಣದ ಪರವಾಗಿರುವವರ ಕೈಯಲ್ಲಿದ್ದರೆ ಸಂವಿಧಾನ ಯಶಸ್ವಿಯಾಗುತ್ತದೆ. ಸಂವಿಧಾನಕ್ಕೆ ವಿರುದ್ಧವಾಗಿರುವವರ ಕೈಯಲ್ಲಿದ್ದರೆ ನಮಗೆ ಉಳಿಗಾಲವಿಲ್ಲ. ಸಂವಿಧಾನದ ಆಶಯಗಳು ಈಡೇರಲು ಸಂವಿಧಾನದ ಪರವಾಗಿರುವವರ ಕೈಯಲ್ಲಿ ಅಧಿಕಾರವಿರಬೇಕು ಎಂದು ತಿಳಿಸಿದ್ದರು.

ಇದನ್ನೂ ಓದಿ:ಬಹಳ ಜನ ನನಗೆ ಹಾಸನಕ್ಕೆ ಹೋಗ್ಬೇಡಿ ವಾಮಾಚಾರ ಮಾಡಿಸಿ ಬಿಡ್ತಾರೆ ಅಂದಿದ್ದರು: ಸಚಿವ ರಾಜಣ್ಣ ವ್ಯಂಗ್ಯ

Last Updated : Feb 25, 2024, 9:44 PM IST

ABOUT THE AUTHOR

...view details