ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ಸೋಲಿನ ಭೀತಿಯಲ್ಲಿರುವ ಭಾರತೀಯ ಜನತಾ ಪಕ್ಷವು ಐಟಿ, ಇಡಿ, ಸಿಬಿಐ ಮೊದಲಾದ ಸ್ವಾಯತ್ತ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಹಣಿಯಲು ಹೊರಟಿದೆ. ಈ ಹುನ್ನಾರದ ಭಾಗವಾಗಿಯೇ ನಮ್ಮ ಪಕ್ಷದ ವಿರುದ್ಧ 'ತೆರಿಗೆ ಭಯೋತ್ಪಾದನೆ'ಯಲ್ಲಿ ತೊಡಗಿದೆ. ಈ ರೀತಿ ನಮ್ಮ ಪಕ್ಷವನ್ನು ದುರ್ಬಲಗೊಳಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಬಹುದೆಂದು ಬಿಜೆಪಿ ತಿಳಿದುಕೊಂಡಿದ್ದರೆ ಅದು ಆ ಪಕ್ಷದ ಭ್ರಮೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಿಎಂ, ಕಾಂಗ್ರೆಸ್ ಪಕ್ಷದ ಮೇಲೆ ವರಮಾನ ತೆರಿಗೆ ಪಾವತಿ ಮಾಡದೆ ಇರುವ ಆರೋಪ ಹೊರಿಸಿ 1823 ಕೋಟಿ ರೂ. ಪಾವತಿಸುವಂತೆ ಐಟಿ ಇಲಾಖೆ ನೋಟಿಸ್ ನೀಡಿದೆ. 2017-18ರಲ್ಲಿ ಬಿಜೆಪಿ ಹೆಸರೇ ಇಲ್ಲದ 92 ದಾನಿಗಳಿಂದ 4.5 ಲಕ್ಷ ರೂ. ಮತ್ತು ವಿಳಾಸವೇ ಇಲ್ಲದ 1297 ದಾನಿಗಳಿಂದ 42 ಕೋಟಿ ರೂ. ದೇಣಿಗೆ ಪಡೆದಿರುವುದನ್ನು ನಮ್ಮ ಪಕ್ಷದ ನಾಯಕರು ಬಯಲಿಗೆಳೆದಿದ್ದಾರೆ. ನಮ್ಮ ಪಕ್ಷಕ್ಕೆ ಅನ್ವಯಿಸಿದ ಮಾನದಂಡವನ್ನೇ ಅನ್ವಯಿಸಿದರೆ ಬಿಜೆಪಿ ಕಳೆದ ಏಳು ವರ್ಷಗಳಲ್ಲಿ ನಡೆಸಿರುವ ತೆರಿಗೆ ಉಲ್ಲಂಘನೆಗಾಗಿ 4263 ಕೋಟಿ ರೂ. ಪಾವತಿಸಬೇಕಾಗಿದೆ ಎಂದು ತಿಳಿಸಿದ್ದಾರೆ.
ಚುನಾವಣೆ ಘೋಷಣೆಯಾಗುತ್ತಿದ್ದಂತೆ ಅತಿಕ್ರಿಯಾಶೀಲ ಆಗಿರುವ ಐಟಿ ಇಲಾಖೆ ಟಿಎಂಸಿ, ಸಿಪಿಐ ಸೇರಿದಂತೆ ಬೇರೆ ವಿರೋಧ ಪಕ್ಷಗಳ ಮೇಲೆಯೂ ತೆರಿಗೆ ಭಯೋತ್ಪಾದನೆಯ ಅಸ್ತ್ರ ಪ್ರಯೋಗ ಮಾಡಿದೆ. ವಿರೋಧ ಪಕ್ಷಗಳ ಮೇಲೆ ಮುಗಿಬಿದ್ದಿರುವ ಐಟಿ ಇಲಾಖೆ, ಬಿಜೆಪಿಯ ತೆರಿಗೆ ಉಲ್ಲಂಘನೆ ಬಗ್ಗೆ ಮಾತ್ರ ಕುರುಡಾಗಿದೆ. ಐಟಿ ಇಲಾಖೆಯ ಕಣ್ಣಿಗೆ ಬಟ್ಟೆ ಕಟ್ಟಿರುವವರು ಯಾರು ಎನ್ನುವುದನ್ನು ತಿಳಿಯದಷ್ಟು ದೇಶದ ಜನತೆ ದಡ್ಡರಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಕೆಲವು ನಾಯಕರ ಡೈರಿಗಳೆಂದು ಹೇಳಲಾದ ದಾಖಲೆ ಪತ್ರಗಳನ್ನು ಮುಂದಿಟ್ಟುಕೊಂಡು ತೆರಿಗೆ ಉಲ್ಲಂಘನೆಯ ಆರೋಪ ಮಾಡುತ್ತಿರುವ ಐಟಿ ಇಲಾಖೆಗೆ, ಕರ್ನಾಟಕದಲ್ಲಿಯೇ ಬಯಲಾಗಿದ್ದ ಯಡಿಯೂರಪ್ಪ ಡೈರಿಗಳಾಗಲಿ, ನರೇಂದ್ರ ಮೋದಿಯವರೂ ಫಲಾನುಭವಿ ಎಂದು ಆರೋಪಿಸಲಾಗಿರುವ 'ಬಿರ್ಲಾ-ಸಹಾರಾ' ಡೈರಿಯಾಗಲಿ ಯಾಕೆ ಕಣ್ಣಿಗೆ ಬಿದ್ದಿಲ್ಲ? ಎಂದು ಪ್ರಶ್ನಿಸಿದ್ದಾರೆ.
ಐಟಿ, ಇಡಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಚುನಾವಣಾ ಬಾಂಡ್ಗಳ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಆಡಳಿತಾರೂಢ ಬಿಜೆಪಿ ಸುಲಿಗೆ ಮಾಡಿರುವುದು ಜಗಜ್ಜಾಹೀರಾಗಿದೆ. ಬಯಲಾಗಿರುವ ಈ ಹಗರಣದಿಂದ ಜನರ ಗಮನ ಬೇರೆ ಕಡೆ ಸೆಳೆಯುವ ಜೊತೆಯಲ್ಲಿ ವಿರೋಧ ಪಕ್ಷಗಳನ್ನೂ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ದುರುದ್ದೇಶದಿಂದಲೇ ಬಿಜೆಪಿ ಸರ್ಕಾರ ವರಮಾನ ತೆರಿಗೆ ವಂಚನೆಯ ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಕಿಡಿ ಕಾರಿದ್ದಾರೆ.