ಮೈಸೂರು:ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಜೈಲಿಗೆ ಹೋದರೂ ಪರವಾಗಿಲ್ಲ, ಆದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಮಾತ್ರ ಕೊಡಬಾರದು. ರಾಜ್ಯದಲ್ಲಿ ರಾಜ್ಯಪಾಲರು ರಾಜಕಾರಣಿಯಾಗಿ ವರ್ತಿಸುತ್ತಿದ್ದಾರೆ ಎಂದು ಮೈಸೂರಿನಲ್ಲಿ ಮಂಗಳವಾರ ಕನ್ನಡ ಚಳುವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು.
ನಗರದ ಆರ್ಗೇಟ್ ವೃತ್ತದ ಬಳಿ ಏಕಾಂಗಿ ಪ್ರತಿಭಟನೆ ನಡೆಸಿದ ವಾಟಾಳ್, ರಾಜಭವನ ರಾಜಕೀಯ ಭವನ ಆಗುತ್ತಿದೆ. ರಾಜ್ಯಪಾಲರ ಬಗ್ಗೆ ಲೋಕಸಭೆಯಲ್ಲಿ ಚರ್ಚೆಯಾಗಬೇಕು. ಚುನಾಯಿತ ಸರ್ಕಾರವನ್ನು ಅವರು ಅಸ್ಥಿರಗೊಳಿಸುತ್ತಿದ್ದಾರೆ ಎಂದು ಟೀಕಿಸಿದರು.
ಮೊದಲಿನ ಸಿದ್ದರಾಮಯ್ಯ ಈಗಿಲ್ಲ: ಕೇಜ್ರಿವಾಲ್ ಜೈಲಿಗೆ ಹೋದರೂ ರಾಜೀನಾಮೆ ಕೊಡಲಿಲ್ಲ ಎಂದ ಅವರು, ಮೊದಲಿನ ಸಿದ್ದರಾಮಯ್ಯ ಈಗ ಇಲ್ಲ. ಕುಗ್ಗಿ ಹೋಗಿದ್ದಾರೆ. ಇದಕ್ಕೆ ಕಾರಣ ಅವರ ಪಕ್ಷದ ಸಚಿವರು, ಶಾಸಕರು. ನಾನು ಸಿಎಂ ಆಗಬೇಕೆಂದು ಕಾಂಗ್ರೆಸ್ನಲ್ಲಿ ಕಚ್ಚಾಡುತ್ತಿದ್ದಾರೆ. ಇದರಿಂದ ಸಿಎಂಗೆ ಅಗೌರವವಾಗಿದೆ. ರಾಜ್ಯಕ್ಕೂ ಇದು ಅಗೌರವ. ಮಂತ್ರಿಗಳು ಇದನ್ನೆಲ್ಲ ಮಾಡಬಾರದು. ಸಿದ್ದರಾಮಯ್ಯನವರಿಗಾಗಿ ಹೋರಾಟ ಮಾಡಿ, ದೇಶಕ್ಕೆ ಮಾದರಿಯಾಗಬೇಕು ಎಂದು ಹೇಳಿದರು.
ಈಗ ಇರುವುದು ರೌಡಿ ರಾಜಕಾರಣಿಗಳು: ಇತ್ತೀಚಿನ ದಿನಗಳಲ್ಲಿ ಸಭ್ಯ ರಾಜಕಾರಣಗಳು ಯಾರೂ ಇಲ್ಲ. ಎಲ್ಲರೂ ಹದಗೆಟ್ಟು ಹೋಗಿದ್ದಾರೆ. ತಮ್ಮ ಮಾತಿನ ಬಗ್ಗೆ ಹಿಡಿತವಿಲ್ಲ. ಸಂಸದರು, ಶಾಸಕರು ಎಲ್ಲರೂ ಒಂದೇ ರೀತಿಯ ಭಾಷೆ ಬಳಸುತ್ತಿದ್ದಾರೆ. ಈಗ ಇರುವುದು ರೌಡಿ ರಾಜಕಾರಣಿಗಳು. ನಾನೇನಾದರೂ ಸದನದಲ್ಲಿ ಇದ್ದಿದ್ದರೆ ಎಲ್ಲರ ಬಟ್ಟೆ ಬಿಚ್ಚುತ್ತಿದ್ದೆ. ರಾಜಕಾರಣಿಗಳ ಬಂಡವಾಳ ಬಯಲು ಮಾಡುತ್ತಿದ್ದೆ ಎಂದು ಪರೋಕ್ಷವಾಗಿ ಮುನಿರತ್ನ ವಿರುದ್ಧ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಕಲ್ಯಾಣ ಕರ್ನಾಟಕಕ್ಕೆ ಬಂಪರ್; ಬೀದರ್, ರಾಯಚೂರು ನಗರಪಾಲಿಕೆಗಳನ್ನಾಗಿ ಮಾಡಲು ಸಚಿವ ಸಂಪುಟ ಅಸ್ತು - Bidar Raichur upgrade to MC