ಮೈಸೂರು :ಮೈಸೂರು-ಕೊಡಗು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲುವುದು ಖಚಿತ. ಇವೆರಡನ್ನೂ ಸೇರಿಸಿ ಕನಿಷ್ಠ 20 ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಮೈಸೂರು, ಕೊಡಗು ಮತ್ತು ಚಾಮರಾಜನಗರ ಮೂರು ಜಿಲ್ಲಾ ವ್ಯಾಪ್ತಿಯ ಸಚಿವರು, ಮಾಜಿ ಸಚಿವರು, ಶಾಸಕರು, ಮಾಜಿ ಶಾಸಕರು, ಜಿಲ್ಲಾ ಮುಖಂಡರು, ಬೋರ್ಡ್ ಅಧ್ಯಕ್ಷರುಗಳು, ಬ್ಲಾಕ್ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಸಭೆಯಲ್ಲಿ ಸಿಎಂ ಮಾತನಾಡಿದರು. ಇವೆರಡೂ ಕಾಂಗ್ರೆಸ್ ಕ್ಷೇತ್ರಗಳು. ಮತ್ತೆ ನಮ್ಮ 'ಕೈ'ಗೆ ಬರಲೇಬೇಕು. ಹಿಂದಿನ ಬಾರಿ ಕೆಲವು ಕಾರಣಗಳಿಂದಾಗಿ ಅತ್ಯಂತ ಕಡಿಮೆ ಮತಗಳಿಂದ ನಮಗೆ ಹಿನ್ನಡೆಯಾಗಿತ್ತು. ಆದರೆ ಈ ಬಾರಿ ಬಿಜೆಪಿ ಪರವಾದ ಯಾವ ಕಾರಣಗಳೂ ಇಲ್ಲ. ರಾಜ್ಯದಲ್ಲಿ ಬಿಜೆಪಿ ವಿರೋಧಿ ಅಲೆ ಜೋರಾಗಿದೆ. ಬಿಜೆಪಿಯ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ತುತ್ತಾಗಿದ್ದ ರಾಜ್ಯದ ಎಲ್ಲಾ ಕುಟುಂಬಗಳಿಗೆ ಕಾಂಗ್ರೆಸ್ ಗ್ಯಾರಂಟಿಗಳು ನೆಮ್ಮದಿ ತರಿಸಿರುವುದನ್ನು ನಾಡಿನ ಜನತೆ ಹೃದಯಪೂರ್ವಕವಾಗಿ ಒಪ್ಪಿಕೊಂಡಿದ್ದಾರೆ ಎಂದರು.
ನಾವು ನಡೆಸಿರುವ ಹಲವು ಸಮೀಕ್ಷೆಗಳಲ್ಲಿ ಮೈಸೂರು, ಚಾಮರಾಜನಗರ ಕ್ಷೇತ್ರಗಳಲ್ಲಿ ಗೆಲ್ಲುವುದೂ ಸೇರಿ 20 ಕ್ಷೇತ್ರಗಳಲ್ಲಿ ನಾವು ಗೆಲ್ಲುವುದು ಖಚಿತ ಎನ್ನುವ ವರದಿಗಳು ಬಂದಿವೆ. ಹೀಗಾಗಿ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಪರವಾದ ಅಭೂತಪೂರ್ವ ಫಲಿತಾಂಶ ಹೊರಗೆ ಬರಲಿದೆ ಎಂದು ಸಿದ್ದರಾಮಯ್ಯ ವಿಶ್ವಾಸದಿಂದ ನುಡಿದರು.
10 ವರ್ಷ ಕೇಂದ್ರದಲ್ಲಿ ಅಧಿಕಾರ ನಡೆಸಿದ ಬಿಜೆಪಿಯವರಿಗೆ ಜನರ ಬಳಿ ಹೋಗಲು ಮುಖ ಇಲ್ಲ. ಏಕೆಂದರೆ ಈ 10 ವರ್ಷಗಳಲ್ಲಿ ಬಿಜೆಪಿ ಜನರಿಗೆ ತೋರಿಸಲು ಒಂದೇ ಒಂದು ಕೆಲಸವನ್ನೂ ಮಾಡಿಲ್ಲ. ಅದಕ್ಕೇ ಕೇವಲ ಮೋದಿಯವರ ಮುಖ ತೋರಿಸಿ ಚುನಾವಣೆ ಮಾಡುತ್ತಿದ್ದೇವೆ ಎಂದು ಬಿಜೆಪಿ ಹೆಣಗಾಡುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಮೋದಿ ಪ್ರಚಾರ ಮಾಡಿದ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ 50-60 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದೆ. ಹೀಗಾಗಿ ಬಿಜೆಪಿ ಸುಳ್ಳುಗಳ ಮೊರೆ ಹೋಗಿದೆ. ನನ್ನ ಬಗ್ಗೆ, ನಮ್ಮ ನಾಯಕರ ಬಗ್ಗೆ, ನಮ್ಮ ಪಕ್ಷದ ಬಗ್ಗೆ ಸರಣಿ ಸುಳ್ಳುಗಳನ್ನು ಹೇಳುತ್ತಾ, ಸುಳ್ಳುಗಳ ಆಧಾರದಲ್ಲೇ ಚುನಾವಣೆ ಮಾಡುತ್ತಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.