ಕರ್ನಾಟಕ

karnataka

ETV Bharat / state

ನಮ್ಮ ಅಭ್ಯರ್ಥಿ ಡಿ.ಕೆ ಸುರೇಶ್ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ: ಸಿಎಂ ಸಿದ್ದರಾಮಯ್ಯ - Loksabha election - LOKSABHA ELECTION

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಗೆಲ್ಲುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

By ETV Bharat Karnataka Team

Published : Mar 28, 2024, 8:50 PM IST

ರಾಮನಗರ :ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿಯೂ ನಮ್ಮ ಅಭ್ಯರ್ಥಿ ಡಿ.ಕೆ ಸುರೇಶ್ ನೂರಕ್ಕೆ ನೂರರಷ್ಟು ಗೆದ್ದೇ ಗೆಲ್ಲುತ್ತಾರೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಸಿಎಂ, ಈ ಬಾರಿ ಈ ಕ್ಷೇತ್ರದಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ. ನಮ್ಮ ಅಭ್ಯರ್ಥಿ ಡಿಕೆ ಸುರೇಶ್ ನಾಮಪತ್ರ ಸಲ್ಲಿಸಿದ್ದಾರೆ. ಡಿ.ಕೆ ಸುರೇಶ್ ಕ್ರಿಯಾಶೀಲ ರಾಜಕಾರಣಿ. ಅವರು ಮನೆ ಮನೆಗೆ ಗೊತ್ತಿರುವಂತಹ ವ್ಯಕ್ತಿ. ಇವರನ್ನು 4ನೇ ಬಾರಿಗೆ ಸಂಸದರಾಗಿ ಜನತೆ ಆಯ್ಕೆ ಮಾಡಲಿದ್ದಾರೆ ಎಂದರು.

ಡಿ.ಕೆ ಶಿವಕುಮಾರ್​ ಮತ್ತು ಡಿ.ಕೆ ಸುರೇಶ್​ ಸಹೋದರರು

5 ಗ್ಯಾರಂಟಿಗಳು ಮುಂದುವರೆಸಲ್ಲ. ಗ್ಯಾರಂಟಿಗಳಿಂದ ರಾಜ್ಯ ದಿವಾಳಿಯಾಗುತ್ತದೆ ಎಂದು ಬಿಜೆಪಿಯವರು ಹೇಳಿದ್ದರು. ಅವರ ಯಾವ ಟೀಕೆಗಳಿಗೂ ನಾವ್ಯಾರೂ ವಿಚಲಿತರಾಗಲಿಲ್ಲ. ನಾವು ಅಧಿಕಾರ ಸ್ವೀಕರಿಸಿದ ದಿನದಂದೇ ತೀರ್ಮಾನಿಸಿದ್ದೇವೆ. ನಮ್ಮ ಗ್ಯಾರಂಟಿ ಜಾರಿ ಮಾಡಬೇಕು ಎಂದು ತೀರ್ಮಾನ ಮಾಡಿದ್ದೆವು. ನಾವು ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ ಎಂದು ಬಿಜೆಪಿ ವಿರುದ್ದ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಡಿಸಿಎಂ ಶಿವಕುಮಾರ್, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ತಯಾರಿ ನಡೆಸಿದ್ದೇವೆ. ನಾವು ಕೇವಲ ಇಂದು ಚುನಾವಣೆ ತಯಾರಿ ಮಾಡುತ್ತಿಲ್ಲ. ಸುರೇಶ್ ಅವರು ಗೆದ್ದ ಮೊದಲ ದಿನದಿಂದ ನಿತ್ಯ ಕೆಲಸ ಮಾಡಿಕೊಂಡೆ ಬಂದಿದ್ದಾರೆ. ಕೋವಿಡ್ ಸಮಯದಲ್ಲಿ ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ದೇಹವನ್ನು ಅವರ ತವರೂರಿಗೆ ತರಲು ಬಿಜೆಪಿ ಕೇಂದ್ರ ಸರ್ಕಾರ ಅವಕಾಶ ನೀಡಲಿಲ್ಲ.

ಆದರೆ, ಡಿ.ಕೆ. ಸುರೇಶ್ ಅವರು ಕೋವಿಡ್ ಕಷ್ಟಕಾಲದಲ್ಲಿ ರೈತರಿಂದ ಹಣ್ಣು ತರಕಾರಿ ಖರೀದಿ ಮಾಡಿ ಜನರಿಗೆ ಉಚಿತವಾಗಿ ಹಂಚಿದರು. ಜನರಿಗೆ ಮೆಡಿಕಲ್ ಕಿಟ್ ನೀಡಿ ಸಹಾಯ ಮಾಡಿದರು. ಸರ್ಕಾರ ಶವಗಳನ್ನು ಜೆಸಿಬಿಯಲ್ಲಿ ಎಸೆಯುತ್ತಿರುವಾಗ, ಕೋವಿಡ್ ನಿಂದ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಅವರ ಮನೆಯವರು ಮುಂದೆ ಬಾರದಿದ್ದಾಗ ಡಿ.ಕೆ ಸುರೇಶ್ ಪಿಪಿಇ ಕಿಟ್ ಧರಿಸಿ ಶವಗಳ ಅಂತ್ಯ ಸಂಸ್ಕಾರ ಮಾಡಿದರು. ಈ ಬಾರಿಯ ಚುನಾವಣೆಯಲ್ಲಿ ನಾವು ವಿಶೇಷವಾದ ತಯಾರಿ ಮಾಡುವ ಅಗತ್ಯವಿಲ್ಲ. ನಮ್ಮ ಪರವಾಗಿ ಜನರು, ಕಾರ್ಯಕರ್ತರು ಇದ್ದಾರೆ.

ದೇವೇಗೌಡರ ಕುಟುಂಬದ ವಿರುದ್ಧ ಹೋರಾಟ ಹೊಸದಲ್ಲ:ಬಿಜೆಪಿ ಹಾಗೂ ಜೆಡಿಎಸ್ ಸೇರಿ ಒಬ್ಬ ಅಭ್ಯರ್ಥಿ ಕಣಕ್ಕಿಳಿಸಿರುವ ನಾವು ದೇವೇಗೌಡರ ಕುಟುಂಬದ ವಿರುದ್ಧ ಅನೇಕ ಚುನಾವಣೆಗಳನ್ನು ಮಾಡಿದ್ದೇವೆ. ದೇವೇಗೌಡರ ವಿರುದ್ಧ ಒಬ್ಬ ಮಹಿಳೆಯನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ನಾನು ಕುಮಾರಸ್ವಾಮಿ ಅವರ ವಿರುದ್ಧ ಸ್ಪರ್ಧಿಸಿ ಗೆದ್ದಿದ್ದೇನೆ. 2013ರ ಉಪಚುನಾವಣೆಯಲ್ಲಿ ಇದೇ ರೀತಿ ಜೆಡಿಎಸ್ ಹಾಗೂ ಬಿಜೆಪಿ ಸೇರಿ ಅನಿತಾ ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಿದಾಗ ಸುರೇಶ್ ಅವರು ಗೆದ್ದಿದ್ದರು. ಆಗ ಸಿದ್ದರಾಮಯ್ಯ ಅವರ ಸರ್ಕಾರ ಇದ್ದರೂ ನಾನು ಸಚಿವನಾಗಿರಲಿಲ್ಲ. ಆಗ ನನಗೆ ದೊಡ್ಡ ಸವಾಲಾಗಿತ್ತು. ಆಗಲೂ ನಾವು ಸಹೋದರಿ ಅನಿತಾ ಕುಮಾರಸ್ವಾಮಿ ಅವರನ್ನು 1.30 ಲಕ್ಷ ಮತಗಳಿಂದ ಮಣಿಸಿದೆವು. ನಂತರ ಜನ ಸುರೇಶ್ ಅವರನ್ನು ಸತತವಾಗಿ ಗೆಲ್ಲಿಸಿಕೊಂಡು ಬಂದಿದ್ದಾರೆ ಎಂದು ತಿಳಿಸಿದರು.

ರಾಜ್ಯ ಕಾಂಗ್ರೆಸ್​ ನಾಯಕರು

ಈ ಚುನಾವಣೆಯ ಸ್ಟಾರ್ ಪ್ರಚಾರಕರಾಗಿ ಎಐಸಿಸಿ ಅಧ್ಯಕ್ಷರು ನಮ್ಮವರೇ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆ ಆಗಮಿಸುವಂತೆ ಮನವಿ ಮಾಡಿದ್ದೇವೆ. ಅವರು ಇಡೀ ದೇಶದಲ್ಲಿ ಪ್ರಚಾರ ಮಾಡಬೇಕಿದ್ದು, ಅವರಿಂದ ರಾಜ್ಯದಲ್ಲಿ ಹೆಚ್ಚು ದಿನಗಳ ಪ್ರಚಾರ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದರು.

ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಿಂದ ಮರು ಆಯ್ಕೆ ಬಯಸಿರುವ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ ಸುರೇಶ್ ನಾಮಪತ್ರ ಸಲ್ಲಿಸಿದ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್, ಪಿ ಜಿ ಆರ್ ಸಿಂಧ್ಯ, ಡಿ.ಕೆ ಸುರೇಶ್ ಅವರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಸಚಿವರಾದ ರಾಮಲಿಂಗಾರೆಡ್ಡಿ, ಮಾಂಕಾಳ್ ವೈದ್ಯ, ಶಾಸಕರಾದ ರಾಮನಗರದ ಇಕ್ಬಾಲ್ ಹುಸೇನ್, ಮಾಗಡಿ ಹೆಚ್.ಸಿ ಬಾಲಕೃಷ್ಣ, ಆನೇಕಲ್ ಶಿವಣ್ಣ, ಕುಣಿಗಲ್ ಡಾ. ರಂಗನಾಥ್, ಕೊತ್ತನೂರು ಮಂಜುನಾಥ್, ಎಂಎಲ್​ಸಿ ಎಸ್ ರವಿ, ಡಿಸಿಸಿ ಅಧ್ಯಕ್ಷ ಗಂಗಾಧರ್ ಉಪಸ್ಥಿತರಿದ್ದರು.

ಇದನ್ನೂ ಓದಿ :ಬಿಜೆಪಿ ಸರ್ಕಾರದ ವಿರುದ್ಧ ಅಪಪ್ರಚಾರ ಆರೋಪ: ಸಿಎಂ, ಡಿಸಿಎಂಗೆ ಸಮನ್ಸ್​ ಜಾರಿ ಮಾಡಿದ ಕೋರ್ಟ್​​ - Court summons to CM and DCM

ABOUT THE AUTHOR

...view details